ADVERTISEMENT

ಕೊರೊನಾ: ಸಂಕಷ್ಟಕ್ಕೆ ಸಿಲುಕಿದ ಹಾಲು ಉತ್ಪಾದಕರು

​ಪ್ರಜಾವಾಣಿ ವಾರ್ತೆ
Published 4 ಜೂನ್ 2021, 4:32 IST
Last Updated 4 ಜೂನ್ 2021, 4:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತ್ಯಾಗರ್ತಿ: ಜಿಲ್ಲೆಯಲ್ಲಿ ಹಾಲು ಒಕ್ಕೂಟಗಳು ಲಾಭದತ್ತ ಸಾಗುತ್ತಿದ್ದರೂ ಕೊರೊನಾ ಸಂಕಷ್ಟದಿಂದಾಗಿ ಪಶುಸಂಗೋಪನೆ ಮಾಡುವ ರೈತ ಮಾತ್ರ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ.

ಹಾಲು ಉತ್ಪಾದಕರ ಕುಟುಂಬದ ಯಾವುದೇ ಸದಸ್ಯರಿಗೆ ಕೊರೊನಾ ಕಾಣಿಸಿಕೊಂಡರೆ ಆ ಕುಟುಂಬದವರು ನೀಡಿದ ಹಾಲನ್ನು ಹಾಲು ಉತ್ಪಾದಕ ಸಹಕಾರ ಸಂಘಗಗಳು ನಿರಾಕರಿಸುತ್ತಿದ್ದು, ಇದರಿಂದಾಗಿ ಉತ್ಪಾದಕರು ಹಾಲು ಮಾರಾಟ ಮಾಡುವುದು ಕಟ್ಟವಾಗಿದೆ.

‘ಸೋಂಕು ಕಾಣಿಸಿಕೊಂಡ ಕುಟುಂಬಗಳ ಹಾಲನ್ನು ತೆಗೆದುಕೊಳ್ಳಬೇಡಿ’ ಎಂದು ಸಾಗರ ತಾಲ್ಲೂಕು ವಿಸ್ತರಣಾಧಿಕಾರಿ ಮೌಖಿಕ ಆದೇಶ ನೀಡಿದ್ದು, ಇದರಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ.

ADVERTISEMENT

‘ಸೋಂಕಿತ ವ್ಯಕ್ತಿಯು ಜಾನುವಾರು ಹಾಲು ಕರೆದು ಸಂಘಕ್ಕೆ ನೀಡಲು ಸಾಧ್ಯವೇ ಎಂಬುದನ್ನು ಯೋಚಿಸದೇ ಹಾಲನ್ನು ನಿರಾಕರಿಸುತ್ತಿರುವುದು ಎಷ್ಟು ಸಮಂಜಸ’ ಎಂದು ರೈತರು ಪ್ರಶ್ನಿಸುತ್ತಾರೆ.

‘ಪ್ರತಿದಿನ 20 ಲೀಟರ್ ಹಾಲು ನೀಡುವ ಹಸುವಿಗೆ ಕನಿಷ್ಠ 4 ಕೆ.ಜಿ ಪೌಷ್ಟಿಕ ಆಹಾರ ಹಾಗೂ ರಸಮೇವು ನೀಡಬೇಕಾಗುತ್ತದೆ. ಇದರಿಂದಾಗಿ ದಿನಕ್ಕೆ ₹150ರಿಂದ ₹200 ಖರ್ಚು ಬರುತ್ತಿದೆ. ಹಸು ಖರೀದಿಸಲು ಮಾಡಿದ ಸಾಲವನ್ನು ತೀರಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಉತ್ಪಾದಕರನ್ನು ರಕ್ಷಿಸಲು ಒಕ್ಕೂಟಗಳು ರೈತರಿಗೆ ಸಹಾಯಹಸ್ತ ಚಾಚಬೇಕು. ಇಲ್ಲವೇ ಕೊರೊನಾ ಸೋಂಕಿತರ ಮನೆಯ ಹಾಲನ್ನು ಬೇರೆಯವರಿಂದ ಕರೆಯಿಸಿ ಖರೀದಿಸಬೇಕು’ ಎಂಬುದು ಹಾಲು ಉತ್ಪಾದಕರ ಅಭಿಪ್ರಾಯ.

‘ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಯೊಂದಿಗೆ ಹೈನುಗಾರಿಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ದಿನಕ್ಕೆ ನೂರಾರು ಲೀಟರ್ ಹಾಲು ನೀಡುವ ರೈತನ ಸ್ಥಿತಿ ಗಂಭೀರವಾಗಿದೆ. ವಿಸ್ತರಣಾಧಿಕಾರಿಗಳ ಮೌಖಿಕ ಆದೇಶವು ಸಂಘಕ್ಕೆ ನುಂಗಲಾರದ ತುತ್ತಾಗಿದ್ದು, ರೈತರು ಹಸುವನ್ನು ಸಾಕಲು ಆಗದೇ ಹಸುವನ್ನು ಮಾರಲೂ ಆಗದೇ ಪರಿತಪಿಸುವಂತಾಗಿದೆ’ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.