ADVERTISEMENT

ಲಸಿಕೆ ಪಡೆಯಲು ಹಿಂದೇಟು ಸಲ್ಲ: ಶಾಸಕ ಎಚ್.ಹಾಲಪ್ಪ ಹರತಾಳು

ಶಾಸಕ ಎಚ್.ಹಾಲಪ್ಪ ಹರತಾಳು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 3:44 IST
Last Updated 13 ಏಪ್ರಿಲ್ 2021, 3:44 IST
ಎಚ್.ಹಾಲಪ್ಪ ಹರತಾಳು
ಎಚ್.ಹಾಲಪ್ಪ ಹರತಾಳು   

ಸಾಗರ: ಕೊರೊನಾ ಸೋಂಕು ಹರಡುತ್ತಿರುವ ಪ್ರಮಾಣ ಹೆಚ್ಚುತ್ತಿದ್ದು, 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಹಿಂದೇಟು ಹಾಕಬಾರದು ಎಂದು ಶಾಸಕ ಎಚ್. ಹಾಲಪ್ಪ ಹರತಾಳು ಮನವಿ ಮಾಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಈವರೆಗೆ ಸುಮಾರು 10 ಸಾವಿರ ಮಂದಿ ಲಸಿಕೆ ಪಡೆದಿದ್ದಾರೆ. ನಗರವ್ಯಾಪ್ತಿಯ ಆಸ್ಪತ್ರೆಯಲ್ಲಿ 4230, ಗ್ರಾಮಾಂತರ ಪ್ರದೇಶದಲ್ಲಿ 1600 ಡೋಸ್ ಲಸಿಕೆ ಸಂಗ್ರಹದಲ್ಲಿದೆ. ಲಸಿಕೆ ಕೊರತೆ ಬೀಳದಂತೆ ನೋಡಿಕೊಳ್ಳಲಾಗಿದೆ’ಎಂದು ತಿಳಿಸಿದರು.

‘ನಗರವ್ಯಾಪ್ತಿಯ ರಾಮನಗರ ಬಡಾವಣೆಯಲ್ಲಿ ಡೆಂಗಿ ಜ್ವರ ಪ್ರಕರಣ ಹೆಚ್ಚುತ್ತಿರುವುದನ್ನು ಗಮನಿಸಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ನಗರಸಭೆ, ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ಹಿಂದೆ ನಿರ್ಮಿಸಿರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೇ ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಿದೆ. ಸ್ವಚ್ಛತೆಗೆ ಆದ್ಯತೆ ನೀಡುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದ್ದೇನೆ’ ಎಂದು ಹೇಳಿದರು.

ADVERTISEMENT

‘ನೆಹರೂ ಮೈದಾನದಲ್ಲಿ ಟ್ಯಾಗೋರ್ ಸಾಂಸ್ಕೃತಿಕ ಸಮುಚ್ಚಯ ನಿರ್ಮಾಣಕ್ಕೆ ಈಗಾಗಲೇ ₹ 1 ಕೋಟಿ ಬಿಡುಗಡೆಯಾಗಿದೆ. ಉಳಿದ ಹಣ ಬಿಡುಗಡೆ ಮಾಡಿಸುವ ಸಂಬಂಧ ಸಂಸದ ಬಿ.ವೈ. ರಾಘವೇಂದ್ರ ಅವರೊಂದಿಗೆ ಚರ್ಚೆ ನಡೆಸುತ್ತೇನೆ’ ಎಂದರು.

ಮಂಗನ ಕಾಯಿಲೆ ಹಾಲಿ ನಿಯಂತ್ರಣದಲ್ಲಿದೆ. ಭಾನುವಾರ ಹುಲಿದೇವರಬನ ಸಮೀಪ 10 ಮಂಗಗಳು ಸತ್ತಿರುವ ಕಾರಣ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಎಪಿಎಂಸಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು, ತಾಲ್ಲೂಕು ಪಂಚಾಯಿತಿ ಸದಸ್ಯ ದೇವೇಂದ್ರಪ್ಪ ಯಲಕುಂದ್ಲಿ, ನಗರಸಭೆ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್, ಪ್ರಮುಖರಾದ ಕೊಟ್ರಪ್ಪ ನೇದರವಳ್ಳಿ, ಅರುಣ್ ಕುಗ್ವೆ, ರವೀಂದ್ರ ಬಿ.ಟಿ. ಅರುಣ ಸೂರನಗದ್ದೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.