ADVERTISEMENT

ಪ್ರಾಣಿಪ್ರಿಯರ ಸೆಳೆದ ಶ್ವಾನ, ಬೆಕ್ಕು ಪ್ರದರ್ಶನ

2ನೇ ವರ್ಷದ ರಾಜ್ಯಮಟ್ಟದ ಪ್ರದರ್ಶನ; ಶ್ವಾನಪ್ರಿಯರ ಸಡಗರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2021, 3:12 IST
Last Updated 11 ಜನವರಿ 2021, 3:12 IST
ಚಿತ್ರ 1. ಶಿವಮೊಗ್ಗದ ಎನ್‍ಇಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ಶ್ವಾನಗಳು ಚಿತ್ರ 2, 3. ಶ್ವಾನದೊಂದಿಗೆ ಮಾಲೀಕರ ಸಂಭ್ರಮ
ಚಿತ್ರ 1. ಶಿವಮೊಗ್ಗದ ಎನ್‍ಇಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ಗಮನ ಸೆಳೆದ ಶ್ವಾನಗಳು ಚಿತ್ರ 2, 3. ಶ್ವಾನದೊಂದಿಗೆ ಮಾಲೀಕರ ಸಂಭ್ರಮ   

ಶಿವಮೊಗ್ಗ: ಕಣ್ಮನ ಸೆಳೆಯುವ ಅಚ್ಚ ಬಿಳಿಯ ಬಣ್ಣದ ಉದ್ದ ಕೂದಲಿನ ಬೆಕ್ಕುಗಳು, ಮಕ್ಕಳು ಪ್ರೀತಿಯಿಂದ ತಲೆ ನೇವರಿಸಿದಾಗ ಬಾಲ ಅಲ್ಲಾಡಿಸುವ, ಅತ್ತಿಂದಿತ್ತ ಓಡಾಡುವ ವಿವಿಧ ಜಾತಿಯ ಶ್ವಾನಗಳು...

ಸ್ಮಾರ್ಟ್‌ ಸಿಟಿ ಶಿವಮೊಗ್ಗ ಕೆನಲ್ ಕ್ಲಬ್‌ನಿಂದ ಭಾನುವಾರ ಎನ್‍ಇಎಸ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ 2ನೇ ವರ್ಷದ ರಾಜ್ಯಮಟ್ಟದ ಶ್ವಾನ ಮತ್ತು ಬೆಕ್ಕು ಪ್ರದರ್ಶನದಲ್ಲಿ ಕಂಡುಬಂದ ನೋಟವಿದು.

ವಿವಿಧ ರಾಜ್ಯಗಳ 45 ತಳಿಗಳ 300ಕ್ಕೂ ಅಧಿಕ ಶ್ವಾನಗಳನ್ನು ಒಂದೇ ಕಡೆ ನೋಡುವ ಅವಕಾಶ ನಗರದ ಶ್ವಾನಪ್ರಿಯರ ಪಾಲಿಗೆ ಒದಗಿಬಂತು.

ADVERTISEMENT

ಮುಧೋಳ, ಗೋಲ್ಡನ್ ರಿಟ್ರೀವರ್, ಡ್ಯಾಶ್ ಹೌಡ್, ಗ್ರೇಟ್ ಡೇನ್, ಡಾಬರ್‌ಮನ್, ಬೀಗಲ್, ಜರ್ಮನ್ ಶಫರ್ಡ್, ರ‍್ಯಾಟ್‌ ಮಿಲ್ಲರ್, ಅಮೆರಿಕನ್ ಬುಲ್‌ ಡಾಗ್, ಲ್ಯಾಬ್ರಡಾರ್ ರಿಟ್ರೀವರ್, ಪಗ್‌ ಸೇರಿ ವಿವಿಧ ತಳಿಯ ಚಿಕ್ಕಗಾತ್ರದ ಶ್ವಾನಗಳಿಂದ ಹಿಡಿದು ದೈತ್ಯಾಕಾರದ ಶ್ವಾನಗಳು ಪ್ರೇಕ್ಷಕರ ಗಮನ ಸೆಳೆದವು.

ದುಬಾರಿ ಬೆಲೆಯ ಜರ್ಮನ್ ಶಫರ್ಡ್, ಡಾಬರ್‌ಮನ್, ಗೋಲ್ಡನ್ ರಿಟ್ರೀವರ್, ಅಸ್ಕಿ, ಬೆಲ್ಜಿಯಂ ಮೆಲಾನಿತಳಿಯ ಶ್ವಾನಗಳು ಚುರುಕಿನ ಪ್ರದರ್ಶನ ನೀಡಿ ನೋಡುಗರಿಂದ ಚಪ್ಪಾಳೆ ಗಿಟ್ಟಿಸಿಕೊಂಡವು. ಹಲವು ಶ್ವಾನಗಳು ತಾವು ಕಲಿತ ಕೌಶಲವನ್ನು ಪ್ರದರ್ಶಿಸಲು ಕಾತರದಿಂದ ಕಾದವು.

ಕೋಲ್ಕತ್ತದ ಪ್ರಸಂಜಿತ್ ಚಟರ್ಜಿ ತೀರ್ಪುಗಾರರಾಗಿದ್ದರು. ಶ್ವಾನ ಪ್ರದರ್ಶನ ವಿಭಾಗದಲ್ಲಿ ₹ 25 ಸಾವಿರ ಪ್ರಥಮ, ₹ 15 ಸಾವಿರ ದ್ವಿತೀಯ, ₹ 10 ಸಾವಿರ ತೃತೀಯ ಬಹುಮಾನ ನೀಡಲಾಯಿತು‌. ಮುಧೋಳ ನಾಯಿಗೆ ಪ್ರದರ್ಶನದಲ್ಲಿ ಉಚಿತ ಪ್ರವೇಶವಿತ್ತು.

ಬೆಕ್ಕು ಪ್ರದರ್ಶನ: ಒಂದೆಡೆ ಶ್ವಾನ ಪ್ರದರ್ಶನ ಜನರನ್ನು ಆಕರ್ಷಿಸಿದರೆ, ಇನ್ನೊಂದೆಡೆ ವಿವಿಧ ತಳಿಯ ಬೆಕ್ಕುಗಳ ಪ್ರದರ್ಶನ ಕೂಡ ಯಶಸ್ವಿಯಾಯಿತು.

ಬೆಕ್ಕುಗಳ ಪ್ರದರ್ಶನದಲ್ಲಿ ಪರ್ಷಿಯನ್, ಬೆಂಗಾಲ್, ಇಂಡಿಮೋ, ಕ್ಲಾಸಿಕ್ ಲಾಂಗ್ ಹೇರ್, ಹಿಮಾಲಯನ್ ತಳಿ ಸೇರಿ 65ಕ್ಕೂ ಹೆಚ್ಚು ಬೆಕ್ಕುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.

ಬೆಕ್ಕು ಪ್ರದರ್ಶನದಲ್ಲಿ ₹ 3 ಸಾವಿರ ಪ್ರಥಮ ಬಹುಮಾನ, ₹ 2 ಸಾವಿರ ದ್ವಿತೀಯ ಬಹುಮಾನ, ₹ 1 ಸಾವಿರ ತೃತೀಯ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಪಾಲ್ಗೊಂಡಿದ್ದ ಎಲ್ಲ ಶ್ವಾನ ಮತ್ತು ಬೆಕ್ಕುಗಳ ಮಾಲೀಕರಿಗೆ ಪ್ರಮಾಣಪತ್ರ ನೀಡಲಾಯಿತು.

ಸೆಲ್ಫಿ ಸಂಭ್ರಮ: ಪ್ರದರ್ಶನ ನೋಡಲು ಬಂದಿದ್ದ ಸಾರ್ವಜನಿಕರು ಮುದ್ದಾದ ನಾಯಿಗಳ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ದಷ್ಟಪುಷ್ಟ ಶ್ವಾನಗಳ ಮೈ ಸವರಿ ಸಂತಸಪಟ್ಟರು. ಅವುಗಳ ವಿಶೇಷತೆ ಬಗ್ಗೆ ಮಾಲೀಕರಲ್ಲಿ ವಿಚಾರಿಸಿ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.