ADVERTISEMENT

ಸಾವರ್ಕರ್ ಭಾವಚಿತ್ರಕ್ಕೆ ಅಗೌರವ: ಬಿ.ಎಸ್‌.ಯಡಿಯೂರಪ್ಪ ಖಂಡನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:47 IST
Last Updated 15 ಆಗಸ್ಟ್ 2022, 4:47 IST
ಯಡಿಯೂರಪ್ಪ
ಯಡಿಯೂರಪ್ಪ   

ಶಿವಮೊಗ್ಗ: ವೀರ ಸಾವರ್ಕರ್ ಭಾವಚಿತ್ರ ತೆಗೆಯುವ ಪ್ರಯತ್ನ ಮಾಡಿರುವುದು ಅಕ್ಷಮ್ಯ ಅಪರಾಧ. ಕಿಡಿಗೇಡಿಗಳ ಈ ವರ್ತನೆ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ನಗರದ ಸಿಟಿ ಮಾಲ್‌ನಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆರವು ಮಾಡಿದ್ದ ಪ್ರಕರಣ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಕಿಡಿಗೇಡಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಇದೆ. ಅಂತಹವರಿಗೆ ಶಿಕ್ಷೆಯಾದಾಗ ಮಾತ್ರ ಇಂತಹ ಘಟನೆ ಮರುಕಳಿಸಲು ಸಾಧ್ಯವಿಲ್ಲ ಎಂದರು.

ಇಡೀ ವಿಶ್ವವೇ ಸಾವರ್ಕರ್ ಕೊಂಡಾಡುತ್ತಿದೆ.ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಬಹಳ ಬೇಸರದ ಸಂಗತಿ. ಆ ಕಿಡಿಗೇಡಿಯನ್ನು ಬಂಧಿಸಲಾಗಿದ್ದು, ಆತನಿಗೆ ಶಿಕ್ಷೆ ಕೂಡ ಆಗಲಿದೆ. ಈ ನಿಟ್ಟಿನಲ್ಲಿ ಕಾನೂನು ಕೈಗೆ ತೆಗೆದುಕೊಳ್ಳುವ ಕೆಲಸಕ್ಕೆ ಯಾರೂ ಹೋಗಬಾರದು ಎಂದರು.

ADVERTISEMENT

ಸಾವರ್ಕರ್ ಬಗ್ಗೆ ಇರುವ ಗೌರವ ಕೆಲವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಹಾಗಾಗಿ ಇಂತಹ ಅಪಮಾನ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

‘ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ವಿಚಾರಕ್ಕೆ ಸಂಬಂಧಿಸಿದಂತೆ ನಾನು ಪ್ರತಿಕ್ರಿಯಿಸಲ್ಲ. ಸದ್ಯ ಸಾವರ್ಕರ್ ಭಾವಚಿತ್ರ ತೆರವುಗೊಳಿಸಿದ ವಿಚಾರದ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅದರ ಬಗ್ಗೆ ಪ್ರತಿಕ್ರಿಯಿಸುತ್ತೇನೆ. ಉಳಿದಂತಹ ವಿಚಾರದಲ್ಲಿ ನನಗೆ ವಾಸ್ತವ ಸಂಗತಿ ಗೊತ್ತಿಲ್ಲ ಎಂದು ಉತ್ತರಿಸಿದರು.

***

ಜನೋತ್ಸವದ ಮೂಲಕ ಸಾಧನೆ ತಿಳಿಸುತ್ತೇವೆ

‘ಸಿಎಂ ಅಗುವ ಕನಸು ಕಾಣುವ ಕಾಂಗ್ರೆಸ್‌ನವರ ಆಸೆ ಈಡೇರುವುದಿಲ್ಲ, ಸರ್ಕಾರದ ಸಾಧನೆ ಜನೋತ್ಸವದ ಮೂಲಕ ಜನರಿಗೆ ತಿಳಿಸುತ್ತೇವೆ.ನಾವೆಲ್ಲಾ ಒಟ್ಟಾಗಿ ಪ್ರವಾಸ ಮಾಡುವ ಮೂಲಕ ಪಕ್ಷದ ಸಂಘಟನೆ ಮಾಡಲಿದ್ದೇವೆ. ಆಗ ಕಾಂಗ್ರೆಸ್‌ಗೆ ಬಿಜೆಪಿ ಶಕ್ತಿ ಅರಿವಾಗುತ್ತದೆ’ ಎಂದು ಬಿಎಸ್‌ವೈ ಹೇಳಿದರು.

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ನಿಶ್ಚಿತ. ಸಿಎಂ ಭ್ರಷ್ಟಾಚಾರದ ಬಗ್ಗೆ ಟೀಕಿಸುತ್ತಾ ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆ ಖಂಡನೀಯ. ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅವರ ಹೇಳಿಕೆ ಅಕ್ಷಮ್ಯ, ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ ಎಂದರು.

***

ಅಪಮಾನ; ಆರೋಪಿ ಬಂಧನ

ಶಿವಮೊಗ್ಗ: ಸಾವರ್ಕರ್ ಭಾವಚಿತ್ರಕ್ಕೆ ಅಗೌರವ ತೋರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಷರೀಫ್ ಅಲಿಯಾಸ್ ಅಸಿಫ್‌ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.

ಷರೀಫ್ ಗೆ ಆಗಸ್ಟ್ 26ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಷರೀಫ್ ವಿರುದ್ಧ ಶನಿವಾರ ಪ್ರಕರಣ ದಾಖಲಾದ ಬೆನ್ನಲ್ಲೇ ಬಂಧಿಸಿದ್ದೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.