ADVERTISEMENT

ತ್ಯಾವರೆಕೊಪ್ಪದಲ್ಲಿ ಆರಂಭವಾಗಲಿದೆ ದೇಶದ ಮೊದಲ ‘ಕಾಡುಕೋಣ ಸಫಾರಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 2:02 IST
Last Updated 2 ಏಪ್ರಿಲ್ 2022, 2:02 IST
ಕಾಡುಕೋಣ
ಕಾಡುಕೋಣ   

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ದೇಶದ ಮೊದಲ ಕಾಡುಕೋಣ ಸಫಾರಿ ಏಪ್ರಿಲ್‌ ಅಂತ್ಯಕ್ಕೆ ಆರಂಭವಾಗಲಿದೆ.

650 ಎಕರೆ ವಿಸ್ತೀರ್ಣದ ಧಾಮದಲ್ಲಿ ಕಾಡುಕೋಣ, ಕಾಡೆಮ್ಮೆ ಸಫಾರಿಗಾಗಿ 65 ಎಕರೆಯಲ್ಲಿ ಪ್ರತ್ಯೇಕ ಕಾರಿಡಾರ್‌ ನಿರ್ಮಿಸಲಾಗಿದೆ. ತಡೆಬೇಲಿ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಮೈಸೂರು ಮೃಗಾಲಯದಿಂದ 25 ಕಾಡುಕೋಣ, ಕಾಡೆಮ್ಮೆ ತರುವ ಪ್ರಕ್ರಿಯೆ ಏಪ್ರಿಲ್‌ ಕೊನೆಯ ವಾರದಲ್ಲಿ ಆರಂಭಗೊಳ್ಳುವ ಸಾಧ್ಯತೆ ಇದೆ. ಹುಲಿ ಮತ್ತು ಸಿಂಹಗಳಿಗಾಗಿ ಪ್ರತ್ಯೇಕ ಸಫಾರಿ ವ್ಯವಸ್ಥೆ ಇದೆ. ಹುಲಿ, ಸಿಂಹ ಸಫಾರಿಯ ನಂತರ ಅದೇ ವಾಹನಗಳು ಕಾಡುಕೋಣ ಸಫಾರಿಗೆ ಸಾಗಲಿವೆ.

‘ಸಂಸದ ಬಿ.ವೈ.ರಾಘವೇಂದ್ರ ಅವರ ವಿಶೇಷ ಆಸಕ್ತಿಯಿಂದ ಧಾಮದ ಅಭಿವೃದ್ಧಿಗೆ ₹ 10 ಕೋಟಿ ಮಂಜೂರಾಗಿತ್ತು. ಆ ಹಣದಲ್ಲೇ ಕಾಡುಕೋಣ ಕಾರಿಡಾರ್ ನಿರ್ಮಿಸಲಾಗಿದೆ. ಪ್ರತಿ ಕೋಣ ಸಾಕಷ್ಟು ತೂಕ ಇರುತ್ತದೆ. ಸೂಕ್ಷ್ಮ ಜೀವಿಗಳಾದ ಅವುಗಳ ಸಾಗಣೆ ಸವಾಲಿನ ಕೆಲಸ. ಸುವ್ಯವಸ್ಥಿತ ಸಾಗಣೆ ಕುರಿತು ಮೈಸೂರು ಮೃಗಾಲಯದ ಅಧಿಕಾರಿ, ಸಿಬ್ಬಂದಿ ಜತೆ ಚರ್ಚೆ ನಡೆದಿದೆ. ಅಂತಿಮ ರೂಪುರೇಷೆಯ ನಂತರೆ ಸಾಗಣೆ ಆರಂಭಿಸಲಾಗುವುದು’ ಎಂದು ಸಿಂಹಧಾಮದ ವ್ಯವಸ್ಥಾಪಕ ನಿರ್ದೇಶಕ ಮುಕುಂದ್‌ಚಂದ್‌ ಹೇಳಿದರು.

ADVERTISEMENT

‘ಕಾಡುಕೋಣ, ಕಾಡೆಮ್ಮೆಗಳು ಮೃಗಾಲಯದಲ್ಲೇ ಹುಟ್ಟಿ ಬೆಳೆದಿರುವ ಕಾರಣ ಸಾಕಷ್ಟು ಪಳಗಿವೆ. ತ್ಯಾವರೆಕೊಪ್ಪದ ವಿಶಾಲ ಪ್ರದೇಶದ ಕಾಡಿನಲ್ಲಿ ಸ್ವಚ್ಛಂದವಾಗಿ ತಿರುಗಲು ವ್ಯವಸ್ಥೆ ಕಲ್ಪಿಸಲಾಗಿದೆ. ವಿನಾಶದ ಅಂಚಿನಲ್ಲಿರುವ ಅವುಗಳ ಸಂತತಿ ವೃದ್ಧಿಗೆ ಕಾಡೆಮ್ಮೆ, ಕಾಡುಕೋಣಗಳನ್ನು ಸಮಾನ ಸಂಖ್ಯೆಯಲ್ಲಿ ನೀಡಲು ನಿರ್ಧರಿಸಲಾಗಿದೆ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹಾದೇವಸ್ವಾಮಿಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.