ADVERTISEMENT

4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಬಂಡೋಡಿ ಮೋಹನ್ ಸೆರೆಗೆ ದಟ್ಟಡವಿಯಲ್ಲಿ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:17 IST
Last Updated 22 ಜುಲೈ 2019, 20:17 IST
ಅಭಯಾರಣ್ಯದಲ್ಲಿ ವಾಸಿಸಲು ಆರೋಪಿ ಹಾಕಿಕೊಂಡಿದ್ದ ಶೆಡ್
ಅಭಯಾರಣ್ಯದಲ್ಲಿ ವಾಸಿಸಲು ಆರೋಪಿ ಹಾಕಿಕೊಂಡಿದ್ದ ಶೆಡ್   

ಹೊಸನಗರ: ನಾಲ್ಕು ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಕೊಲೆ ಆರೋಪಿ ಬಂಡೋಡಿ ಮೋಹನ್ ಸೆರೆ ಆಗಿದ್ದಾನೆ. ನಾಲ್ಕು ವರ್ಷಗಳ ಹಿಂದೆ ಇಬ್ಬರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಬಂಧಿಸುವಲ್ಲಿ ನಗರ ಠಾಣೆಯ ಪ್ರಭಾರ ಪಿಎಸ್ಐ ಸೂರಪ್ಪ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.

ನಾಲ್ಕು ವರ್ಷಗಳ ಹಿಂದಿನ ಹಲ್ಲೆ ಪ್ರಕರಣದ ವಿಚಾರಣೆ ಶಿವಮೊಗ್ಗ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಜುಲೈ 22ರೊಳಗೆ ಆರೋಪಿ ಬಂಡೋಡಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಕೋರ್ಟ್‌ ಆದೇಶಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಪಿಎಸ್ಐ ಸೂರಪ್ಪ ನೇತೃತ್ವದ ಪೊಲೀಸರ ತಂಡ ಬಂಡೋಡಿಯ ದಟ್ಟಡವಿಯಲ್ಲಿ ಅಡಗಿದ್ದ ಆರೋಪಿ ಬಂಡೋಡಿ ಮೋಹನನನ್ನು ಸೋಮವಾರ ಬಂಧಿಸಿದೆ.

ಏನಿದು ಪ್ರಕರಣ?:

ADVERTISEMENT

ಹಣದ ವ್ಯವಹಾರಕ್ಕೆ ಸಂಬಂಧಿಸಿ ಆರೋಪಿ ಬಂಡೋಡಿ ಮೋಹನ್ ಮತ್ತು ಆತನ ಮಗ ಚಂದ್ರಶೇಖರ್ ಅಲಿಯಾಸ್ ಚಂದ್ರ, ಮೀಸೆ ನಾರಾಯಣಪ್ಪ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ಮತ್ತು ಜಾತಿನಿಂದನೆ ಮಾಡಿದ ಸಂಬಂಧ 2015 ಜನವರಿ 1ರಂದು ಪ್ರಕರಣ ದಾಖಲಾಗಿತ್ತು.

ಆ ಸಂದರ್ಭದಲ್ಲಿ ನಗರ ಠಾಣೆ ಪಿಎಸ್ಐ ಸತೀಶ್ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಗಳಿಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆದರೆ ತೀರ್ಥಹಳ್ಳಿ ತಾಲ್ಲೂಕಿನ ಹಿಷಣ ಧರ್ಮೇಗೌಡ ಎಂಬುವವರನ್ನು ಪುಸಲಾಯಿಸಿದ ಅರೋಪಿಗಳು, ಅವರಿಂದ ಜಾಮೀನು ಪಡೆದಿದ್ದರು.

ಜಾಮೀನಿನ ಮೇಲೆ ಬಿಡುಗಡೆಗೊಂಡ ಇಬ್ಬರನ್ನು ಧರ್ಮೇಗೌಡರು ಮನೆಗೆ ಕರೆದುಕೊಂಡು ಹೋಗಲು ಬಂದ ವೇಳೆ ಆರೋಪಿ ಮೋಹನ್ ಮತ್ತು ಚಂದ್ರಶೇಖರ್ ಪರಾರಿಯಾಗಿದ್ದರು.

ಪಿಎಸ್ಐ ಸತೀಶ ನೇತೃತ್ವದ ತಂಡ ಮತ್ತೆ ದಾಳಿ ನಡೆಸಿದ ವೇಳೆ ಆರೋಪಿ ಮೋಹನ್ ಕತ್ತಿ ಬೀಸಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಆದರೆ ಆತನ ಮಗ ಚಂದ್ರಶೇಖರ್ ಸಿಕ್ಕಿಬಿದ್ದಿದ್ದ. ಆತ ಸದ್ಯ ಜೈಲಿನಲ್ಲಿದ್ದಾನೆ.

ಕಾಡಿನಲ್ಲಿ ಬಿಡಾರ:

ಜುಲೈ 22ರೊಳಗೆ ಆರೋಪಿ ಮೋಹನ್‌ನನ್ನು ಬಂಧಿಸಬೇಕು ಎಂದು ಶಿವಮೊಗ್ಗ ಸೆಷನ್ಸ್ ನ್ಯಾಯಾಲಯ ಗಡುವು ವಿಧಿಸಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ನಗರ ಠಾಣೆಯ ಪ್ರಭಾರ ಪಿಎಸ್ಐ ಸೂರಪ್ಪ, ಎಎಸ್ಐ ಶ್ರೀಪಾದ್, ಉದಯಕುಮಾರ್, ಗಂಗಪ್ಪ
ಬಟೋಳಿ, ಗಂಗಪ್ಪ ತುಂಗಳ್, ರಮೇಶ ನೇತೃತ್ವದ ತಂಡ ಖಚಿತ ಮಾಹಿತಿ ಮೇಲೆ ರಾತ್ರಿ ವೇಳೆ ಬಂಡೋಡಿಯ ದಟ್ಟಡವಿಯಲ್ಲಿ ಕಾರ್ಯಾಚರಣೆ ಕೈಗೊಂಡಿತು.

ವಿಪರೀತ ಮಳೆ, ಇಂಬಳದ ರಾಶಿ, ದುರ್ಗಮ ಹಾದಿ, ಮುಳುಗಡೆ ಹಿನ್ನೀರಿನ ನಡುವಿನ ಕಾಡಿನಲ್ಲಿ ಶೋಧಕಾರ್ಯ ನಡೆಸಿತು. ಕಾಡಿನ ಶೆಡ್‌ನಲ್ಲಿ ವಾಸವಿದ್ದ ಮೋಹನ್‌ನನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಸೋಮವಾರ ಹಾಜರು ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.