ADVERTISEMENT

ಭೂತಾನ್ ಅಡಿಕೆ ಆತಂಕಬೇಡ: ಆರಗ ಅಭಯ

ಬಹುಸೇವಾ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 6:25 IST
Last Updated 20 ಅಕ್ಟೋಬರ್ 2022, 6:25 IST
ರಿಪ್ಪನ್‌ಪೇಟೆಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಯೋಜನೆಯ ಅಡಿ ₹ 80 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಹುಸೇವಾ ವಾಣಿಜ್ಯ ಸಂಕೀರ್ಣ ಹಾಗೂ ಗೋದಾಮು ಉದ್ಘಾಟನಾ ಕಾರ್ಯಕ್ರಮದ ದೃಶ್ಯ.
ರಿಪ್ಪನ್‌ಪೇಟೆಯ ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಯೋಜನೆಯ ಅಡಿ ₹ 80 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಹುಸೇವಾ ವಾಣಿಜ್ಯ ಸಂಕೀರ್ಣ ಹಾಗೂ ಗೋದಾಮು ಉದ್ಘಾಟನಾ ಕಾರ್ಯಕ್ರಮದ ದೃಶ್ಯ.   

ರಿಪ್ಪನ್‌ಪೇಟೆ: ಭೂತಾನ್ ಅಡಿಕೆ ಆಮದು ಕುರಿತು ರಾಜ್ಯದ ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.

ತಳಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಬಾರ್ಡ್ ಯೋಜನೆಯ ಅಡಿ ₹ 80 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ ಬಹುಸೇವಾ ವಾಣಿಜ್ಯ ಸಂಕೀರ್ಣ ಹಾಗೂ ದಾಸ್ತಾನು ಗೋದಾಮು ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಭೂತಾನ್ ದೇಶದಿಂದ ಅರ್ಧ ಬೆಲೆಯಲ್ಲಿ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬುವುದು ಸತ್ಯಕ್ಕೆ ದೂರವಾದ ಮಾತು. ಅಡಿಕೆ ಮಂಡಳಿಯ ಮಾನದಂಡದಂತೆ ಗುಣಮಟ್ಟದ ಅಡಿಕೆಯನ್ನು ತೆರಿಗೆ ಸಹಿತ ಖರೀದಿಗೆ ಸರ್ಕಾರ ಮುಂದಾಗಿದೆ ಎಂದು ಅವರು ಹೇಳಿದರು.

ADVERTISEMENT

ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಎಂಎಸ್‌ಐಎಲ್‌ ಅಧ್ಯಕ್ಷ ಎಚ್. ಹಾಲಪ್ಪ ಹರತಾಳು ಮಾತನಾಡಿ, ‘ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಪಾಲಿಗೆ ವರದಾನ ವಾಗಬೇಕು. ಕೆಲ ವರ್ಷಗಳಿಂದ ರೈತರು ಅಕಾಲಿಕ ಮಳೆಯಿಂದ ಅಡಿಕೆ, ಶುಂಠಿ, ಭತ್ತದ ಗದ್ದೆ, ಜೋಳದ ಬೆಳೆಗಳು ಹಾಳಾಗಿದ್ದು, ಇದೀಗ ಅಡಿಕೆಗೆ ಬೆಲೆ ಇದ್ದರೂ ತೋಟಗಳಲ್ಲಿ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಬೆಳೆ ಬಾರದೇ ಸಂಪೂರ್ಣ ನಾಶವಾಗಿದೆ. ಸಾಲದ ಸುಳಿಗೆ ಸಿಲುಕಿದ ರೈತ ಮರ್ಯಾದೆಗೆ ಅಂಜಿ ಆತ್ಮಹತ್ಯೆ ಕಡೆ ಮುಖ ಮಾಡಿ ಬದುಕಿಗೆ ವಿದಾಯ ಹೇಳುತ್ತಿರುವುದು ದುರದೃಷ್ಟಕರ. ಜಿಲ್ಲೆಯಲ್ಲಿ ಹೊಸನಗರ ತಾಲ್ಲೂಕಿನಲ್ಲಿ ಅತ್ಯಂತ ಹೆಚ್ಚು ರೈತ ಆತ್ಮಹತ್ಯೆ ಹಾಗೂ ಯುವ ಸಮೂಹ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಸಾಲ, ಸಾಲಕ್ಕಾಗಿ ಸಾಲ, ಸಾಲು ಸಾಲಾಗಿ ಸಾಲ. ಇದು ಈ ಹಿಂದೆ ಜಿಲ್ಲಾ ಬ್ಯಾಂಕ್‌ನಲ್ಲಿ ಇದ್ದ ನಿಯಮ. ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷರ ಅವಧಿಯಲ್ಲಿ ಆರ್ಥಿಕತೆಯ ಅನೀತಿಯಿಂದ ಅಂತ್ಯದೆಡೆಗೆ ಸಾಗಿತ್ತು. ಬ್ಯಾಂಕ್ ಹಾಲಿ ಅಧ್ಯಕ್ಷರ ಅವಧಿಯಲ್ಲಿ ಪುನಃ ಚೇತರಿಕೆ ಕಂಡು ರೈತರಿಗೆ ಆಸರೆಯಾಗಿದೆ’ ಎಂದರು.

ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮಾತನಾಡಿ, ‘ಗ್ರಾಮೀಣ ಪ್ರದೇಶದಲ್ಲಿಯ ರೈತ ಸಮುದಾಯಕ್ಕೆ ಉಪಯುಕ್ತವಾಗುವ ಕೃಷಿ ಉಪಕರಣ ಮತ್ತು ರಸಗೊಬ್ಬರ, ಕೀಟನಾಶಕ ಹಾಗೂ ಇನ್ನಿತರ ಕೃಷಿ ಸಲಕರಣೆಗಳ ಬೃಹತ್ ಮಾರಾಟ ಒಂದೇ ಸೂರಿನಡಿ ದೊರಕುವಂತೆ ಮಾಡಿದ ಸಹಕಾರಿ ಸಂಸ್ಥೆಯ ಮುಂದಾಲೋಚನೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು.

ತಳಲೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್. ದಿನೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಹೆದ್ದಾರಿಪುರ ಗ್ರಾಮ ಪಂಚಾಯಿತಿ ಆಧ್ಯಕ್ಷೆ ವನಿತಾ ಗಂಗಾಧರ, ಜಿಲ್ಲಾ ಸಹಕಾರ ಬ್ಯಾಂಕ್ ನಿರ್ದೇಶಕರಾದ ಜಿ.ಎನ್. ಸುಧೀರ್, ಎಂ.ಎಂ. ಪರಮೇಶ್‌, ಕ್ಷೇತ್ರಾಧಿಕಾರಿ ಇಂದ್ರಕುಮಾರ್, ಶಿಕ್ಷಕರಾದ ಸುರೇಶ್, ಭೋಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.