
ತ್ಯಾಗರ್ತಿ: ಬೆಳೆ ಬರುವ ಸಂದರ್ಭದಲ್ಲಿ ಕಾಡು ಪ್ರಾಣಿಗಳಿಂದ ಫಸಲು ನಷ್ಟವಾದರೆ ರೈತರಿಗೆ ಕಷ್ಟವಾಗುತ್ತದೆ. ಖಾತೆ ಇರುವ ಜಮೀನುಗಳಿಗೆ ಮಾತ್ರಾ ಪರಿಹಾರ ನೀಡಲು ಸಾಧ್ಯ. ಖಾತೆ ಇಲ್ಲದ ಜಮೀನುಗಳಿಗೆ ಸರ್ಕಾರದಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ. ಹಾಗಾಗಿ ತಕ್ಷಣ ಅಧಿಕಾರಿಗಳು ಗ್ರಾಮಸ್ಥರ ಜೊತೆ ಸೇರಿ ಆನೆಗಳನ್ನು ಬೇರೆ ಪ್ರದೇಶಗಳಿಗೆ ಓಡಿಸಬೇಕೆಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದರು.
ಸಾಗರ ತಾಲ್ಲೂಕಿನ ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತನಹಳ್ಳಿ, ಕುಂದೂರು, ಮಸೆಕಲ್‌ಬೈಲು, ಮುತ್ತಲಬೈಲು, ಮಿಡಿನಗರ ಸುತ್ತಾಮುತ್ತ ಆನೆ ಹಾವಳಿಯಿಂದ ಹಾಳಾಗಿರುವ ಬಾಳೆ ತೋಟಗಳನ್ನು ಸೋಮವಾರ ವೀಕ್ಷಿಸಿ ರೈತರಿಗೆ ವೈಯಕ್ತಿಕ ಸಹಾಯಧನ ನೀಡಿ ಮಾತನಾಡಿದರು.
ಕಾಡು ಪ್ರಾಣಿಗಳನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಕಾಡು ಪ್ರಾಣಿಗಳು ಬೆಳೆಗಳನ್ನು ಹಾಳು ಮಾಡುತ್ತಿದ್ದರೆ ಅರಣ್ಯ ಇಲಾಖೆಯ ಸಿಬ್ಬಂದಿ ಗ್ರಾಮಸ್ಥರೊಂದಿಗೆ ಸೇರಿ ಆ ಪ್ರಾಣಿಗಳನ್ನು ಅರಣ್ಯಕ್ಕೆ ಓಡಿಸಬೇಕು ಎಂದು ಹೇಳಿದರು.
ಕಾಡು ಪ್ರಾಣಿಗಳಿಂದ ಹಾಳಾಗಿರುವ ಒಂದು ಬಾಳೆ ಗಿಡಕ್ಕೆ ₹ 200, ಅಡಿಕೆ ಗಿಡಕ್ಕೆ ₹ 800 ಪರಿಹಾರವನ್ನು ಸರ್ಕಾರ ಪರಿಹಾರವಾಗಿ ನೀಡುತ್ತಿದ್ದು, ವೈಯಕ್ತಿಕ ಧನಸಹಾಯವನ್ನು ಆ ರೈತರಿಗೆ ನೀಡುತ್ತಿದ್ದೇನೆ. ರೈತರು ಈ ಸಂಕಷ್ಟದಿಂದ ಪಾರಾಗಲಿ ಎಂದು ಆಶಿಸಿದರು.
ಈ ಸಂಧರ್ಭದಲ್ಲಿ ಮಂಗನ ಹಾವಳಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಂಗನನ್ನು ಕೊಲ್ಲಲು ಕಾನೂನಿನಲ್ಲಿ ಅವಕಾಶವಿಲ್ಲ. ಮಂಗನ ಹಾವಳಿಯ ಬಗ್ಗೆ ಅರಣ್ಯ ಇಲಾಖೆಯ ಗಮನಕ್ಕೆ ತಂದರೆ ಪಂಜರ ನೀಡುತ್ತಾರೆ. ಪಂಜರದ ಮುಖಾಂತರ ಮಂಗಗಳನ್ನು ಹಿಡಿದು ದಟ್ಟ ಅರಣ್ಯಗಳಿಗೆ ಬಿಡುವ ವ್ಯವಸ್ಥೆಯನ್ನು ಅರಣ್ಯ ಇಲಾಖಾ ಅಧಿಕಾರಿಗಳು ಮಾಡುತ್ತಾರೆ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಶಿವಪ್ರಕಾಶ್, ತಹಶೀಲ್ದಾರ್ ರಶ್ಮಿ, ಡಿಎಫ್‌ಒ ಮೋಹನ್‌ಕುಮಾರ್, ಎಸಿಎಫ್ ರವಿ.ಕೆ, ಅರಣ್ಯ ಇಲಾಖೆಯ ಸಿಬ್ಬಂದಿ, ಬರೂರು ಪಂಚಾಯಿತಿ ಪಿಡಿಒ ರಾಜು ಹಾಗೂ ಸ್ಥಳೀಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.