ADVERTISEMENT

ವಚನಕಾರರ ಸಿದ್ಧಾಂತ ಪ್ರಸ್ತುತ-ಡಾ.ಜ್ಞಾನೇಶ್

ಶರಣ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಜ್ಞಾನೇಶ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 4:06 IST
Last Updated 22 ಫೆಬ್ರುವರಿ 2021, 4:06 IST
ಸೊರಬದಲ್ಲಿ ಭಾನುವಾರ ನಡೆದ 2ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಚಿಂತನ–ಮಂಥನ ಗೋಷ್ಠಿಯಲ್ಲಿ ವೈದ್ಯ ಡಾ. ಜ್ಞಾನೇಶ್ ಮಾತನಾಡಿದರು
ಸೊರಬದಲ್ಲಿ ಭಾನುವಾರ ನಡೆದ 2ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದ ಚಿಂತನ–ಮಂಥನ ಗೋಷ್ಠಿಯಲ್ಲಿ ವೈದ್ಯ ಡಾ. ಜ್ಞಾನೇಶ್ ಮಾತನಾಡಿದರು   

ಸೊರಬ: 12ನೇ ಶತಮಾನದಲ್ಲಿ ಪಂಡಿತರಿಗಷ್ಟೇ ಸೀಮಿತವಾಗಿದ್ದ ಧಾರ್ಮಿಕ ಭಾವನೆಯನ್ನು ಮನುಷ್ಯನ ದೇಹದಲ್ಲಿ ದೈವತ್ವದ ಕಲ್ಪನೆ ಮೂಡಿಸಿ ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂದು ಪ್ರತಿಪಾದಿಸಿದ ಶರಣರ ನಾಡಿನಲ್ಲಿ ಮತ್ತೆ ಜಾತಿಯ ಹೆಸರಿನಲ್ಲಿ ಆಂದೋಲನ ನಡೆಯುತ್ತಿರುವುದು ದುರಂತ ಎಂದು ವೈದ್ಯ ಡಾ.ಜ್ಞಾನೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ಮುರುಘಾ ಮಠದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2ನೇ ತಾಲ್ಲೂಕು ಶರಣ ಸಾಹಿತ್ಯ ಸಮ್ಮೇಳನದಲ್ಲಿ ಚಿಂತನ, ಮಂಥನ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವರನ್ನು ಗುಡಿಯೊಳಗೆ ನೋಡುವ ಸನಾತನ ಸಂಸ್ಕೃತಿಗೆ ದೇವರನ್ನು ಹೊರಗೆ ಕಾಯುವ ಪಾಮರರ ಭಾವೈಕ್ಯ ಅರ್ಥವಾಗದಿದ್ದಾಗ ಶರಣರು ಧಾರ್ಮಿಕ ಕ್ರಾಂತಿ ನಡೆಸಿದರು. ದೇಹವನ್ನು ದೇಗುಲ ಮಾಡಿ ಆತ್ಮದಲ್ಲಿ ದೇವರ ದರ್ಶನ ಮಾಡಿದ ವಚನಕಾರರ ತತ್ವ, ಸಿದ್ಧಾಂತ ಇಂದು ಎಲ್ಲ ಸಮುದಾಯಕ್ಕೂ ಪ್ರಸ್ತುತವಾಗಬೇಕಿದೆ ಎಂದರು.

ADVERTISEMENT

ಆಧುನಿಕ ಯುಗದಲ್ಲಿ ಜಾತಿಯ ಭಾವನೆಗೆ ಹೆಚ್ಚು ನೀರೆರೆದು ಪೋಷಿಸುತ್ತಿರುವರಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಠಗಳು ತಮ್ಮ ತಮ್ಮ ಸಮುದಾಯದ ಪರವಾಗಿ ಚಳವಳಿಗೆ ಇಳಿದಿರುವುದು ಪ್ರಜಾಪ್ರಭುತ್ವದ ಅಧಃಪತನ ಎಂದು ಬೇಸರ ವ್ಯಕ್ತಪಡಿಸಿದರು.

‘ವಚನ ಸಾಹಿತ್ಯ ಮತ್ತು ಯುವ ಜಾಗೃತಿ’ ವಿಷಯ ಕುರಿತು ಭರತ್ ಕಾರೇಕೊಪ್ಪ ಮಾತನಾಡಿದರು. ಇಂದಿರಾ ಗಾಂಧಿ ಮಹಿಳಾ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕಿ ಪವಿತ್ರಾ ‘ಶರಣರ ಕಾಲದಲ್ಲಿ ಸಾಮಾಜಿಕ ಕ್ರಾಂತಿ’ ವಿಷಯದ ಬಗ್ಗೆ ಮಾತನಾಡಿದರು.

ಶಿಕ್ಷಕ ದೀಪಕ್ ಆಶಯ ನುಡಿಗಳನ್ನಾಡಿದರು. ಮಹಾಂತೇಶ್ ಕಳ್ಳಿಕೊನೆ ಅಧ್ಯಕ್ಷತೆಯಲ್ಲಿ ನಡೆದ ಗೋಷ್ಠಿ– 2ರಲ್ಲಿ ವಚನ ಗಾಯನ ವಿಶ್ಲೇಷಣೆ ಭಾವಾಭಿನಯ ನಡೆಯಿತು.

ಲಕ್ಷ್ಮೀಮುರುಳೀಧರ್ ವಚನಗಾಯನ ಮಾಡಿದರು. ಆನವಟ್ಟಿ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕ ಈ. ಶಿವಕುಮಾರ್, ಕುಮಾರ್, ಸತೀಶ್, ಚಂದ್ರಪ್ಪ ಅತ್ತಿಕಟ್ಟೆ ಪ್ರತಿಕ್ರಿಯಿಸಿದರು. ಸ್ಫೂರ್ತಿ ಭಾವಾನಭಿಯ ಮಾಡಿದರು. ಸರ್ವಾಧ್ಯಕ್ಷೆ ರೇಣುಕಮ್ಮಗೌಳಿ, ಉಪನ್ಯಾಸಕ ಎಸ್.ಎಂ. ನೀಲೇಶ್, ಪವಿತ್ರಾ, ಭರತ್, ಕೃಷ್ಣಾನಂದ್, ಹಾಲೇಶ್ ನವುಲೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.