ADVERTISEMENT

ಶಿವಮೊಗ್ಗ | ಮತ್ತೆ ಮೂವರಿಗೆ ಕೊರೊನಾ; 12ಕ್ಕೇರಿದ ಕೋವಿಡ್

ಹೊಸನಗರ ತಾಲ್ಲೂಕಿನ ತಂದೆ–ಮಗಳು, ಸಾಗರದ ಮಹಿಳೆಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 16 ಮೇ 2020, 17:49 IST
Last Updated 16 ಮೇ 2020, 17:49 IST

ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ಒಂದು ವಾರದ ಅವಧಿಯಲ್ಲೇ ಸೋಂಕಿತರ ಸಂಖ್ಯೆ 12ಕ್ಕೇರಿದೆ.

ಹೊಸನಗರ ತಾಲ್ಲೂಕಿನ 42 ವರ್ಷದ ತಂದೆ (ಪಿ–1089)– ನಾಲ್ಕು ವರ್ಷದ ಮಗಳು (ಪಿ–1089), ಸಾಗರ ತಾಲ್ಲೂಕಿನ 38 ವರ್ಷದ ಗರ್ಭಿಣಿಯಲ್ಲಿ(ಪಿ–1088) ಸೋಂಕು ಇರುವುದು ಶನಿವಾರ ದೃಢಪಟ್ಟಿದೆ.

ರಿಪ್ಪನ್‌ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಾಳದಿಂಬದ 5,ಬಾಳೂರಿನ6 ಜನರು ಸೇರಿ ಒಟ್ಟು 11 ಜನರು ಮೇ 14ರಂದು ಒಂದೇ ವಾಹನದಲ್ಲಿ ಮುಂಬೈನಿಂದ ಹುಬ್ಬಳ್ಳಿ, ಹರಿಹರ ಮಾರ್ಗವಾಗಿ ಜಿಲ್ಲೆಗೆ ಬಂದಿದ್ದರು. ಎಲ್ಲರನ್ನೂ ವಡಗೆರೆ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಈ ಕುಟುಂಬಗಳು ಅಲ್ಲಿನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದವು. ಎಲ್ಲರ ಗಂಟಲು ದ್ರವದ ಮಾದರಿ ತಪಾಸಣೆಗೆ ಕಳುಹಿಸಲಾಗಿತ್ತು. ಅವರಲ್ಲಿ ತಂದೆ, ಮಗಳಿಗೆ ವೈರಸ್‌ ಇರುವುದು ದೃಢಪಟ್ಟಿದೆ. ಅವರನ್ನುತಪಾಸಣೆ ಮಾಡಿದ, ಶಾಲೆಗೆ ಬಿಟ್ಟಸಿಬ್ಬಂದಿಯನ್ನೂ 14 ದಿನಗಳ ಕ್ವಾರಂಟೈನ್‌ ಮಾಡಲಾಗಿದೆ. ಉಳಿದವರ ಮೇಲೆ ನಿಗಾ ಮುಂದುವರಿಸಲಾಗಿದೆ.

ADVERTISEMENT

ಸಾಗರದ ಮೊದಲ ಪ್ರಕರಣ:ಸಾಗರದ ಜೆಪಿ ನಗರದ ಮಹಿಳೆಯೂ ಮೇ 14ರಂದು ಮುಂಬೈನಿಂದ ಸಾಗರಕ್ಕೆ ಬಂದಿದ್ದರು. ಬಂದ ತಕ್ಷಣ ಅವರನ್ನು ಸಾಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿ, ವರದಳ್ಳಿ ರಸ್ತೆಯ ಬಿಸಿಎಂ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು. ಗರ್ಭಿಣಿಯಾಗಿದ್ದ ಕಾರಣ ಹಾಸ್ಟೆಲ್‌ ಕ್ವಾರಂಟೈನ್ ಬೇಡ ಎಂದು ಆ ಮಹಿಳೆ ಗಲಾಟೆ ಮಾಡಿದ್ದರು. ವರದಿ ನೆಗೆಟಿವ್ ಬಂದರೆ ಮನೆಗೆ ಕಳಹಿಸುವ ಭರವಸೆ ದೊರೆತ ನಂತರ ಹಾಸ್ಟೆಲ್‌ಗೆ ಹೋಗಲು ಒಪ್ಪಿದ್ದರು.

ಈಗ ಅವರನ್ನು ತಪಾಸಣೆ ನಡೆಸಿದ ಡಾ.ಗಜೇಂದ್ರ ಹಾಗೂ ಸಿಬ್ಬಂದಿಯನ್ನೂ ಕ್ವಾರಂಟೈನ್‌ ಮಾಡಲಾಗಿದೆ ಎಂದು ಆಸ್ಪತ್ರೆಯ ಸರ್ಜನ್ ಡಾ.ಪ್ರಕಾಶ್ ಬೋಸ್ಲೆ ಮಾಹಿತಿ ನೀಡಿದರು.

ವೈರಸ್‌ ಪತ್ತೆಯಾದ ಎಲ್ಲರನ್ನೂ ಕ್ವಾರಂಟೈನ್ ಪ್ರದೇಶದಿಂದ ಆಂಬುಲೆನ್ಸ್‌ಗಳಲ್ಲಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

ಇದೇ ಮೊದಲು ಮಹಿಳೆ, ಮಗುವಿಗೆ ವೈರಸ್‌:ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಮಹಿಳೆ ಹಾಗೂ ಮಗುವಿನಲ್ಲಿ ವೈರಸ್‌ ಪತ್ತೆಯಾಗಿದೆ. ಗುರುರಾತ್‌ನ ಅಹಮದಾಬಾದ್‌ನಿಂದ ಮೇ 10ರಂದು ಬಂದಿದ್ದ 8 ಜನ ಪುರುಷರಲ್ಲಿ ಮೊದಲ ಬಾರಿ ವೈರಸ್‌ ಪತ್ತೆಯಾಗಿತ್ತು. ಮೇ 15ರಂದು ತೀರ್ಥಹಳ್ಳಿ ತಾಲ್ಲೂಕಿನ ಪುರುಷನಲ್ಲಿ ಕಂಡುಬಂದಿತ್ತು. ಇದೇ ಮೊದಲ ಬಾರಿ ಮಗು ಹಾಗೂ ಮಹಿಳೆಯಲ್ಲಿ ವೈರಸ್‌ ಕಾಣಿಸಿಕೊಂಡಿದೆ.

ಶಿವಮೊಗ್ಗ ನಗರ ಸುರಕ್ಷಾ:ಇದುವರೆಗೂ ಜಿಲ್ಲೆಯ ಒಳಗೆ ವೈರಸ್‌ ಹಬ್ಬಿಲ್ಲ. ಇದುವರೆಗೂ ವೈರಸ್‌ ಸೋಂಕು ಕಂಡುಬಂದ ಎಲ್ಲರೂ ಗುಜರಾತ್, ಮಹಾರಾಷ್ಟ್ರದಿಂದ ಬಂದವರು. ಶಿವಮೊಗ್ಗ ನಗರ ಇಲ್ಲಿಯವರೆಗೂ ಸುರಕ್ಷವಾಗಿದೆ. ನಿರ್ಬಂಧಗಳನ್ನು ಸಡಿಲಿಸಿದ್ದರೂ ಮುಂಜಾಗ್ರತಾ ಕ್ರಮಕ್ಕೆ ಒತ್ತು ನೀಡಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.