ADVERTISEMENT

ವೇಗದ ಆಡಳಿತವನ್ನು ಜನರಿಗೆ ತಲುಪಿಸಿ: ಬಿ.ವೈ.ವಿಜಯೇಂದ್ರ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮೇ 2025, 15:14 IST
Last Updated 22 ಮೇ 2025, 15:14 IST
ಶಿಕಾರಿಪುರದಲ್ಲಿ ಗುರುವಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ನ್ನು ಸಂಸದ ಬಿ.ವೈ.ರಾಘವೇಂದ್ರ ವಿತರಿಸಿದರು. ಶಾಸಕ ಬಿ.ವೈ.ವಿಜಯೇಂದ್ರ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಇದ್ದಾರೆ.
ಶಿಕಾರಿಪುರದಲ್ಲಿ ಗುರುವಾರ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್‌ನ್ನು ಸಂಸದ ಬಿ.ವೈ.ರಾಘವೇಂದ್ರ ವಿತರಿಸಿದರು. ಶಾಸಕ ಬಿ.ವೈ.ವಿಜಯೇಂದ್ರ, ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ಇದ್ದಾರೆ.   

ಶಿಕಾರಿಪುರ: ‘ಆಡಳಿತದಲ್ಲಿ ಅಳವಡಿಸಿರುವ ಆಧುನಿಕ ತಂತ್ರಜ್ಞಾನದ ಅನುಕೂಲವನ್ನು ಗ್ರಾಮೀಣ ಜನರಿಗೆ ತಲುಪಿಸುವ ಕೆಲಸ ಗ್ರಾಮ ಆಡಳಿತಾಧಿಕಾರಿಗಳಿಂದ ಆಗಬೇಕು. ಆಗ ಸರ್ಕಾರದ ಉದ್ದೇಶ ಸದುಪಯೋಗ ಆಗಲಿದೆ’ ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಲ್ಯಾಪ್‌ಟಾಪ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗ್ರಾಮ ಆಡಳಿತಾಧಿಕಾರಿಗಳಿಗೆ ಸರ್ಕಾರ ಲ್ಯಾಪ್‌ಟಾಪ್ ನೀಡಿದ್ದು, ಅದರ ಮೂಲಕ ಜನರಿಗೆ ವೇಗದ ಸೇವೆ ನೀಡುವುದಕ್ಕೆ ಮುಂದಾಗಬೇಕು. ಗ್ರಾಮೀಣ ಪ್ರದೇಶದ ಜನರು, ಸರ್ಕಾರದ ನಡುವೆ ಸೇತುವೆಯಂತೆ ಕೆಲಸ ಮಾಡುವ ಗ್ರಾಮ ಲೆಕ್ಕಾಧಿಕಾರಿಗಳು ಜನರ ಕಷ್ಟಕ್ಕೆ ಸೂಕ್ತವಾಗಿ ಸ್ಪಂದಿಸಬೇಕು. ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಕಾರ್ಯಕ್ರಮ ಉತ್ತಮವಾಗಿ ಅನುಷ್ಠಾನಗೊಂಡಿದೆ. ಅದಕ್ಕಾಗಿ ಸರ್ಕಾರ ತಹಶೀಲ್ದಾರ್‌ಗೆ ಸನ್ಮಾನವನ್ನೂ ಮಾಡಿದೆ. ಇನ್ನಷ್ಟು ಉತ್ತಮ ಕೆಲಸಗಳನ್ನು ಎಲ್ಲರೂ ಸೇರಿ ಮಾಡೋಣ’ ಎಂದು ಹೇಳಿದರು.

ADVERTISEMENT

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ‘ಕಂದಾಯ ಇಲಾಖೆ ಅಧಿಕಾರಿಗಳು ನಿಗದಿತ ಅವಧಿಯಲ್ಲಿ, ಜನರನ್ನು ಕಚೇರಿಗೆ ಅಲೆದಾಡಿಸದಂತೆ, ಲಂಚಮುಕ್ತವಾಗಿ ಕೆಲಸ ಮಾಡಿಕೊಡಬೇಕು. ಆಗ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ, ಆಡಳಿತಕ್ಕೆ ಒಳ್ಳೆಯ ಹೆಸರು ಬರಲಿದೆ’ ಎಂದು ಹೇಳಿದರು.

ತಹಶೀಲ್ದಾರ್ ಮಲ್ಲೇಶ ಬೀರಪ್ಪ ಪೂಜಾರ್, ತಾಲ್ಲೂಕಿನ ಎಲ್ಲ ಗ್ರಾಮ ಆಡಳಿತಾಧಿಕಾರಿಗಳು ಇದ್ದರು.

ಬೆಳೆ ವಿಮೆ:

ತಾಲ್ಲೂಕಿಗೆ ₹ 10.89 ಕೋಟಿ ಬಿಡುಗಡೆ ಪ್ರಧಾನ ಮಂತ್ರಿ ಫಸಲ್‌ಭಿಮಾ ಯೋಜನೆ ಅಡಿಯಲ್ಲಿ 2024– 25ನೇ ಸಾಲಿಗೆ ಜಿಲ್ಲೆಗೆ ₹13.40 ಕೋಟಿ ಬೆಳೆವಿಮೆ ಪರಿಹಾರ ಬಿಡುಗಡೆ ಆಗಿದೆ. ಜಿಲ್ಲೆಯಲ್ಲಿ ಒಟ್ಟು 21369 ರೈತರು ಅರ್ಜಿ ಸಲ್ಲಿಸಿದ್ದು ಅದರಲ್ಲಿ ತಾಲ್ಲೂಕಿನ 15894 ರೈತರು ವಿಮೆ ಕಟ್ಟಿದ್ದರು. ಅವರಿಗೆ ₹ 10.89 ಕೋಟಿ ಬಿಡುಗಡೆ ಆಗಿದೆ. ಮುಂದಿನ ಮುಂಗಾರು ಸಂದರ್ಭದಲ್ಲೂ ರೈತರು ಬೆಳೆವಿಮೆ ಯೋಜನೆಗೆ ಹಣ ಕಟ್ಟುವ ಮೂಲಕ ವಿಮೆ ಪರಿಹಾರ ಪಡೆದುಕೊಳ್ಳಿ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.