ADVERTISEMENT

‘ದೀವರ ವಿದ್ಯಾವರ್ಧಕ ಸಂಘ; ವ್ಯಾಪಕ ಭ್ರಷ್ಟಾಚಾರ’

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 4:42 IST
Last Updated 12 ಡಿಸೆಂಬರ್ 2025, 4:42 IST
ಸೊನಲೆ ಶ್ರೀನಿವಾಸ್
ಸೊನಲೆ ಶ್ರೀನಿವಾಸ್   

ಹೊಸನಗರ: ದೀವರ ವಿದ್ಯಾವರ್ಧಕ ಸಂಘ ಹಾಗೂ ಆರ್ಯ ಈಡಿಗರ ಸಂಘದ ಹೆಸರಿನಲ್ಲಿ ನಡೆಯುತ್ತಿರುವ ಸಂಘಟನೆಯಲ್ಲಿ ವ್ಯಾಪಕ ಭ್ರಷ್ಠಾಚಾರ ನಡೆದಿದೆ ಎಂದು ದೀವರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಸೊನಲೆ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ, ಒಂದೂವರೆ ದಶಕದಿಂದ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಘದ ಆಡಳಿತ ಒಳಪಟ್ಟಿದೆ. ಈ ನಡುವೆ ಸರ್ಕಾರದಿಂದ ಸಂಘದ ಅಭಿವೃದ್ಧಿಗಾಗಿ ₹ 2.50 ಕೋಟಿ ಅನುದಾನ ಲಭ್ಯವಾಗಿದೆ. ಆದರೆ ನಿಯಮಬಾಹಿರವಾಗಿ ಎರಡು ಬ್ಯಾಂಕ್ ಖಾತೆಗಳನ್ನು ತೆರೆದು, ಸಂಗ್ರಹವಾದ ಹಣವನ್ನು ದುರ್ಬಳಕೆ ಮಾಡಲಾಗಿದೆ ಆರೋಪಿಸಿದರು.

ಸುಳ್ಳು ಲೆಕ್ಕಗಳು ಹಾಗೂ ಸಂಘದಲ್ಲಿ ನಡೆಯುತ್ತಿರುವ ಅವ್ಯಹವಾರಗಳ ಬಗ್ಗೆ ನಮ್ಮ ಬಳಿ ಸಾಕಷ್ಟು ಸಾಕ್ಷಾಧಾರಗಳಿವೆ. ಮಳಿಗೆ ಬಾಡಿಗೆ ವಸೂಲಿಯಲ್ಲಿಯೂ ಅವ್ಯವಹಾರ ನಡೆಯುತ್ತಿದೆ. ಸಮುದಾಯದ ಹಿತ ಕಾಯಬೇಕಿದ್ದ ಸಂಘದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಲು ಹೊರಟವರಿಗೆ ಕಿರುಕುಳ ನೀಡುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ‌ ಎಂದರು.

ADVERTISEMENT

ಈಡಿಗರ ಸಂಘದ ಯಾವುದೇ ವ್ಯವಹಾರಗಳು ಪಾರದರ್ಶಕವಾಗಿಲ್ಲ. ದೀವರ ಸಮುದಾಯದ ಏಳಿಗೆಗಾಗಿ ರಚನೆಯಾದ, ಶತಮಾನದ ಇತಿಹಾಸವಿರುವ ಸಂಘದಲ್ಲಿ ಅವ್ಯವಹಾರ ನಡೆಯುತ್ತಿದೆ. ಸರ್ವ ಸದಸ್ಯರ ಸಭೆ ನಡೆಸದೇ, ನಡೆದಿದೆ ಎಂಬಂತೆ ಸಭಾ ನಡಾವಳಿ ದಾಖಲಿಸಿ ಸದಸ್ಯರ ನಕಲಿ ಸಹಿ ಹಾಕಲಾಗಿದೆ. ಇದು ಸಂಘದ ಅವನತಿಗೆ ಕಾರಣವಾಗುತ್ತದೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಮಧ್ಯೆ ಸಂಘದ ಆಡಳಿತಕ್ಕೆ ಒಳಪಟ್ಟಿರುವ ಆರ್ಯ ಈಡಿಗರ ಸಭಾಭವನ ಕಟ್ಟಡದ ಉದ್ಘಾಟನೆಯನ್ನು ತರಾತುರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಸಮುದಾಯದ ಪ್ರಮುಖರು ಹಾಗೂ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ. ಜನಪ್ರತಿನಿಧಿಗಳು ಸಮಾರಂಭಕ್ಕೆ ಆಗಮಿಸಿದಲ್ಲಿ ಸಂಘದ ಅನಾಚಾರಗಳು ಮುಚ್ಚಿ ಹೋಗಲಿ ಎನ್ನುವ ಯೋಚನೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರಣಕ್ಕೆ ಸಮಾರಂಭ ನಡೆಯಲು ನಾವು ಬಿಡುವುದಿಲ್ಲ. ಈ ಸಮಾರಂಭಕ್ಕೆ ಆಗಮಿಸದಂತೆ ನಾವು ಸಚಿವರು, ಶಾಸಕರು ಸೇರಿದಂತೆ ಜನಪ್ರತಿನಿಧಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇವೆ ಎಂದರು.

ಇದು ಯಾವುದೇ ಅಧಿಕಾರಕ್ಕಾಗಿ ನಡೆಯುತ್ತಿರುವ ಪ್ರತಿಭಟನೆಯಲ್ಲ. ಈಡಿಗ ಸಮುದಾಯದ ಹಿತದೃಷ್ಠಿಯಿಂದ ನಡೆಯುತ್ತಿರುವ ಹೋರಾಟ. 15 ವರ್ಷಗಳಿಂದ ಕೆಲವೇ ವ್ಯಕ್ತಿಗಳು ಸಂಘದ ಆಡಳಿತ ಹಿಡಿದಿರುವುದು ಸರಿಯಾದ ಕ್ರಮವಲ್ಲ. ಸದಸ್ಯರ ಬಹುಮತದಿಂದ ಆಯ್ಕೆಯಾದ ನೂತನ ಆಡಳಿತ ಸಮಿತಿ ರಚನೆ ಆಗಬೇಕು ಎಂದು ಆಗ್ರಹಿಸಿದರು.

ಎನ್.ಇ.ಸ್ವಾಮಿ, ಕಾಪಿ ಮಹೇಶ, ಗಣಪತಿ ಮಾಕನಕಟ್ಟೆ, ಕುಮಾರ ಮಂಡಾನಿ, ವಾಸಪ್ಪ ಮಾಸ್ತಿಕಟ್ಟೆ, ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.