ADVERTISEMENT

ದೇಸಿ ವಿಮರ್ಶಾ ದರ್ಶನ ಅಗತ್ಯ: ಡಾ.ಬಿ.ವಿ. ವಸಂತಕುಮಾರ್

ಕುಪ್ಪಳಿಯಲ್ಲಿ ನಡೆದ ವಿಮರ್ಶಾ ಕಮ್ಮಟ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 6:10 IST
Last Updated 23 ಅಕ್ಟೋಬರ್ 2021, 6:10 IST
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರದಿಂದ ಆರಂಭವಾದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಐದು ದಿನಗಳ ವಿಮರ್ಶಾ ಕಮ್ಮಟವನ್ನು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉದ್ಘಾಟಿಸಿದರು
ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರದಿಂದ ಆರಂಭವಾದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಐದು ದಿನಗಳ ವಿಮರ್ಶಾ ಕಮ್ಮಟವನ್ನು ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಉದ್ಘಾಟಿಸಿದರು   

ತೀರ್ಥಹಳ್ಳಿ: ‘ಸಾಹಿತ್ಯ ಕೃತಿಯ ಓದುವ, ನೋಡುವ ಸೂಕ್ಷ್ಮಗ್ರಹಿಕೆಯಿಂದ ಬರೆಯುವ ಧಾವಂತ ಹುಟ್ಟುತ್ತದೆ. ಆಗ ಶಬ್ದ ಜೋಡಣೆ, ರಚನೆ, ಕಥಾ ವಸ್ತುವನ್ನೊಳಗೊಂಡ ಕುತೂಹಲ ಹುಟ್ಟಿಸುವ ಸಾಹಿತ್ಯ, ವಿಮರ್ಶೆ ರಚನೆಯಾಗುತ್ತದೆ’ ಎಂದು ಹಿರಿಯ ವಿಮರ್ಶಕ, ಶಿಬಿರದ ನಿರ್ದೇಶಕ ಪ್ರೊ. ಬಸವರಾಜ ಕಲ್ಗುಡಿ ಹೇಳಿದರು.

ಕುಪ್ಪಳಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಮತ್ತು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ಶುಕ್ರವಾರದಿಂದ ಆರಂಭವಾದ ರಾಜ್ಯಮಟ್ಟದ ಐದು ದಿನಗಳ ವಿಮರ್ಶಾ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯ ಪರಾಮರ್ಶಿಸುವಾಗ ನಮ್ಮ ಮುಂದೆ ಇರುವ ಕೃತಿಯ ಗಂಭೀರತೆಯನ್ನು ಅರ್ಥೈಸಿಕೊಳ್ಳಬೇಕು. ಆ ನಂತರ ಸೂಕ್ಷ್ಮ ಸಂವಾದದ ಮೂಲಕ ನಿರಂತರ ವಿಮರ್ಶಾ ಪ್ರಯತ್ನ ಮಾಡಬೇಕು’ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್, ‘ಪಾಶ್ಚಾತ್ಯ ಸಾಹಿತ್ಯದ ವಿಮರ್ಶಾ ಮಾನದಂಡ ಭಾರತದಲ್ಲಿ ಬಳಕೆಯಲ್ಲಿದೆ. ಇದರ ಬದಲು ನಮ್ಮ ನೆಲದ ಮಾನದಂಡ ಬಳಕೆಯಾಗಬೇಕು. ಆ ಮೂಲಕ ದೇಸಿ ವಿಮರ್ಶಾ ದರ್ಶನ ಮಾಡಬೇಕು.ವಿಮರ್ಶೆಗೆ ಸಂಯಮ ಮುಖ್ಯ.ಮೊಸರು ಗಡಿಗೆ ಒಡೆಯದ ಹಾಗೆ ಬೆಣ್ಣೆಯಾಗಬೇಕು. ಹಾಗೆಯೇ ವಾಗ್ವಾದದಿಂದ ಮೂಲ ಅಂಶ, ಆಶಯಕ್ಕೆ ಧಕ್ಕೆ ತರಬಾರದು. ಸಮಾನತೆ, ಸಹೋದರತೆ ಮೀರಿದ ವರ್ತನೆ ತೋರಿದರೆ ಸಮಾಜದ ಒಗ್ಗಟ್ಟು ಹಾಳಾಗುತ್ತದೆ’ ಎಂದು ಸೂಕ್ಷ್ಮವಾಗಿ ವಿವರಿಸಿದರು.

ಕಮ್ಮಟ ಉದ್ಘಾಟಿಸಿದ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ‘ಮಾಡುವ ಅಮೂಲ್ಯ ಕೆಲಸಗಳು ನಮಗೆ ತೃಪ್ತಿ ನೀಡಬೇಕು. ಆ ನಿಲುವಿನಲ್ಲಿ ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ಆದ್ದರಿಂದ ರಾಜಕೀಯ, ಜಾತಿ ಕಾರ್ಯಕ್ರಮಗಳನ್ನು ಕುಪ್ಪಳಿಯ ಸಭಾಂಗಣದಲ್ಲಿ ನಿರ್ಬಂಧಿಸಿದ್ದೇವೆ’ ಎಂದರು.

ಮುಖ್ಯಅತಿಥಿಗಳಾಗಿ ಡಾ. ಕುಮಾರ ಚಲ್ಯ, ಡಾ.ಬಿ.ಎಂ. ಪುಟ್ಟಯ್ಯ, ರಾಘವೇಂದ್ರ ತೊಗರ್ಸಿ, ಡಾ.ಎಂ. ಉಷಾ ಭಾಗವಹಿಸಿದ್ದರು. ಮಂಜು ಬಾದಾಮಿ ಪ್ರಾರ್ಥಿಸಿದರು.ಡಾ. ಮಾರ್ಷಲ್ ಶರಾಂ ನಿರೂಪಿಸಿದರು. ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್. ಸ್ವಾಗತಿಸಿದರು. ಪಾರ್ವತಿ ಪಿಟಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.