ಶಿವಮೊಗ್ಗ: ಗೋವಿನ ರಕ್ಷಣೆಗೆ ಸಮಾನ ಮನಸ್ಕರೆಲ್ಲರೂ ಸೇರಿ ಶಿವಮೊಗ್ಗದಲ್ಲಿ ಗೋವರ್ಧನಾ ಸಂಸ್ಥೆ ಅಸ್ವಿತ್ವಕ್ಕೆ ತಂದಿದ್ದೇವೆ. ಮನೆ ಮನೆಗಳಲ್ಲಿ ಗೋವಿನ ಬಗ್ಗೆ ಜಾಗೃತಿ ಕಾರ್ಯಕ್ಕೆ ಶೃಂಗೇರಿ ಪೀಠದ ಜಗದ್ಗುರು ವಿದುಶೇಖರ ಭಾರತಿ ಶ್ರೀಗಳು ಅಕ್ಟೊಬರ್ 5ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರದ ರಸ್ತೆಗಳಲ್ಲಿ ಮಾಲೀಕರಿಲ್ಲದೆ ಓಡಾಡುವ ಬಿಡಾಡಿ ಹಸುಗಳ ರಕ್ಷಿಸಿ, ಗೋಶಾಲೆಗೆ ಸೇರಿಸುವುದು, ಅನಾಥ ಗೋವುಗಳಿಗಾಗಿಯೇ ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ ಸ್ಥಾಪಿಸಿ ನುರಿತ ವೈದ್ಯರ ನೇಮಕ, ಅನಾರೋಗ್ಯಪೀಡಿತ, ಅಪಘಾತದಲ್ಲಿ ಗಾಯಗೊಂಡು ಗೋವುಗಳಿಗಾಗಿ ತುರ್ತು ಆಂಬುಲೆನ್ಸ್ ಸೇವೆ ಒದಗಿಸಲಾಗುವುದು ಎಂದರು.
ಬಂಜೆತನ ಹಾಗೂ ವಯಸ್ಸಾದ ಹಸುಗಳ ಮಾರಾಟ ಮಾಡಲು ಬಿಡದೇ ಗೋ ಶಾಲೆಗೆ ಕೊಡಲಿದ್ದೇವೆ. ಅದರ ಖರ್ಚು-ವೆಚ್ಚ ಗೋವರ್ಧನ ಸಂಸ್ಥೆಯಿಂದಲೇ ಭರಿಸಲಾಗುವುದು. ಇದಕ್ಕೆ ಗೋವುಗಳ ಬಗ್ಗೆ ಕಾಳಜಿ ಹೊಂದಿರುವವರಿಂದ ಪ್ರತಿ ತಿಂಗಳು ₹100 ಸ್ವೀಕರಿಸಿ ಅದರ ಮೇಲ್ವಿಚಾರಣೆ ಗೋವರ್ಧನ ಟ್ರಸ್ಟ್ ಪ್ರಾರಂಭಿಸಿ, ಹಣ ಸಂಗ್ರಹಣೆ, ಖರ್ಚು-ವೆಚ್ಚಗಳ ಜವಾಬ್ದಾರಿ ನೀಡಲಿದ್ದೇವೆ. ನಿಯಮಿತವಾಗಿ ಟ್ರಸ್ಟಿನ ಸಭೆ ನಡೆಯಲಿದೆ ಎಂದರು.
ಗೋವರ್ಧನ ಟ್ರಸ್ಟ್ ₹100 ಮೊತ್ತದ ಕೂಪನ್‌ನ ಪುಸ್ತಕಗಳನ್ನು ಈಗಾಗಲೇ ಸಿದ್ದಪಡಿಸಿದೆ. ಅದನ್ನು ಪಡೆದವರು ಅಕ್ಟೋಬರ್ 1 ರೊಳಗೆ ವಾಪಸ್ ಕೊಡಬೇಕು. ಪ್ರತಿ ಮನೆಗೂ ಭೇಟಿನೀಡಿ ಗೋಸಂರಕ್ಷಣಾ ಮನೆ ಎಂಬ ಸ್ಟಿಕ್ಕರ್ ಅಂಟಿಸಲಾಗುವುದು. ಗೋವರ್ಧನಾ ಸಂಸ್ಥೆ ಸದಸ್ಯರಾದವರಿಗೆ ಶೃಂಗೇರಿ ಶ್ರೀಗಳ ಅಶೀರ್ವಾದ ದೊರೆಯಲಿದೆ. ಇದೊಂದು ಜನಾಂದೋಲನ ಕಾರ್ಯಕ್ರಮ. ನೇರವಾಗಿ ಬ್ಯಾಂಕ್ ಖಾತೆಗೂ ಹಣ ಜಮಾ ಮಾಡಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ, ಗೋವರ್ಧನ ಸಂಸ್ಥೆಯ ಶೇಷಾಚಲ, ಮಹಾಲಿಂಗಯ್ಯ ಶಾಸ್ತ್ರಿ, ಕೆ.ಈ. ಕಾಂತೇಶ್, ಗುತ್ತಿಗೆದಾರ ಶಿವಶಂಕರ್, ಭಜನಾ ಪರಿಷತ್‌ನ ಸಂದೇಶ್ ಉಪಾಧ್ಯ, ಗುರುರಾಜ್, ಸುರೇಶ್ ಬಾಳೆಗುಂಡಿ, ಸುಧೀಂದ್ರ, ದಿನೇಶ್‌ದಾಸ್ ವೈಷ್ಣವ್, ರಾಜು, ಶಿವಾಜಿ, ನರೇಶ್ ಜೈನ್, ಹರ್ಷಾ ಕಾಮತ್, ಶಿವಾಜಿ, ಗಜಾನನ ಶರ್ಮ, ಆಶ್ವತ್ಥ ನಾರಾಯಣ ಶೆಟ್ಟಿ ಇದ್ದರು.
ಗೋಸಂರಕ್ಷಣೆಗೆ ಈ ಸಂಖ್ಯೆಗಳಿಗೆ ಸಂಪರ್ಕಿಸಿ..:
ಗೋಸಂರಕ್ಷಣೆಗಾಗಿ ₹100 ಪ್ರತಿ ತಿಂಗಳು ಕೊಡುವವರು ಕೆ.ಎಸ್. ಈಶ್ವರಪ್ಪ ಮೊಬೈಲ್ ಸಂಖ್ಯೆ: 9880030004 ನಟರಾಜ್ ಭಾಗವತ್ ಮೊಬೈಲ್ ಸಂಖ್ಯೆ: 7204646175 ಉಮೇಶ್ ಆರಾಧ್ಯ: 9886177311 ಸಂಪರ್ಕಿಸಬಹುದು ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.