ADVERTISEMENT

1 ಟಿಎಂಸಿಗೆ ಕೆಎನ್‌ಎನ್ ಒಪ್ಪಿಗೆ; ಹಗ್ಗಜಗ್ಗಾಟ

ಭದ್ರಾ ಜಲಾಶಯದಿಂದ 3 ಟಿಎಂಸಿ ಅಡಿ ನೀರು ನದಿಗೆ ಹರಿಸಲು ಬೇಡಿಕೆ

ವೆಂಕಟೇಶ ಜಿ.ಎಚ್.
Published 22 ಮಾರ್ಚ್ 2024, 7:07 IST
Last Updated 22 ಮಾರ್ಚ್ 2024, 7:07 IST
ಭದ್ರಾ ಜಲಾಶಯದ ನೋಟ (ಸಂಗ್ರಹ ಚಿತ್ರ)
ಭದ್ರಾ ಜಲಾಶಯದ ನೋಟ (ಸಂಗ್ರಹ ಚಿತ್ರ)   

ಶಿವಮೊಗ್ಗ: ಇಲ್ಲಿನ ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ವಿಜಯನಗರ ಜಿಲ್ಲೆ ಹೊಸಪೇಟೆಯ ತುಂಗಭದ್ರಾ ಜಲಾಶಯಕ್ಕೆ ತಕ್ಷಣ 3 ಟಿಎಂಸಿ ಅಡಿ ನೀರು ಹರಿಸುವ ಬೇಡಿಕೆ ಈಗ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್) ಹಾಗೂ ಸರ್ಕಾರದ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಗುರುವಾರ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಿತು. ಅಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ಅಂತಿಮ ತೀರ್ಮಾನ ಸರ್ಕಾರದ ವಿವೇಚನೆಗೆ ಬಿಡಲಾಯಿತು ಎಂದು ತಿಳಿದುಬಂದಿದೆ.

ನೀ ಕೊಡೆ, ನಾ ಬಿಡೆ: ತುಂಗಭದ್ರಾ ನದಿ ಪಾತ್ರ ಹಾಗೂ ಜಲಾಶಯದ ಸುತ್ತಲಿನ ನಗರ, ಪಟ್ಟಣಗಳಿಗೆ ಕುಡಿಯುವ ನೀರಿಗೆ ತೀವ್ರ ತೊಂದರೆ ಆಗಿದೆ. ಹೀಗಾಗಿ ಭದ್ರಾ ಜಲಾಶಯದಿಂದ ನದಿಗೆ ತಕ್ಷಣ 3 ಟಿಎಂಸಿ ಅಡಿ ನೀರು ಹರಿಸಿ ಎಂಬುದು  ಜಿಲ್ಲಾಡಳಿತಗಳ (ಬಳ್ಳಾರಿ, ವಿಜಯನಗರ, ಗದಗ, ಹಾವೇರಿ, ಕೊಪ್ಪಳ) ಬೇಡಿಕೆ.

ADVERTISEMENT

‘ಈಗ ಅಷ್ಟು ನೀರು ಹರಿಸಲು ಸಾಧ್ಯವಿಲ್ಲ. ಕೊಟ್ಟರೆ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ತೋಟಗಳಿಗೆ ನೀರಿನ ಕೊರತೆ ಆಗಲಿದೆ. 1 ಟಿಎಂಸಿ ಅಡಿ ಮಾತ್ರ ಕೊಡುತ್ತೇವೆ’ ಎಂಬುದು ಜಲಾಶಯದ ನಿರ್ವಹಣೆ ಹೊಣೆ ಹೊತ್ತ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವಾದ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ಬೆಂಗಳೂರಿನಲ್ಲಿ ಉನ್ನತಾಧಿಕಾರ ಸಮಿತಿ ಸಭೆ ನಡೆಸಲಾಯಿತು.

‘ದಾವಣಗೆರೆ, ಶಿವಮೊಗ್ಗ ಸೇರಿದಂತೆ ಆರು ಜಿಲ್ಲೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದೆವು. ಎರಡೂ ಕಡೆ ಅಂಕಿ–ಅಂಶಗಳ ಸಮೇತ ವಾದ–ಪ್ರತಿವಾದ ಆಲಿಸಿದ ಪ್ರಾದೇಶಿಕ ಆಯುಕ್ತರು ಅಂತಿಮವಾಗಿ ಸರ್ಕಾರದ ಗಮನಕ್ಕೆ ತಂದು ನಿರ್ಧಾರ ಕೈಗೊಳ್ಳಲಿದ್ದಾರೆ. ಶುಕ್ರವಾರ ಅಥವಾ ಶನಿವಾರ ಆದೇಶ ಹೊರಬೀಳಲಿದೆ’ ಎಂದು ಕೆಎನ್‌ಎನ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಭದ್ರಾ ಜಲಾಶಯದಲ್ಲಿ ಸದ್ಯ 24 ಟಿಎಂಸಿ ಅಡಿ ನೀರು ಇದೆ. ಅದರಲ್ಲಿ 13 ಟಿಎಂಸಿ ಅಡಿ ಡೆಡ್‌ ಸ್ಟೋರೇಜ್. ಉಳಿದ 11 ಟಿಎಂಸಿ ಅಡಿಯಲ್ಲಿ 7.5 ಟಿಎಂಸಿ ಅಡಿ ನಾಲೆಗೆ ಹರಿಸಬೇಕಿದೆ. 1 ಟಿಎಂಸಿ ಅಡಿ ಆವಿಯಾಗಲಿದೆ. 0.9 ಟಿಎಂಸಿ ಅಡಿ ನೀರನ್ನು ಕುಡಿಯಲು ಕಾಲುವೆ ಮೂಲಕವೇ ಹರಿಸಬೇಕಿದೆ’ ಎಂದು ಕೆಎನ್‌ಎನ್ ಅಧಿಕಾರಿಗಳು ಹೇಳುತ್ತಾರೆ.

ಇದು ಆಡಳಿತದ ವೈಫಲ್ಯ; ತೇಜಸ್ವಿ ಪಟೇಲ್ ಆಕ್ರೋಶ

‘ಕುಡಿಯಲು ನೀರು ಕೊಡಬೇಕೆಂಬುದು ಮೊದಲ ಆದ್ಯತೆ. ಅದನ್ನು ಒಪ್ಪಿಕೊಳ್ಳುತ್ತೇವೆ. ಜಲಾಶಯದಲ್ಲಿ ನಾವು ನೀರು ಖಾಲಿ ಮಾಡಿಕೊಂಡಿದ್ದರೆ ಅವರು ಎಲ್ಲಿಂದ ಕೇಳುತ್ತಿದ್ದರು. ನಾವು ನೀರು ಉಳಿಸಿಕೊಂಡಿರುವುದೇ ತಪ್ಪಾಗಿದೆಯೇ’ ಎಂದು ದಾವಣಗೆರೆಯ ರೈತ ಮುಖಂಡ ತೇಜಸ್ವಿ ಪಟೇಲ್ ಪ್ರಶ್ನಿಸುತ್ತಾರೆ.

‘ಇದು ಸಂಪೂರ್ಣ ಆಡಳಿತದ ವೈಫಲ್ಯ. ಮುಂದಾಲೋಚನೆ ಇಲ್ಲದೇ ಅಧಿಕಾರಿಗಳ ತಪ್ಪಿನಿಂದ ಈಗ ರೈತರಿಗೆ ತೊಂದರೆ ಆಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

‘1 ಟಿಎಂಸಿ ಅಡಿ 3 ದಿನ ನೀರು ಕಡಿತ’

‘ನೀರಾವರಿ ವೇಳಾಪಟ್ಟಿಯಂತೆ ಭದ್ರಾ ಅಚ್ಚುಕಟ್ಟು ಪ್ರದೇಶದ ಬಲದಂಡೆ ನಾಲೆಗೆ ಇನ್ನೂ 26 ದಿನ ಎಡದಂಡೆ ನಾಲೆಗೆ 29 ದಿನ ನೀರು ಹರಿಸಬೇಕು. 1 ಟಿಎಂಸಿ ಅಡಿ ನೀರು ನಾಲೆಗೆ 3 ದಿನ ಹರಿಸಲಾಗುತ್ತದೆ. ಆ ಭಾಗದವರ ಬೇಡಿಕೆಯಂತೆ 3 ಟಿಎಂಸಿ ಅಡಿ ನೀರು ಕೊಟ್ಟರೆ 9 ದಿನ ನಾಲೆಗಳಿಗೆ ನೀರು ಕಡಿತವಾಗಲಿದೆ’ ಎಂದು ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ. ‘ನಿಯಮಾವಳಿಯಂತೆ ಕುಡಿಯುವ ಉದ್ದೇಶಕ್ಕೆ ನದಿಗೆ 3.5 ಟಿಎಂಸಿ ಅಡಿ ನೀರು ಹರಿಸಬೇಕಿದೆ. ಈಗಾಗಲೇ 2.1 ಟಿಎಂಸಿ ಅಡಿ ಹರಿದಿದೆ. 0.88 ಟಿಎಂಸಿ ಅಡಿ ಮಾತ್ರ ಬಾಕಿ ಇದೆ. ಜೊತೆಗೆ ಕೈಗಾರಿಕೆಗಳಿಗೆ ಕೊಡಬೇಕಾದ 1.5 ಟಿಎಂಸಿ ಅಡಿ ಇದ್ದು ಇನ್ನೂ 2.3 ಟಿಎಂಸಿ ಅಡಿ ನೀರು ನದಿಗೆ ಹರಿಸಲು ಸಾಧ್ಯವಿದೆ. ಅದೂ ಮೇ ಅಂತ್ಯದವರೆಗೆ ಹರಿಸಬೇಕಿದೆ. ಹೀಗಾಗಿ ತಕ್ಷಣ ಬೇಡಿಕೆಯಷ್ಟು ನೀರು ಕೊಡಲು ಸಾಧ್ಯವಿಲ್ಲ’ ಎನ್ನುತ್ತಾರೆ.

ಕುಡಿಯುವ ನೀರು ಮೊದಲ ಆದ್ಯತೆ..

‘ಭದ್ರಾ ಜಲಾಶಯದಿಂದ 3 ಟಿಎಂಸಿ ಅಡಿ ನೀರು ಬಿಟ್ಟರೆ ಮಾತ್ರ ಸಿಂಗಟಾಲೂರು ಬ್ಯಾರೇಜ್‌ಗೆ 1 ಟಿಂಎಸಿ ಅಡಿಯಷ್ಟು ನೀರು ಬರುತ್ತದೆ. ಅದರಿಂದ ಗದಗ ಹಾಗೂ ವಿಜಯನಗರ ಕೊಪ್ಪಳ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ’ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳುತ್ತಾರೆ. ‘ಈ ಬರಗಾಲದಲ್ಲಿ ಕುಡಿಯುವ ನೀರಿಗೆ ಮೊದಲ ಆದ್ಯತೆ. ವಿಜಯನಗರ ಜಿಲ್ಲೆಯ ನಾಲ್ಕು ತಾಲ್ಲೂಕು ಹಾಗೂ 160ಕ್ಕೂ ಹೆಚ್ಚು ಹಳ್ಳಿಗಳ ದಾಹ ತೀರಿಸಲು ತುರ್ತಾಗಿ ನೀರು ಬೇಕಿದೆ. ಇಲ್ಲಿ ಯಾರದ್ದೂ ವೈಯಕ್ತಿಕ ತೀರ್ಮಾನ ಮುಖ್ಯವಲ್ಲ’ ಎಂದು ತಿಳಿಸಿದರು. ಹರಿಹರದಿಂದ ಹೊಸಪೇಟೆವರೆಗೆ ತುಂಗಭದ್ರಾ ನದಿಯ ಆಸುಪಾಸಿನ ಸಾವಿರಾರು ಹಳ್ಳಿಗಳು ರಾಣೆಬೆನ್ನೂರು ಹಾವೇರಿ ಗದಗ ಕೂಡ್ಲಿಗಿ ಹರಪನಹಳ್ಳಿ ಹೊಸಪೇಟೆ ಬಳ್ಳಾರಿ ಕೊ‍ಪ್ಪಳ ನಗರಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಹೀಗಾಗಿ ನೀರು ಹರಿಸಿ’ ಎಂಬುದು ನದಿ ಪಾತ್ರದ ಭಾಗದವರ ವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.