ADVERTISEMENT

ಹೊಳೆಹೊನ್ನೂರು: ಬಹುಗ್ರಾಮಗಳಿಗೆ ಕುಡಿಯುವ ನೀರು ಮರೀಚಿಕೆ

ನೀರಿನ ಕೊರತೆ, ಕುಡಿಯಲು ಯೋಗ್ಯವಲ್ಲದ ಕಾರಣ ಪೂರೈಕೆ ಸ್ಥಗಿತ

ಕುಮಾರ್ ಅಗಸನಹಳ್ಳಿ
Published 23 ಮಾರ್ಚ್ 2025, 6:13 IST
Last Updated 23 ಮಾರ್ಚ್ 2025, 6:13 IST
<div class="paragraphs"><p>ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿಗಾಗಿ ಅಳವಡಿಸಿರುವ ಫಿಲ್ಟರ್‌ಗಳು</p></div>

ಶಿವಮೊಗ್ಗ ತಾಲ್ಲೂಕಿನ ಬುಳ್ಳಾಪುರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿಗಾಗಿ ಅಳವಡಿಸಿರುವ ಫಿಲ್ಟರ್‌ಗಳು

   

ಹೊಳೆಹೊನ್ನೂರು: ಸಮೀಪದ ಬುಳ್ಳಾಪುರ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಬಹುಗ್ರಾಮ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿತ್ತು. ಆದರೆ ನದಿಯ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ಕೆಲವೇ ದಿನಗಳಲ್ಲಿ ಇದು ಸ್ಥಗಿತಗೊಂಡಿದೆ.

ತುಂಗಾ ನದಿಯಿಂದ ಬುಳ್ಳಾಪುರದ ಸುತ್ತಲಿನ 18 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಸರ್ಕಾರದಿಂದ ₹ 13.83 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿತ್ತು. ಐದು ವರ್ಷಗಳ ಹಿಂದೆ ಇದಕ್ಕೆ ಚಾಲನೆಯೂ ಸಿಕ್ಕಿತ್ತು. ಆದರೆ, ಬೇಸಿಗೆ ಆರಂಭದಲ್ಲಿ ತುಂಗಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಯೋಜನೆಗೆ ಗ್ರಹಣ ಹಿಡಿಯಲಾರಂಭಿಸಿತು. ಹೊಳಲೂರು ಬಳಿ ತುಂಗಭದ್ರಾ ನದಿಗೆ ತಡೆಗೋಡೆ ನಿರ್ಮಾಣ ಮಾಡಿ ಅಲ್ಲಿ ನೀರು ಹಿಡಿದಿಟ್ಟು ಬುಳ್ಳಾಪುರದವರೆಗೂ ತಂದು ಪೂರೈಕೆ ಮಾಡುವ ಪ್ರಯತ್ನವೂ ನಡೆದಿತ್ತು. ಆದರೆ ಅದೂ ವಿಫಲವಾಗಿದೆ.

ADVERTISEMENT

ನೀರಿಲ್ಲದ ಸ್ಥಳದಲ್ಲಿ ಯೋಜನೆ: ಮಳೆಗಾಲದಲ್ಲಿ ಮೈದುಂಬಿ ಹರಿಯುವ ತುಂಗಾ ನದಿ ಬೇಸಿಗೆಯಲ್ಲಿ ಬರಿದಾಗುತ್ತದೆ. ನದಿಯ ದಡದಲ್ಲಿರುವ ಗ್ರಾಮಗಳ ನಿವಾಸಿಗಳು ಕೃಷಿ ಬಳಕೆಯ ಉದ್ದೇಶದಿಂದ ನದಿಗೆ ಸಾಕಷ್ಟು ಮೋಟರ್‌ಗಳನ್ನು ಅಳವಡಿಸಿದ್ದಾರೆ. ಇದರಿಂದಾಗಿ ನದಿಯಲ್ಲಿ ನೀರೇ ಇರದಂತಾಗಿದೆ. ಹಾಗೊಮ್ಮೆ ನೀರು ಸಿಕ್ಕರೂ ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ. 

ಯೋಜನೆಯನ್ನು ಯೋಗ್ಯ ಸ್ಥಳದಲ್ಲಿ ಅನುಷ್ಠಾನಗೊಳಿಸಿಲ್ಲ. ಹೊಳಲೂರು-ಹಾಡೋನಹಳ್ಳಿ ಮಧ್ಯದಲ್ಲಿ ಯೋಜನೆ ಆರಂಭಿಸಿದ್ದರೆ ತುಂಗಭದ್ರಾ ನದಿ ನೀರನ್ನು ಕುಡಿಯುವ ಉದ್ದೇಶಕ್ಕೂ ಬಳಸಬಹುದಿತ್ತು ಎಂದು ಸ್ಥಳೀಯರು ಹೇಳುತ್ತಾರೆ.  

ನದಿಯಿಂದ ನೀರು ಎತ್ತಿ ಕ್ಲೋರಿನೇಷನ್ ಮಾಡಿ ಸಮೀಪದ ಸಿದ್ದರಮಟ್ಟಿಯಲ್ಲಿ ಸ್ಥಾಪಿತವಾಗಿರುವ ಟ್ಯಾಂಕ್‌ಗೆ ತಂದು, ಅಲ್ಲಿಂದ ಪ್ರಾಯೋಗಿಕವಾಗಿ ಒಂದೆರಡು ಬಾರಿ ಬುಳ್ಳಾಪುರ, ಸೂಗೂರು, ಹೊಳೆಹಟ್ಟಿ, ಹೊಳಲೂರು, ಮಡಿಕೆ ಚೀಲೂರು, ಕ್ಯಾತಿನಕೊಪ್ಪಕ್ಕೆ ನೀರು ಹರಿಸಲಾಗಿತ್ತು. ನದಿ ನೀರು ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದ ಕಾರಣ ಈ ಘಟಕಕ್ಕೆ ಬೀಗ ಬಿದ್ದಿದೆ.

ಯೋಜನೆಯಡಿ ನಿರ್ಮಿಸಿದ್ದ ಶುದ್ದೀಕರಣ ಘಟಕ ಶಿಥಿಲಾವಸ್ಥೆ ತಲುಪಿದೆ. ಮೋಟರ್‌ಗಳು ಸೂಕ್ತ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿವೆ. ನೀರು ಸರಬರಾಜು ಮಾಡುವ ಟ್ಯಾಂಕ್‌ಗಳು ಹಾಳುಬಿದ್ದಿವೆ. ಪಂಪ್‌ಹೌಸ್, ಕ್ಲೋರಿನೇಷನ್ ಘಟಕ ಸೇರಿ ಟ್ಯಾಂಕ್‌ಗಳು ಖಾಲಿ ಬಿದ್ದಿವೆ. 18 ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯ ಘಟಕ ಉಪಯೋಗಕ್ಕೆ ಬಾರದಂತಾಗಿರುವುದು ವಿಪರ್ಯಾಸ. ಬೇಸಿಗೆ ಆರಂಭವಾಗಿದ್ದರಿಂದ ಹೊಳಲೂರು ಸುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಲಿದೆ.

ಹರಮಘಟ್ಟ, ಮಡಿಕೆ ಚೀಲೂರು, ಕ್ಯಾತಿನಕೊಪ್ಪ, ಬೀಕನಕೆರೆ, ಸೋಮಿನಕೊಪ್ಪ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಬೇಸಿಗೆಯಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತಿದ್ದು, ಯೋಜನೆಯ ನೀರನ್ನು ಕೆರೆಕಟ್ಟೆಗಳಿಗೆ ತುಂಬಿಸುವ ಕಾರ್ಯಕ್ಕೆ ಮುಂದಾಗಬೇಕು. ಇದರಿಂದ ಬೋರ್‌ವೆಲ್‌ಗಳ ಅಂತರ್ಜಲ ವೃದ್ಧಿ ಆಗಲಿದೆ ಎಂಬುದು ಗ್ರಾಮಸ್ಥರ ಆಗ್ರಹ.

ಬುಳ್ಳಾಪುರ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿಗಾಗಿ ನಿರ್ಮಾಣಗೊಂಡಿರುವ ಪಂಪ್‌ಹೌಸ್
ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಹೆಚ್ಚಾಗಿದೆ. ತುಂಗಾ ನದಿಗೆ ಶಿವಮೊಗ್ಗ ನಗರದ ಕೊಳಚೆ ನೀರು ಸೇರುತ್ತಿದೆ. ಇದು ಕುಡಿಯುವುದಕ್ಕೆ ಯೋಗ್ಯವಲ್ಲ
ಸಿದ್ದೇಶ್ ಕ್ಯಾತಿನಕೊಪ್ಪ ನಿವಾಸಿ
ತುಂಗಾ ಡ್ಯಾಂನಿಂದ ನೇರವಾಗಿ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡಿ ಸುತ್ತಲಿನ ಗ್ರಾಮಗಳಿಗೆ ಒದಗಿಸುವ ಕೆಲಸವಾಗಬೇಕು. ತಡೆಗೋಡೆ ನಿರ್ಮಾಣ ಮಾಡಿ ಭದ್ರಾ ನದಿ ನೀರನ್ನು ವಾಪಸ್‌ ತಂದರೆ ಕೃಷಿ ಚಟುವಟಿಕೆಗೆ ಸಾಕಾಗುವುದಿಲ್ಲ.
ಷಣ್ಮುಖಪ್ಪ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸೋಮಿನಕೊಪ್ಪ
ಸ್ಮಶಾನ ಜಾಗದ ಕೊನೆಯ ಭಾಗದಲ್ಲಿ ಕುಡಿಯುವ ನೀರಿನ ಯೋಜನೆಯ ಘಟಕ ಸ್ಥಾಪಿಸಲಾಗಿದೆ. ದುರ್ವಾಸನೆಯಿಂದಾಗಿ ನೀರನ್ನು ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುವುದೋ ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲಾಗುವುದು
ಸವಿತಾ ಪಿಡಿಒ ಬೇಡರಹೊಸಹಳ್ಳಿ ಗ್ರಾ.ಪಂ.
ತಾಂತ್ರಿಕ ತೊಂದರೆಯಿಂದಾಗಿ ಕೆಲಸ ಅಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿ ನೀರು ಒದಗಿಸುವ ಕಾರ್ಯ ಕೈಗೊಳ್ಳಲಾಗುವುದು
ಶಾರದಾ ಪೂರ್ಯಾನಾಯ್ಕ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.