ರಿಪ್ಪನ್‌ಪೇಟೆ: ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿರುವ ಮಲೆನಾಡಿನ ದೀವರು ಈ ಬಾರಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕಾಲಂನಲ್ಲಿ ‘ದೀವರು’ ಎಂದೇ ನಮೂದಿಸಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಯೋಗೇಂದ್ರ ಗುರೂಜಿ ಹೇಳಿದರು.
ಭಾನುವಾರ ಇಲ್ಲಿನ ಎಸ್.ಆರ್.ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ‘ದೀವರು ದಿಕ್ಕುದೆಸೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೀವರು ಸಮುದಾಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈಡಿಗ ಒಕ್ಕೂಟದಲ್ಲಿ ಗುರುತಿಸಿಕೊಂಡಿರುವ 26 ಜಾತಿಗಳಲ್ಲಿ ದೀವರು ಮುಖ್ಯ ಜಾತಿಯಾಗಿದೆ. ಗಣತಿಯಲ್ಲಿ ಈಡಿಗರು ಎಂದು ಬರೆಸಿದರೆ ಮೂಲ ಜಾತಿಯಾದ ದೀವರು ಮುಂದೊಂದು ದಿನ ಇಲ್ಲವಾಗುವ ಆತಂಕವಿದೆ’ ಎಂದರು.
‘ಮಲೆನಾಡು ಭಾಗದಲ್ಲಿ ಬಹುಸಂಖ್ಯಾತ ಸಮುದಾಯವಾದ ದೀವರು ಜನಾಂಗಕ್ಕೆ ರಾಜಧಾನಿಯಲ್ಲಿ ಯಾವುದೇ ನಿವೇಶನ, ಕಚೇರಿ ಇಲ್ಲ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತನೆ ಮಾಡಬೇಕಿದೆ. ಈಡಿಗ ಒಕ್ಕೂಟದಲ್ಲಿರುವ ಬಿಲ್ಲವರು ಮತ್ತು ನಾಮಧಾರಿ ಮತ್ತಿತರ ಜಾತಿಗಳು ಅವರ ಮೂಲ ಜಾತಿಯನ್ನೇ ಬರೆಸುತ್ತಿದ್ದಾರೆ’ ಎಂದರು.
‘ದೀವರು ಸಮುದಾಯ ಈ ನೆಲ ಮೂಲದ ಒಂದು ಬುಡಕಟ್ಟು ಪರಂಪರೆಯನ್ನು ಹೊಂದಿದ ಜಾತಿಯಾಗಿದೆ. 1950ರ ದಶಕದಲ್ಲಿಯೇ ವ್ಯಾವಹಾರಿಕ ಕಾರಣದಿಂದ ಈಡಿಗ ಜನಾಂಗದವರು ಬಿಲ್ಲವರು ಮತ್ತು ನಾಮಧಾರಿಗಳನ್ನು ತಮ್ಮ ಪಂಗಡದೊಂದಿಗೆ ಸೇರಿಸಿಕೊಂಡಿದ್ದಾರೆ. ಆ ಬಳಿಕ ರಾಜಕೀಯವಾಗಿ ಪ್ರಬಲರಾದ ದೀವರನ್ನು ಈಡಿಗರು ನಮ್ಮವರೆಂದರು. ಸೇಂದಿ ಇಳಿಸುವ ಹವ್ಯಾಸ ಹೊಂದಿದ್ದ ದೀವರನ್ನು ಅವರು ತಮ್ಮವರೆಂದು ಹೇಳಿದ್ದರಿಂದ 1970ರ ದಶಕದ ಬಳಿಕ ಹೆಣ್ಣು- ಗಂಡು ಸಂಬಂಧಗಳೂ ದೊಡ್ಡ ಮಟ್ಟದಲ್ಲಿ ಆದವು. ಈ ಸಮೀಕರಣದಿಂದ ಜಿಲ್ಲೆಯ ದೀವರು ಈಡಿಗರು ಎಂದೇ ದಾಖಲೆಯಲ್ಲಿ ನಮೂದಾಗುವಂತಾಯಿತು’ ಎಂದು ಚಿಂತಕ ಡಾ.ಮೋಹನ್ ಚಂದ್ರಗುತ್ತಿ ಹೇಳಿದರು.
‘ಈಡಿಗ ಒಕ್ಕೂಟದಲ್ಲಿರುವ ಬಿಲ್ಲವರು ಮತ್ತು ನಾಮಧಾರಿಗಳು ಅವರವರ ಜಾತಿಗಳ ಹೆಸರು ದಾಖಲು ಮಾಡಿಕೊಂಡಿದ್ದಾರೆ. ದೀವರು ಮಾತ್ರ ಈಡಿಗರು ಎಂದು ಬರೆಸಬೇಕೆಂದು ಕೆಲವರು ಹೇಳುತ್ತಿದ್ದಾರೆ. ಈ ಯಜಮಾನಿಕೆಯ ನಡವಳಿಕೆ ಸರಿಯಲ್ಲ. ದೀವರು ಮುಖ್ಯಜಾತಿಯಾಗಿದೆ. 2 ಎ ವರ್ಗದಲ್ಲಿಯೇ ಇರುವ ದೀವರು ಅಲ್ಲಿಯೇ ಮುಂದುವರಿಯುತ್ತಾರೆ’ ಎಂದು ಪ್ರಗತಿಪರ ಹೋರಾಟಗಾರ ಹರ್ಷಕುಮಾರ್ ಕುಗ್ವೆ ಹೇಳಿದರು.
‘ನಮ್ಮ ಜಾತಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಗಣತಿಯಲ್ಲಿ ಮೂಲ ಜಾತಿ ಬರೆಸುವುದರಿಂದ ಯಾವುದೇ ಕಾನೂನು ಸಂಘರ್ಷ ಬರುವುದಿಲ್ಲ’ ಸಿದ್ದಾಪುರ ತಾಲ್ಲೂಕಿನ ತರಳಿ ಮಠದ ಅಧ್ಯಕ್ಷ ಎನ್.ಡಿ.ನಾಯ್ಕ ಎಂದು ಹೇಳಿದರು.
ಬಂಡಿ ರಾಮಚಂದ್ರ, ಬಂಡಿ ಸೋಮಶೇಖರ್, ಅಣ್ಣಪ್ಪ ಮಳಿಮಠ್, ಶ್ರೀಧರ್ ಈಡೂರು ಸೇರಿದಂತೆ ಸಮುದಾಯದ ಹಲವು ಮುಖಂಡರು ಭಾಗವಹಿಸಿದ್ದರು.
ನಮ್ಮ ಜಾತಿಯನ್ನು ಬರೆಸಲು ನಮಗೆ ಯಾವುದೇ ಮುಜುಗರವಿಲ್ಲ. ದೀವರು ಎಂದು ಬರೆಸಿಕೊಂಡರೆ ನಮ್ಮ ಸಮುದಾಯದ ನೈಜ ಸಂಖ್ಯೆ ಗೊತ್ತಾಗಲಿದೆ-ಸುರೇಶ್ ಬಾಳೆಗುಂಡಿ ಉಪಾಧ್ಯಕ್ಷ ಜಿಲ್ಲಾ ಆರ್ಯ ಈಡಿಗ ಸಂಘ
ಜಿಲ್ಲೆಯಲ್ಲಿ ದೀವರು ಬಹುಸಂಖ್ಯಾತ ಸಮುದಾಯವಾಗಿದೆ. ಈಡಿಗ ಒಕ್ಕೂಟದಲ್ಲಿದ್ದರೂ ನಮ್ಮ ಮೂಲ ಜಾತಿಯಿಂದ ಗುರುತಿಸಿಕೊಳ್ಳುವುದು ಸ್ವಾಭಿಮಾನದ ಸಂಕೇತ-ಎನ್.ಪಿ.ರಾಜು ರಿಪ್ಪನ್‌ಪೇಟೆ ಹೋಬಳಿ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.