
ಸಾಗರ: ಸಹಕಾರಿ ಕ್ಷೇತ್ರವು ಗ್ರಾಮೀಣ ಭಾಗದ ಆರ್ಥಿಕ ಚೈತನ್ಯದ ಹಿಂದಿರುವ ಶಕ್ತಿಯಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ಪವಿತ್ರ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆಯು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರಿಗೆ ಬುಧವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರ ಎಂಬದು ರೈತರ ಪಾಲಿಗೆ ಜೀವನಾಡಿ ಇದ್ದಂತೆ. ಇದೊಂದು ಪವಿತ್ರ ಕ್ಷೇತ್ರವಾಗಿದ್ದು ಹಣ ಮಾಡುವ ಉದ್ದೇಶ ಇರುವವರು ಇಲ್ಲಿಗೆ ಪ್ರವೇಶ ಮಾಡದಿರುವುದೇ ಒಳ್ಳೆಯದು. ಸೇವಾ ಮನೋಭಾವವೇ ಈ ಕ್ಷೇತ್ರದಲ್ಲಿನ ಯಶಸ್ಸಿನ ಮಂತ್ರವಾಗಿದೆ ಎಂದರು.
ತಾಲ್ಲೂಕಿನಲ್ಲಿ ಸಹಕಾರಿ ಕ್ಷೇತ್ರಕ್ಕೆ ಒಳ್ಳೆಯ ಹೆಸರು ಇದೆ. ಇಲ್ಲಿನ ಬಹುತೇಕ ಸಹಕಾರ ಸಂಘಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ. ಆದರೆ ಕಲ್ಮನೆ ಗ್ರಾಮದ ಸಹಕಾರ ಸಂಘದಲ್ಲಿ ನಡೆದಿರುವ ಅವ್ಯವಹಾರ ಈ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ತಂದಿದೆ. ಅದನ್ನು ಸರಿದಾರಿಗೆ ತರುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹನುಮಂತಪ್ಪ ಸಿ. ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಮೃತೇಶ್ವರ ಬಿ.ಎನ್. ಸತೀಶ್ ಕುಮಾರ್ ಎಚ್.ಎಸ್. ಇದ್ದರು. ಸುನಂದಾ ಪ್ರಾರ್ಥಿಸಿದರು. ಯಶವಂತಕುಮಾರ್ ಎಚ್. ಸ್ವಾಗತಿಸಿದರು. ದಿನೇಶ್ ಕುಮಾರ್ ಬರದವಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾರುತಿ ಎಚ್.ಎಚ್. ವಂದಿಸಿದರು. ಸಂತೋಷ್ ಕುಮಾರ್ ಆರ್. ನಿರೂಪಿಸಿದರು.
ಮಟ್ಕಾ ವಿರುದ್ಧ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ: ಬೇಳೂರು
‘ಗಾಂಜಾ ಅಕ್ರಮ ಮದ್ಯ ಮಾರಾಟ ಹಾವಳಿ ವಿರುದ್ಧ ಇಲ್ಲಿನ ಬಿಜೆಪಿ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ. ಆದರೆ ಮಟ್ಕಾ ಜೂಜಿನ ವಿರುದ್ಧ ಅವರು ಯಾಕೆ ಮಾತನಾಡುತ್ತಿಲ್ಲ. ಈ ದಂಧೆ ನಡೆಸುವವರು ಪಕ್ಷದ ಪ್ರಮುಖ ಸ್ಥಾನದಲ್ಲಿದ್ದಾರೆ ಎಂಬುದು ಇದಕ್ಕೆ ಕಾರಣವೇ’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು. ಕಳೆದ ಜಾತ್ರೆಯಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ಜಾಗ ಅತ್ಯಂತ ಕಡಿಮೆ ಮೊತ್ತಕ್ಕೆ ಹರಾಜಾಗುವಂತೆ ನೋಡಿಕೊಂಡು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಿಂದಿನ ಶಾಸಕ ಹರತಾಳು ಹಾಲಪ್ಪ ಲಾಭ ಮಾಡಿಕೊಟ್ಟಿದ್ದಾರೆ. ಈ ವರ್ಷ ಅದಕ್ಕೆ ಅವಕಾಶ ಕೊಟ್ಟಿಲ್ಲ. ಸಿಗಂದೂರು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಪ್ರಯತ್ನದಲ್ಲೂ ಹಾಲಪ್ಪ ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.