ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮಂಜುನಾಥಗೌಡ ಮುಂದುವರಿಯಲಿ: ಕಿಮ್ಮನೆ ರತ್ನಾಕರ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2020, 12:34 IST
Last Updated 23 ಸೆಪ್ಟೆಂಬರ್ 2020, 12:34 IST
ಕಿಮ್ಮನೆ ರತ್ನಾಕರ
ಕಿಮ್ಮನೆ ರತ್ನಾಕರ   

ಶಿವಮೊಗ್ಗ:ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆರ್.ಎಂ. ಮಂಜುನಾಥ ಗೌಡ ಅವರೇ ಮುಂದುವರಿಯಬೇಕು ಎಂದು ಕೆಪಿಸಿಸಿ ವಕ್ತಾರ ಕಿಮ್ಮನೆ ರತ್ನಾಕರ ಹೇಳಿದರು.

ಮಂಜುನಾಥ್ ಗೌಡ ಅವರ ಮೇಲೆ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪವನ್ನು ಮರೆಮಾಚಲುಅವರ ರಾಜೀನಾಮೆಯ ಪುಕಾರು ಹಬ್ಬಿದೆ. ಜವಾಬ್ದಾರಿಯಿಂದ ನುಣಚಿಕೊಳ್ಳುವ ತಂತ್ರ ಇದಾಗಿರಬಹುದು ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಬ್ಯಾಂಕ್‍ನ ಅಧ್ಯಕ್ಷರ ಆಪಾದನೆಗಳಿಗೆ ಸಮಗ್ರ ತನಿಖೆಯ ಅಗತ್ಯವಿದೆ. ಈ ಹಿಂದೆ ಜಿಲ್ಲಾ ಪಂಚಾಯಿತಿಯ ಕೆಡಿಪಿ ಸಭೆಯಲ್ಲಿ ಸಿಬಿಐ ತನಿಖೆಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದ್ದರಿಂದ ಸರ್ಕಾರ ಸಾರ್ವಜನಿಕರ ಹಿತಾಸಕ್ತಿ ಮನಗಂಡು ಸಮಗ್ರ ತನಿಖೆ ಮಾಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಡಿಸಿಸಿ ಬ್ಯಾಂಕ್‍ನಿಂದ ನೀಡಿರುವ ಹೆಚ್ಚುವರಿ ಸಾಲ ವಿತರಣೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ರೈತರಿಗೆ ಅನ್ಯಾಯವಾಗಿದೆ.

ಹೆಚ್ಚುವರಿ ಸಾಲ ವಿತರಣೆಯಲ್ಲಿ ₹ 1 ಲಕ್ಷಕ್ಕೆ ₹ 2 ಸಾವಿರ ಲಂಚ ಪಡೆಯಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ತೀರ್ಥಹಳ್ಳಿ ಭಾಗದ ರೈತರಿಗೆ ₹ 1 ಕೋಟಿ ಸಾಲ ನೀಡಬೇಕಾಗಿತ್ತು. ಆದರೆ ₹ 25 ಲಕ್ಷ ಸಾಲ ನೀಡಲಾಗಿದೆ. ಇದಕ್ಕೆ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕರು ಉತ್ತರಿಸಬೇಕು ಎಂದು ಆಗ್ರಹಿಸಿದರು.

25 ವರ್ಷಗಳಿಂದ ಬ್ಯಾಂಕ್‍ನ ಅಧ್ಯಕ್ಷರಾಗಿರುವ ಮಂಜುನಾಥಗೌಡ ಬ್ಯಾಂಕ್‍ ಸಿಬ್ಬಂದಿಯನ್ನು ಪಕ್ಷದ ಹಾಗೂ ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ರೈತರ ಹಣ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಪಕ್ಷದ ಮುಖಂಡರಾದ ಕೆ. ದೇವೇಂದ್ರಪ್ಪ, ವಿಜಯಕುಮಾರ್, ಕೆಸ್ತೂರ್ ಮಂಜುನಾಥ್ ಇದ್ದರು.

‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇಲ್ಲ’

‘ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೆಚ್ಚಿನ ಜವಾಬ್ದಾರಿ ನೀಡಿದ್ದಾರೆ. ಅವರನ್ನು ಅಭಿನಂದಿಸುತ್ತೇನೆ.ಪಕ್ಷದ ಧ್ಯೇಯೋದ್ದೇಶಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ತಲುಪಿಸುವ ಕೆಲಸ ಮಾಡುವೆ’ ಎಂದು ಕಿಮ್ಮನೆ ಹೇಳಿದರು.

‘ಕಾಂಗ್ರೆಸ್‌ನಲ್ಲಿ ನಾಯಕತ್ವದ ಕೊರತೆ ಇಲ್ಲ. ನಾಯಕತ್ವದಲ್ಲಿ ಎಲ್ಲಿಯೂ ಎಡವಿಯೂ ಇಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆರ್ಥಿಕ ನೀತಿ ಬದಿಗಿಟ್ಟು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದೆ. ಧರ್ಮವನ್ನು ಆಚೆಗೆ ಇಟ್ಟು ಚುನಾವಣೆ ಎದುರಿಸಿದರೆ 10 ಸ್ಥಾನವೂ ಅದಕ್ಕೆ ಲಭಿಸುವುದಿಲ್ಲ’ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.