ADVERTISEMENT

ಕೊಳೇಗೇರಿ ಪ್ರದೇಶದ ಮನೆಗಳ ನಿರ್ಮಾಣಕ್ಕೆ ಗ್ರಹಣ

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 12:52 IST
Last Updated 14 ಫೆಬ್ರುವರಿ 2020, 12:52 IST
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಸದಸ್ಯ ಎಚ್‌.ಸಿ.ಯೋಗೇಶ್, ಯಮುನಾ ರಂಗೇಗೌಡ ಅವರು ಮೇಯರ್ ಮುಂದಿನ ಬಾವಿಗಳಿದು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಸದಸ್ಯ ಎಚ್‌.ಸಿ.ಯೋಗೇಶ್, ಯಮುನಾ ರಂಗೇಗೌಡ ಅವರು ಮೇಯರ್ ಮುಂದಿನ ಬಾವಿಗಳಿದು ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಕೊಳೆಗೇರಿಗಳಲ್ಲಿ ಮನೆ ನಿರ್ಮಾಣ ಕಾರ್ಯ ಆರಂಭವಾಗಿ ಎರಡು ವರ್ಷ ಕಳೆದರೂ ಪೂರ್ಣಗೊಂಡಿಲ್ಲ. ಕೊಳೆಗೇರಿ ನಿವಾಸಿಗಳು ಬಾಡಿಗೆ ಮನೆಯಲ್ಲೇ ದಿನ ದೂಡುತ್ತಿದ್ದಾರೆ. ಕೂಲಿ ಕೆಲಸ ಮಾಡುವ ಆ ಜನರು ಪ್ರತಿ ತಿಂಗಳು ಬಾಡಿಗೆ ಕೊಡಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ.

ನಗರ ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಮೇಶ್ ಹೆಗ್ಡೆ, ಸದಸ್ಯ ಎಚ್‌.ಸಿ.ಯೋಗೇಶ್, ಯಮುನಾ ರಂಗೇಗೌಡ ಮತ್ತಿತರರುಕೊಳೆಗೇರಿ ನಿವಾಸಿಗಳ ಸಂಕಷ್ಟ ತೆರೆದಿಟ್ಟರು.

ಜನವರಿ 2018ರಲ್ಲೇ 398 ಮನೆಗಳ ನಿರ್ಮಾಣಕ್ಕೆ ಪಾಲಿಕೆ ಕೆಲಸ ಆರಂಭಿಸುವ ಆದೇಶ ನೀಡಿತ್ತು. ಕೊಳಚೆ ನಿರ್ಮೂಲನಾ ಮಂಡಳಿ ಇದುವರೆಗೂ ಕೆಲಸ ಪೂರ್ಣಗೊಳಿಸಿಲ್ಲ. ಅತ್ತ ಗುಡಿಸಲೂ ಇಲ್ಲ. ಇತ್ತ ಆರ್‌ಸಿಸಿ ಮನೆಯೂ ಸಿಗಲಿಲ್ಲ. ಅಂತಹ ತ್ರಿಶಂಕು ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದಾರೆ ಎಂದು ದೂರಿದರು.

ADVERTISEMENT

2018ರಲ್ಲಿ ಕೆಲಸದ ಆದೇಶ ನೀಡಿದ್ದರೂ, ಪ್ರಕ್ರಿಯೆಗಳು ಪೂರ್ಣಗೊಂಡು ಕೆಲಸ ಆರಂಭವಾಗಿದ್ದು 2019 ಜನವರಿಯಲ್ಲಿ. ಪ್ರತಿ ಮನೆಗೂ ₹4,91,140 ಬಜೆಟ್ ನಿಗದಿ ಮಾಡಲಾಗಿತ್ತು. ಅದರಲ್ಲಿ ಕೇಂದ್ರ ಸರ್ಕಾರ ₹1.5 ಲಕ್ಷ, ರಾಜ್ಯ ಸರ್ಕಾರ ₹1.20 ಲಕ್ಷ, ಫಲಾನುಭವಿಗಳು ₹73,673 ಕಟ್ಟಬೇಕಿತ್ತು. ಉಳಿದ ಹಣಕ್ಕೆ ಬ್ಯಾಂಕ್ ಸಾಲ ಪಡೆಯಲು ನಿರ್ಧರಿಸಲಾಗಿತ್ತು. ಬ್ಯಾಂಕ್‌ಗಳು ಸಾಲ ನೀಡಲು ಹಿಂದೇಟು ಹಾಕಿದವು. ಹಾಗಾಗಿ, ಮನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. 216 ಮನೆಗಳ ಆರ್‌ಸಿಸಿ ಮುಗಿದಿದೆ ಎಂದು ಕೊಳಚೆ ನಿರ್ಮೂಲನಾ ಮಂಡಳಿ ಎಂಜಿನಿಯರ್ ವಿವರ ನೀಡಿದರು.

ಪೊಲೀಸರ ಮಧ್ಯ ಪ್ರವೇಶಕ್ಕೆ ಆಕ್ರೋಶ:ಕೆಲವು ತಿಂಗಳ ಹಿಂದೆ ಕೊಳೆಗೇರಿ ನಿವಾಸಿಗಳ ಮನೆ ನಿರ್ಮಾಣಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರೂ ಸೇರಿದಂತೆ ಪ್ರತಿಭಟನೆ ನಡೆಸುತ್ತಿದ್ದ ಎಲ್ಲರನ್ನೂ ಬಂಧಿಸಿ, ಮೂರು ತಾಸುಗಳ ನಂತರ ಬಿಡುಗಡೆ ಮಾಡಿದರು. ನ್ಯಾಯಯುತ ಬೇಡಿಕೆ ಹತ್ತಿಕ್ಕುವ ಪ್ರಯತ್ನ ಸರಿಯೇ ಎಂದು ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸದಸ್ಯ ಶಂಕರ್ ಗನ್ನಿ ಮಾತನಾಡಿ, ಪೊಲೀಸರು ತಮ್ಮ ಕೆಲಸ ಮಾಡಿದ್ದಾರೆ. ಪ್ರತಿಭಟನೆ ನಡೆದು ಒಂದು ತಿಂಗಳಾಗಿದೆ. ಈಗೇಕೆ ಈ ಮಾತು ಎನ್ನುತ್ತಿದ್ದಂತೆ ಸಿಟ್ಟಿಗೆದ್ದ ಕಾಂಗ್ರೆಸ್ ಸದಸ್ಯರುವಾಗ್ವಾದ ನಡೆಸಿದರು. ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಬಿಜೆಪಿ ಸದಸ್ಯ ಧೀರರಾಜ್ ಹೊನ್ನವಿಲೆ ಮಾತನಾಡಿ, ರಾಗಿಗುಡ್ಡದಲ್ಲಿ ಮನೆಗಳ ಕಾಮಗಾರಿ ಒಂದೂವರೆ ವರ್ಷದಿಂದ ಚೆನ್ನಾಗಿ ನಡೆಯುತ್ತಿವೆ. ಆರಂಭದಲ್ಲಿ ಇದ್ದ ಅಡೆ ತಡೆಗಳನ್ನು ಸಚಿವ ಈಶ್ವರಪ್ಪಅವರು ಬಗೆಹರಿಸಿದ್ದಾರೆಎಂದರು.

ರಮೇಶ್ ಹೆಗ್ಡೆ ಮಾತನಾಡಿ, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಮನೆ ನಿರ್ಮಾಣಕ್ಕೂ ನೀಡಲು ಹಣವಿಲ್ಲ. ನಮಗೆ ಮನ್‌ಕಿಬಾತ್ ಬೇಡ, ಕಾಮ್‌ಕಿ ಬಾತ್ ಬೇಕು. ಪ್ರಧಾನಿ ಬಗ್ಗೆ ಮಾತನಾಡಿದರೆ, ಪ್ರಶ್ನಿಸಿದರೆ ಪ್ರಕರಣ ದಾಖಲಿಸುತ್ತಾರೆ ಎಂದು ಆಡಳಿತ ಪಕ್ಷದ ಕಾಲೆಳೆದರು.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ಕರೆದು ಚರ್ಚಿಸಲು,ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಸಭೆ ನಿರ್ಣಯ ಕೈಗೊಂಡಿತು.

ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಸದ್ದು:ಮಹಾತ್ಮಾಗಾಂಧಿ ನಗರ ವಿಕಾಸ ಯೋಜನೆ ಕಾಮಗಾರಿಗಳ ಗುತ್ತಿಗೆ ಸ್ಥಳೀಯರಿಗೆ ನೀಡಬೇಕು. ಅದಕ್ಕಾಗಿ ₹5 ಕೋಟಿ ಒಳಗೆ ಕಾಮಗಾರಿ ವಿಭಜಿಸಬೇಕು. ಹೊರಗಿನವರಿಗೆ ಗುತ್ತಿಗೆ ನೀಡಿದರೆ ಅವರು ಮತ್ತೆ ತುಂಡು ಗುತ್ತಿಗೆ ನೀಡುತ್ತಾರೆ. ಅದಕ್ಕೆ ಅವಕಾಶ ನೀಡಬಾರದು ಎಂದು ಸದಸ್ಯ ನಾಗರಾಜ್ ಕಂಕಾರಿ ಕೋರಿದರು.

ಯೋಜನೆಯ ಪ್ರಸ್ತಾವವನ್ನೇಸರ್ಕಾರಕ್ಕೆ ಸಲ್ಲಿಸಿಲ್ಲ ಎಂದು ಸದಸ್ಯ ರಮೇಶ್ ಹೆಗ್ಡೆ ದೂರಿದರು. ಅದಕ್ಕೆಪ್ರತಿಕ್ರಿಯಿಸಿದಮೇಯರ್ ಸುವರ್ಣ ಶಂಕರ್, ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಸರ್ಕಾರಕ್ಕೆ ತಕ್ಷಣವೇ ಪ್ರಸ್ತಾವ ಸಲ್ಲಿಸಲಾಗುವುದು ಎಂದರು.

ಸಭೆ ಆರಂಭದಲ್ಲಿ ಪೇಜಾವರ ಶ್ರೀಗಳು, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಮಾದಪ್ಪ,ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸೈನಿಕರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು.

ಉಪ ಮೇಯರ್ ಸುರೇಖಾ ಮುರಳೀಧರ್, ಆಯುಕ್ತ ಚಿದಾನಂದ ವಟಾರೆಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.