ADVERTISEMENT

11 ತಿಂಗಳ ಮಗು ಗಂಟಲಲ್ಲಿದ್ದ ಮೀನಿನ ತುಂಡು ತೆಗೆದು ಜೀವ ರಕ್ಷಿಸಿದ ವೈದ್ಯರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 16:26 IST
Last Updated 6 ಫೆಬ್ರುವರಿ 2024, 16:26 IST
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಂಗಳವಾರ ಗಂಟಲಲ್ಲಿ ಸಿಲುಕಿದ್ದ ಮೀನಿನ ತುಂಡು ತೆಗೆದ ವೈದ್ಯರು ಹಾಗೂ ಸಿಬ್ಬಂದಿ ಮಗುವಿನ ಆರೋಗ್ಯ ವಿಚಾರಿಸಿದರು
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ಮಂಗಳವಾರ ಗಂಟಲಲ್ಲಿ ಸಿಲುಕಿದ್ದ ಮೀನಿನ ತುಂಡು ತೆಗೆದ ವೈದ್ಯರು ಹಾಗೂ ಸಿಬ್ಬಂದಿ ಮಗುವಿನ ಆರೋಗ್ಯ ವಿಚಾರಿಸಿದರು   

ಶಿವಮೊಗ್ಗ: ಮೀನಿನ ತುಂಡು ನುಂಗಿ ಉಸಿರಾಟದ ತೊಂದರೆ ಅನುಭವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 11 ತಿಂಗಳ ಮಗುವನ್ನು ಶಿವಮೊಗ್ಗ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಜೀವಾಪಾಯದಿಂದ ಪಾರು ಮಾಡಿದ್ದಾರೆ. 

ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಹತ್ತಿರದ ಗಂಜೇನಹಳ್ಳಿಯ ಯೋಗೀಶ್‌ ಮತ್ತು ರೋಜಾ ದಂಪತಿಯ 11 ತಿಂಗಳ ಮಗು ಪ್ರತೀಕ್‌ ಮನೆಯೊಳಗೆ ಆಟವಾಡುತ್ತಿದ್ದಾಗ ಪಾತ್ರೆಯಲ್ಲಿದ್ದ ಪುಟ್ಟ ಮೀನಿನ ತುಂಡನ್ನು ನುಂಗಿದೆ. ಅದನ್ನು ಗಮನಿಸಿದ ಪೋಷಕರು ಹೊರ ತೆಗೆಯಲು ಪ್ರಯತ್ನಿಸಿದರೂ ಆಗಿಲ್ಲ. ಅಷ್ಟೊತ್ತಿಗಾಗಲೇ ಮಗುವಿನ ಸ್ಥಿತಿ ಗಂಭೀರವಾಗಿದೆ. ಬಳಿಕ ಪೋಷಕರು ಮಗುವನ್ನು ಸರ್ಜಿ ಆಸ್ಪತ್ರೆಗೆ ಕರೆ ತಂದಿದ್ದಾರೆ.

ಮಗುವನ್ನು ತೀವ್ರ ನಿಗಾಘಟಕದಲ್ಲಿರಿಸಿದ ಮಕ್ಕಳ ತಜ್ಞ ಡಾ.ಪ್ರದೀಪ್‌ ಗಂಟಲಲ್ಲಿ ಸಿಕ್ಕಿಕೊಂಡಿದ್ದ 11.3 ಸೆಂ.ಮೀ ಉದ್ದದ ಮೀನಿನ ತುಂಡು ಹೊರ ತೆಗೆದಿದ್ದಾರೆ.  

ADVERTISEMENT

ಚಿಕ್ಕಮಕ್ಕಳು ಈ ಹಿಂದೆ ಆಹಾರ ಪದಾರ್ಥ, ಇಲ್ಲವೇ ಚಾಕೊಲೇಟ್‌, ಕಾಡಿಗೆ ಡಬ್ಬಿ, ಅಡಿಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ನುಂಗಿ ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವು ಮಾಡಿಕೊಂಡಿವೆ. ಪೋಷಕರು ಅವರ ಕೈಗೆ ಆ ವಸ್ತುಗಳು ಸಿಗದಂತೆ ಇಡಬೇಕು ಎಂದು  ಡಾ.ಪ್ರದೀಪ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.