ಸಾಗರ: ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರುತ್ತಿರುವುದನ್ನು ಖಂಡಿಸಿ ಇಲ್ಲಿನ ಧರ್ಮಸ್ಥಳ ಅಭಿಮಾನಿಗಳ ವೇದಿಕೆಯಿಂದ ಗುರುವಾರ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.
ಮಹಾಗಣಪತಿ ದೇವಸ್ಥಾನದ ಎದುರು ಭಾಗದಿಂದ ಆರಂಭಗೊಂಡ ಮೆರವಣಿಗೆಗೆ ತಾಳಗುಪ್ಪ ಕೂಡ್ಲಿ ಮಠದ ಸಿದ್ದೇಶ್ವರ ಸ್ವಾಮೀಜಿ, ಬಳಸಗೋಡು ಭೃಂಗೇಶ್ವರ ಮಠದ ನೀಲಕಂಠ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು.
‘ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ಅತ್ಯಂತ ನೋವಿನ ಸಂಗತಿ. ಅಪಪ್ರಚಾರಗಳಿಂದ ಒಳ್ಳೆಯ ಕೆಲಸ ಮಾಡುವವರು ಹಿಂದೆ ಸರಿಯುವ ವಾತಾವರಣ ನಿರ್ಮಾಣವಾಗುತ್ತದೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಂತರ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಯಿತು. ‘ಧರ್ಮಸ್ಥಳ ಕ್ಷೇತ್ರದ ವ್ಯಾಪ್ತಿಯಲ್ಲಿ ಅನೇಕ ಅಮಾಯಕರ ಸಾವು ಸಂಭವಿಸಿದೆ. ಅಲ್ಲಿ ಶವಗಳನ್ನು ಹೂಳಲಾಗಿದೆ ಎಂದು ಆಧಾರರಹಿತವಾಗಿ ಆರೋಪ ಮಾಡಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚಿಸುವ ಅಗತ್ಯವೇ ಇರಲಿಲ್ಲ. ರಾಜ್ಯ ಸರ್ಕಾರ ಈ ತಪ್ಪು ಮಾಡಿದ ನಂತರ ಅದನ್ನು ಮುಚ್ಚಿಕೊಳ್ಳುವ ಸಲುವಾಗಿ ಕೆಲವು ಸಚಿವರು ಧರ್ಮಸ್ಥಳದ ಪರವಾಗಿ ಮಾತನಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ಟೀಕಿಸಿದರು.
‘ವೀರೆಂದ್ರ ಹೆಗ್ಗಡೆ ಅವರು ನಡೆದಾಡುವ ದೇವರು ಇದ್ದಂತೆ ಎನ್ನುವ ಭಾವನೆ ಹಿಂದೂ ಧರ್ಮೀಯರಲ್ಲಿದೆ. ಇಂತಹ ವ್ಯಕ್ತಿ ಹಾಗೂ ಪವಿತ್ರ ಕ್ಷೇತ್ರದ ವಿರುದ್ಧ ಸುಳ್ಳು ಸಂಗತಿಗಳನ್ನು ಹಬ್ಬಿಸುತ್ತಿರುವವರಿಗೆ ತಕ್ಕ ಶಾಸ್ತಿ ಆಗಬೇಕಿದೆ’ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಹೇಳಿದರು.
ಟಿ.ಡಿ.ಮೇಘರಾಜ್, ಮಲ್ಲಿಕಾರ್ಜುನ ಹಕ್ರೆ, ಮೈತ್ರಿ ಪಾಟೀಲ್, ಎಸ್.ವಿ.ಹಿತಕರ ಜೈನ್, ವಿಠ್ಠಲ್ ಪೈ ಮಾತನಾಡಿದರು. ಪ್ರಮುಖರಾದ ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್ ಪ್ರಸಾದ್, ಮಧುರಾ ಶಿವಾನಂದ್, ಆರ್.ಎಸ್.ಗಿರಿ, ಇಂದೂಧರ ಬಿ.ಎಸ್. ಪ್ರತಿಮಾ ಜೋಗಿ, ಅ.ಪು.ನಾರಾಯಣಪ್ಪ, ಪ್ರಸನ್ನ ಕೆರೆಕೈ, ಪ್ರಶಾಂತ್ ಕೆ.ಎಸ್. ಗಣಪತಿ ಮಂಡಗಳಲೆ, ರಾಜಶೇಖರ್ ಗಾಳಿಪುರ, ಚೇತನ್ ರಾಜ್ ಕಣ್ಣೂರು, ಐ.ವಿ.ಹೆಗಡೆ, ಆರ್.ಶ್ರೀನಿವಾಸ್, ಆರಗ ಚಂದ್ರಶೇಖರ್, ವ.ಶಂ.ರಾಮಚಂದ್ರ ಭಟ್, ಸವಿತಾ ವಾಸು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.