ADVERTISEMENT

ಮೃತ ಕಾರ್ಮಿಕರ ಕುಟುಂಬಕ್ಕೆ ನೆರವಿನ ಶಕ್ತಿ

ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಚನ್ನಬಸಪ್ಪ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 12:35 IST
Last Updated 23 ಸೆಪ್ಟೆಂಬರ್ 2021, 12:35 IST
ಶಿವಮೊಗ್ಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಕೊರೊನಾದಿಂದ ಮೃತರಾದ ಕಾರ್ಮಿಕರ ಕುಟುಂಬದ ಸದಸ್ಯರು ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಕೊರೊನಾದಿಂದ ಮೃತರಾದ ಕಾರ್ಮಿಕರ ಕುಟುಂಬದ ಸದಸ್ಯರು ಉದ್ಘಾಟಿಸಿದರು.   

ಶಿವಮೊಗ್ಗ: ಕೊರೊನಾ ಆರಂಭವಾದ ನಂತರ ಆರು ಪೌರ ಕಾರ್ಮಿಕರನ್ನು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಲಾಗಿದೆ ಎಂದು ನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಎಸ್.ಎನ್‌.ಚನ್ನಬಸಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ನಗರ ಪಾಲಿಕೆ ಗುರುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆಯ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಪೌರ ಕಾರ್ಮಿಕರಲ್ಲಿ ದೇವರನ್ನು ಕಾಣಬೇಕಿದೆ. ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಸರ್ಕಾರಗಳು ಪೌರಕಾರ್ಮಿಕರಿಗೆ ಸೌಲಭ್ಯಗಳನ್ನು ಕಲ್ಪಿಸಿವೆ. ಅವರಿಗೆ ಶಕ್ತಿ ತುಂಬಿವೆ. ಅವರಿಗೆ ಮತ್ತಷ್ಟು ಶಕ್ತಿಯ ಅಗತ್ಯವಿದೆ. ಈಗಲೂ ಹಲವು ಬೇಡಿಕೆ ಇಟ್ಟಿದ್ದಾರೆ. ಸಮಸ್ಯೆ ಬಗೆಹರಿಸಲು ಪಾಲಿಕೆ ಆದ್ಯತೆ ನೀಡಲಿದೆ. ಸರ್ಕಾರದ ಮಟ್ಟದಲ್ಲಿ ಬಗೆಹರಿಸುವ ಸಮಸ್ಯೆಗಳಿಗೆ ಪ್ರಸ್ತಾವ ಕಳುಹಿಸಲಾಗುವುದು ಎಂದರು.

ADVERTISEMENT

ಪಾಲಿಕೆ ವಿರೋಧ ಪಕ್ಷದ ನಾಯಕಿ ಯಮುನಾ ರಂಗೇಗೌಡ, ಪೌರ ಕಾರ್ಮಿಕರ ಸಮಸ್ಯೆಗಳು ಸುಧಾರಣೆಯಾಗಬೇಕು. ಇಲ್ಲಿನ ಹೆಣ್ಣುಮಕ್ಕಳು ಮಾತೃ ಸ್ಥಾನದಲ್ಲಿದ್ದಾರೆ. ತಮ್ಮ ಮನೆಯಂತೆ ಇಡಿ ನಗರ ಸ್ವಚ್ಛಗೊಳಿಸುತ್ತಾರೆ. ಆ ಮೂಲಕ ಜನರ ಆರೋಗ್ಯ ಕಾಪಾಡುತ್ತಿದ್ದಾರೆ. ಅವರ ಬದುಕು ಅತ್ಯಂತ ಕಷ್ಟದಲ್ಲಿದ್ದರೂ ಸಮಾಜದ ಜನರಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಪ್ರಾಸ್ತಾವಿಕ ಮಾತನಾಡಿದ ಪೌರ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಗೋವಿಂದ, ಪೌರ ಕಾರ್ಮಿಕರು ಸ್ವಾಭಿಮಾನದ ಸಂಕೇತ. ಅವರಿಲ್ಲದೇ ನಗರ ಸ್ವಚ್ಛವಾಗಿರಲು ಸಾಧ್ಯವಿಲ್ಲ. ಅವರ ಶ್ರಮ, ಶ್ರದ್ಧೆ ಅಪೂರ್ವವಾದುದು. ಪೌರ ಕಾರ್ಮಿಕರಿಗೂ ಘನತೆ ಸಿಗಬೇಕು. ಪೌರ ಕಾರ್ಮಿಕರ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಯಬೇಕು. ಸೇವೆ ಕಾಯಂ ಸೇರಿದಂತೆ ಎಲ್ಲ ಕೆಲಸಗಾರರಿಗೂ ಸರ್ಕಾರದಿಂದ ಸಿಗುವ ಯೋಜನೆಗಳು ತಲುಪಬೇಕು ಎಂದರು.

ಕೊರೊನಾದಿಂದ ಮರಣ ಹೊಂದಿದ ಪೌರ ಕಾರ್ಮಿಕರಾದ ಲಿಂಗರಾಜು, ಗಂಗಾ, ಮಂಜುನಾಥ್, ನರಸಿಂಹಮೂರ್ತಿ ಕುಟುಂಬದ ಸದಸ್ಯರಾದ ಪದ್ಮಾವತಿ, ಕಮಲಮ್ಮ, ಮಮತಾ, ವಿದ್ಯಾಶ್ರೀ ಕಾರ್ಯಕ್ರಮ ಉದ್ಘಾಟಿಸಿದರು.

ಕೊರೊನಾ ಆರಂಭವಾದ ನಂತರ ಪೌರ ಕಾರ್ಮಿಕರ ದಿನಾಚರಣೆ ನಡೆದಿರಲಿಲ್ಲ. ಸ್ವಾತಂತ್ರ್ಯದ ಅಮೃತಮಹೋತ್ಸವದ ಹಿನ್ನೆಲೆಯಲ್ಲಿ ಈ ಬಾರಿ ಪೌರ ಕಾರ್ಮಿಕರ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲಾಯಿತು. ಬಹುತೇಕ ಕಾರ್ಮಿಕರು ಕಾರ್ಯಕ್ರಮದಲ್ಲಿ ಹಾಜರಾಗಿ ಮೆರುಗು ನೀಡಿದರು.

ಈ ಸಮಯದಲ್ಲಿ ಉತ್ತಮ ಕೆಲಸ ನಿರ್ವಹಿಸಿದ ಪಾಲಿಕೆಯ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಅಥ್ಲೆಟಿಕ್ ಕ್ರೀಡಾಕೂಟ, ಮೇಯರ್ ಕಪ್(ಕ್ರಿಕೆಟ್) ಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಮೇಯರ್ ಸುನಿತಾ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಆಯಕ್ತ ಚಿದಾನಂದ ವಟಾರೆ, ಉಪ ಮೇಯರ್ ಕೆ.ಶಂಕರ್ ಗನ್ನಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಅನಿತಾ ರವಿಶಂಕರ್, ಧೀರರಾಜ್, ಎಸ್.ಶಿವಕುಮಾರ್, ಪಾಲಿಕೆ ಸದಸ್ಯರಾದ ಆಶಾ ಚಂದ್ರಪ್ಪ, ವಿಶ್ವಾಸ್, ಎಚ್.ಸಿ.ಯೋಗೀಶ್, ಲತಾ ಗಣೇಶ್, ಆರತಿ ಪ್ರಕಾಶ್, ನಾಗರಾಜ್ ಕಂಕಾರಿ, ಸುರೇಖಾ ಮುರಳೀಧರ್, ಪ್ರಭು, ಜ್ಞಾನೇಶ್ವರ್, ಸುವರ್ಣಾ ಶಂಕರ್, ರೇಖಾ ರಂಗನಾಥ್, ಲಕ್ಷ್ಮಿ ಶಂಕರನಾಯ್ಕ್, ಮೀನಾ ಗೋವಿಂದರಾಜ್, ಸಂಗೀತಾ ನಾಗರಾಜ್, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಂ. ಮಾರಪ್ಪ, ಉಪಾಧ್ಯಕ್ಷ ಬಿ.ಎನ್.ವೇಣುಗೋಪಾಲ್, ಎಸ್.ಜಿ.ಮಂಜಣ್ಣ, ಕೆ.ಮಂಜಣ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.