ADVERTISEMENT

320 ಬಸ್‌ ಸಂಚಾರ ಸ್ಥಗಿತ

ಎರಡು ದಿನಗಳಲ್ಲಿ ಕೆಎಸ್‌ಆರ್‌ಟಿಸಿಗೆ ₹ 82 ಲಕ್ಷ ನಷ್ಟ

ಅರ್ಚನಾ ಎಂ.
Published 24 ಮಾರ್ಚ್ 2020, 12:39 IST
Last Updated 24 ಮಾರ್ಚ್ 2020, 12:39 IST
ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ.
ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿರುವ ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ.   

ಶಿವಮೊಗ್ಗ: ಕೋವಿಡ್-19 ರೋಗ ಹರಡುವಿಕೆಯನ್ನು ನಿಯಂತ್ರಿಸಲು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ 320 ಬಸ್‌ಗಳು ಎರಡು ದಿನಗಳು ರಸ್ತೆಗಿಳಿಯದೇ ₹ 82 ಲಕ್ಷ ನಷ್ಟ ಅನುಭವಿಸಿದ್ದು, ಇದು ಇನ್ನೂ ಮುಂದುವರಿಯುವ ಸಾಧ್ಯತೆಯಿದೆ.

ಶಿವಮೊಗ್ಗ, ಸಾಗರ, ಭದ್ರಾವತಿ ಮತ್ತು ಹೊನ್ನಾಳಿಯ ನಾಲ್ಕು ಡಿಪೊಗಳನ್ನು ಒಳಗೊಂಡಿರುವ ಶಿವಮೊಗ್ಗ ಕೆಎಸ್‌ಆರ್‌ಟಿಸಿ ವಿಭಾಗದ 320 ಬಸ್‌ಗಳಲ್ಲಿ 70 ಬಸ್‌ಗಳು ಶಿವಮೊಗ್ಗ ಮತ್ತು ಬೆಂಗಳೂರು ನಡುವೆ ಸಂಚರಿಸುತ್ತವೆ.

ಮೈಸೂರು ಮಾರ್ಗಕ್ಕೆ 10 ಬಸ್‌ಗಳು, 15 ಬಸ್‌ಗಳು ಹರಿಹರ-ದಾವಣಗೆರೆ ಮಾರ್ಗಕ್ಕೆ, 3 ಬಸ್‌ಗಳು ಹೊಸಪೇಟೆಗೆ, ಶಿಕಾರಿಪುರ ಮೂಲಕ 4 ಬಸ್‌ಗಳು ಹುಬ್ಬಾಲಿ, ಹಾನಗಲ್ ಮಾರ್ಗಕ್ಕೆ, ಮಡಿಕೇರಿಗೆ 2, ಸದಲಗಾಕ್ಕೆ 3, ಶೃಂಗೇರಿಗೆ 8 ಬಸ್‌ಗಳು, ಚಿತ್ರದುರ್ಗಕ್ಕೆ 12 ಸಂಚರಿಸುತ್ತವೆ.

ADVERTISEMENT

ಅಂತರರಾಜ್ಯ ಪಣಜಿ (ಗೋವಾ) 6 ಬಸ್‌ಗಳು, ಪುಣೆ (ಮಹಾರಾಷ್ಟ್ರ) 4, ಬೆಳಗಾವಿ ಮೂಲಕ 4 ಬಸ್‌ಗಳು ಕೊಲ್ಹಾಪುರಕ್ಕೆ, ತಿರುವಣ್ಣಾಮಲೈಗೆ (ತಮಿಳುನಾಡು) 6 ಬಸ್‌ಗಳು, ಕೊಯ್‌ಮತ್ತೂರ್‌ಗೆ 4, ಊಟಿಗೆ 2 ಬಸ್‌ಗಳು, ಚೆನ್ನೈಗೆ 4, ತಿರುಪತಿಗೆ 2, ಹೈದರಾಬಾದ್‌ಗೆ 4 ಬಸ್‌ಗಳು ಸಂಚರಿಸುತ್ತಿದ್ದವು. ಆದರೆ, ಈ ಎಲ್ಲ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು.

ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಬಸ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜನರು ಮನೆಯಲ್ಲಿ ಉಳಿಯಲು ಆದ್ಯತೆ ನೀಡಿರುವುದರಿಂದ ಮತ್ತು ಶಾಲೆ ಮತ್ತು ಕಾಲೇಜುಗಳಿಗೆ ರಜೆ ಇರುವುದರಿಂದ ಜನರು ಹೆಚ್ಚಿನ ಅನನುಕೂಲತೆಯನ್ನು ಎದುರಿಸುತ್ತಿಲ್ಲ. ನಿಯಮಿತ ಪ್ರಯಾಣಿಕರು ಖಾಸಗಿ ವಾಹನಗಳನ್ನು ಅವಲಂಬಿಸುತ್ತಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಂಚಾರ ಅಧಿಕಾರಿ ಸತೀಶ್ ತಿಳಿಸಿದರು.

ಕೋವಿಡ್ -19 ಸಕಾರಾತ್ಮಕ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಪ್ರಕರಣಗಳ ಸಂಖ್ಯೆ ಕಡಿಮೆಯಾದರೆ, ಶೀಘ್ರದಲ್ಲೇ ಬಸ್ ಸೇವೆ ಆರಂಭಿಸಬಹುದು. ಆದರೆ, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಅದನ್ನು ಸ್ಥಗಿತಗೊಳಿಸಲಾಗಿದೆ. ಮಂಗಳವಾರವೂ ಬಸ್‌ ಸಂಚಾರ ಆರಂಭವಾಗುವ ಸಾಧ್ಯತೆ ತುಂಬಾ ಕಡಿಮೆ ಇದೆ ಎನ್ನುತ್ತಾರೆ ಅವರು.

ರಾಜ್ಯದ ವಿವಿಧ ಭಾಗಗಳಿಂದ ಶಿವಮೊಗ್ಗಕ್ಕೆ ಬರುವವರು ತೀರ್ಥಹಳ್ಳಿ, ಸಾಗರ, ಹೊಸನಗರ ಮತ್ತು ಇತರ ತಾಲ್ಲೂಕುಗಳನ್ನು ತಲುಪಲು ಖಾಸಗಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಆದರೆ, ಅಲ್ಲಿ ಥರ್ಮಲ್ ಸ್ಕ್ರೀನಿಂಗ್ಘಟಕವನ್ನು ಸ್ಥಾಪಿಸಿಲ್ಲ. ಕೆಎಸ್‌ಆರ್‌ಟಿಸಿ ಬಸ್ ಟರ್ಮಿನಲ್‌ನಲ್ಲಿ ಮಾತ್ರ ಸ್ಥಾಪಿಸಲಾಗಿದೆ. ಹಾಗಾಗಿ ಖಾಸಗಿ ಬಸ್‌ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಘಟಕ ಸ್ಥಾಪಿಸಬೇಕು.

ಜಿಲ್ಲೆಯ 1,200 ಖಾಸಗಿ ಬಸ್‌ಗಳಲ್ಲಿ ಸೋಮವಾರ ಸುಮಾರು 400 ಬಸ್‌ಗಳು ಸಂಚರಿಸಿದವು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ನಮ್ಮ ಜೀವನೋಪಾಯಕ್ಕಾಗಿ ನಾವು ಬಸ್‌ಗಳನ್ನು ಓಡಿಸಲೇಬೇಕು ಎಂಬುದು ಶಿವಮೊಗ್ಗ ಜಿಲ್ಲಾ ಖಾಸಗಿ ಬಸ್ ಚಾಲಕರು ಮತ್ತು ನಿರ್ವಾಹಕ ಸಂಘದ ಅಧ್ಯಕ್ಷ ಆನಂದ್ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.