ADVERTISEMENT

ತೀರ್ಥಹಳ್ಳಿ: ಮಳೆ ಊರಿನಲ್ಲಿ ಎಲ್ಲೆಲ್ಲೂ ಬರದ ಛಾಯೆ

ಹರಿವು ನಿಲ್ಲಿಸಿದ ತುಂಗಾ, ಮಾಲತಿ; ಮೂಲ ಮಲೆನಾಡಾಗಿ ಉಳಿದಿಲ್ಲ...

ನಿರಂಜನ ವಿ.
Published 4 ಏಪ್ರಿಲ್ 2024, 6:59 IST
Last Updated 4 ಏಪ್ರಿಲ್ 2024, 6:59 IST
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು   

ತೀರ್ಥಹಳ್ಳಿ: ನಿತ್ಯಹರಿದ್ವರ್ಣ, ಶೋಲಾ ಕಾನನದ ನಡುವೆ ಮೊರೆಯುತ್ತಿದ್ದ ತೊರೆಗಳು ಸದ್ದು ನಿಲ್ಲಿಸಿವೆ. ಮಳೆಗಾಲದಲ್ಲಿ ಭೋರ್ಗರೆವ ಜೀವನದಿ ತುಂಗೆ, ಮಾಲತಿ ಜೀವನದಿಗಳು ಬಿಸಿಲಿನ ಬೇಗೆಗೆ ಬೆಂದು ಕಣ್ಮರೆಯಾಗಿವೆ.

ಮಳೆಯೂರಲ್ಲಿ ಈಗ ಎಲ್ಲೆಲ್ಲೂ ಬರದ ಛಾಯೆ ಆವರಿಸಿದೆ. ಜನ, ಜಾನುವಾರುಗಳ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ನದಿಯ ಒಡಲು ಬರಿದಾಗಿದ್ದು ಮರಳುಭೂಮಿಯಂತೆ ಕಣ್ಣಿಗೆ ರಾಚುತ್ತಿದೆ. 

ಏಪ್ರಿಲ್‌ ಆರಂಭದಲ್ಲಿಯೇ ನದಿ ಬರಿದಾಗಿ, ಜನಜೀವನ ಬಿಸಿಲಿನ ಝಳಕ್ಕೆ ತತ್ತರಿಸಿದೆ. ಮೇಘ ಸ್ಫೋಟಗೊಂಡು ಒಂದೇ ಸಮನೆ ಸುರಿದ ಮಳೆಯ ನೀರು ಬೇಸಿಗೆಗೆ ಸಾಕೆನ್ನುವಷ್ಟರಲ್ಲಿ ಹರಿದು ಖಾಲಿಯಾಗಿದೆ. ಮಳೆ ನಾಡು ತನ್ನ ಅಂತರ್ಗತ ಪ್ರಕೃತಿ ಸೌಂದರ್ಯ ಕಳೆದುಕೊಳ್ಳುತ್ತಿದ್ದು, ಮೂಲ ಮಲೆನಾಡಾಗಿ ಉಳಿದಿಲ್ಲ ಎಂಬುದನ್ನು ಇನ್ನಷ್ಟು ವಿಸ್ತರಿಸಿ ಹೇಳುವ ಅಗತ್ಯವಿಲ್ಲ.

ADVERTISEMENT
ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು

ನಿಸರ್ಗದತ್ತವಾದ ಕಾಡಿನಲ್ಲಿ ನೀರನ್ನು ಶೇಖರಿಸಿಕೊಳ್ಳುತ್ತಿದ್ದ ಬೃಹತ್‌ ಮರಗಳು, ಬಿದಿರು ನಾಶವಾಗಿದೆ. ನದಿ ಪಾತ್ರಗಳು ಮರಳು ಗಣಿಗಾರಿಕೆಯಿಂದ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡಿವೆ. ಮಿತಿಮೀರಿದ ನೀರು ಬಳಕೆಯಿಂದ ಭೂಮಿಯ ಮೇಲ್ಪದರದಲ್ಲಿ ಸಿಗುತ್ತಿದ್ದ ಗುಮ್ಮಿ, ಬಾವಿ, ಕೆರೆಗಳು ಜೀವಕಳೆ ಇಲ್ಲದೆ ಬರಿದಾಗುತ್ತಿರುವುದು ಮೂಲ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ.

ಅಭಿವೃದ್ಧಿಯ ವೇಗದಲ್ಲಿ ಬೃಹತ್‌ ಗಾತ್ರದ ಗುಡ್ಡಗಳು ಧರೆಗುರುಳುತ್ತಿವೆ. ಮಿತಿಮೀರಿದ ಲೇಔಟ್‌ಗಳಿಗೆ ಯಥೇಚ್ಚ ಮಣ್ಣು ಬಳಕೆಯಾಗುತ್ತಿದ್ದು ಕೃಷಿ ಜಮೀನು ಮೂಲ ಸ್ವರೂಪ ಕಳೆದುಕೊಳ್ಳುತ್ತಿವೆ. ನದಿ ಪಾತ್ರದ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಾಣಿಸುವ ಗಿಡಗಂಟಿಗಳೆಲ್ಲ ನಾಶವಾಗುತ್ತಿದ್ದು ಜಲಚರಗಳು ಸಾವು ಬದುಕಿನ ನಡುವೆ ದಿನ ದೂಡಬೇಕಾಗ ಪರಿಸ್ಥಿತಿ ನಿರ್ಮಾಣವಾಗಿದೆ.

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ತುಂಗಾ ನದಿ ಹರಿವು ನಿಲ್ಲಿಸಿರುವುದು

ಅರಿಯದ ಅರಣ್ಯ ಕಗ್ಗಂಟು: 

‘ಅಕೇಶಿಯಾ, ಸಾಗುವಾನಿ, ಗೇರು ಮುಂತಾದ ನೆಡುತೋಪುಗಳನ್ನು ಬೆಳೆಸುವುದು ಹಾಗೂ ಕಟಾವು ಮಾಡುವ ಪ್ರವೃತ್ತಿ ಪ್ರಕೃತಿಗೆ ವಿರುದ್ಧವಾದುದು. ಜೀವವೈವಿಧ್ಯತೆಯ ಬಗ್ಗೆ ಪಾಠ ಮಾಡಬೇಕಿದ್ದ ಅರಣ್ಯ ಇಲಾಖೆ ತನ್ನ ಜ್ಞಾನವನ್ನು ನೆಲ ಹಾಳು ಮಾಡಲು ಬೆಳೆಸಿಕೊಂಡಿದೆ. ಎಂತಹ ಬೇಸಿಗೆಯಾಗಿದ್ದರೂ ಬಾಲ್ಯದಲ್ಲಿ ನದಿಯಲ್ಲಿನ ಮರಳು ಕಾಣಿಸುತ್ತಿರಲಿಲ್ಲ. ನದಿಯಲ್ಲಿ ಅಲ್ಪವಾದರೂ ನೀರು ಹರಿಯುತ್ತಿತ್ತು. ಸಮೃದ್ಧವಾದ ಗುಡ್ಡ ಬೆಟ್ಟಗಳನ್ನು ಅಭಿವೃದ್ಧಿ, ಗಿಡನೆಡುವ ಹೆಸರಿನಲ್ಲಿ ಧ್ವಂಸ ಮಾಡಲಾಗಿದೆ. ಗುಡ್ಡದಿಂದ ನೀರು ಜಿನುಗುತ್ತಿದ್ದ ಒರತೆಗಳು ಹಾಳಾಗಿವೆ. ಮಣ್ಣು ಸಡಿಲಗೊಂಡು ನದಿಯಲ್ಲಿ ಸ್ವಾಭಾವಿಕ ಗುಂಡಿಗಳನ್ನು ಆವರಿಸಿಕೊಂಡಿದೆ. ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಭೂಮಿಯ ತತ್ವಗಳನ್ನು ಅರಿತುಕೊಳ್ಳಲು ಸೋತಿವೆ’ ಎಂದು ಕೋಡ್ಲು ವೆಂಕಟೇಶ್‌ ಬೇಸರ ವ್ಯಕ್ತಪಡಿಸುತ್ತಾರೆ.

ತೀರ್ಥಹಳ್ಳಿ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಸಮೀಪ ತುಂಗಾ ನದಿಯಲ್ಲಿ ನೀರು ಬರಿದಾಗಿರುವುದು

ಮಿಶ್ರತಳಿಗಳ ನಾಶ: 

ಕೃಷಿ ಭೂಮಿ ವಿಸ್ತರಣೆ, ಖುಷ್ಕಿ ಭೂಮಿಯಲ್ಲಿ ನಿರೀಕ್ಷೆಗೂ ಮೀರಿ ಅಡಿಕೆ ತೋಟಗಳ ನಿರ್ಮಾಣವಾಗುತ್ತಿದೆ. ತೋಟಗಳನ್ನು ರಕ್ಷಿಸಿಕೊಳ್ಳಲು ನದಿಯ ನೀರು ಯಥೇಚ್ಛವಾಗಿ ಬಳಕೆಯಾಗುತ್ತಿದೆ. ಅಲ್ಲದೇ ಮಲೆನಾಡಿನಾದ್ಯಂತ ಏಕಜಾತಿಯ ಬೆಳೆ ಪದ್ಧತಿ ಇತ್ತೀಚೆಗೆ ಬಹಳ ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ. ಅಡಿಕೆ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿದ್ದು ಹೆಚ್ಚಿನವರು ಅಡಿಕೆಗೆ ಮಾರು ಹೋಗುತ್ತಿದ್ದಾರೆ. ಕಾಡು ರಕ್ಷಿಸುವ ಅರಣ್ಯ ಇಲಾಖೆಯೇ ಅಕೇಶಿಯಾ, ಗೇರು, ಸಾಗುವಾನಿ ಮುಂತಾದ ಏಕಜಾತಿಯ ಮರಗಳನ್ನು ಪೋಷಿಸುತ್ತಿರುವುದರಿಂದ ಮಲೆನಾಡಿನ ಪಾರಂಪರಿಕ ಜೀವವೈವಿಧ್ಯ ನಾಶದ ಹಾದಿ ಹಿಡಿಯಲು ಪ್ರಮುಖ ಕಾರಣವಾಗಿದೆ ಎಂದು ಪರಿಸರ ಆಸಕ್ತರು ಬೇಸರ ವ್ಯಕ್ತಪಡಿಸಿದ್ದಾರೆ. 

ಮದನ್‌ ಎಚ್.ಎಂ.
ತುಂಬಿ ಹರಿಯಬೇಕಿದ್ದ ತುಂಗಾ ಮಾಲತಿ ನದಿಯ ನೀರು ನಿಶ್ಚಲವಾಗಿದೆ. ಏಪ್ರಿಲ್‌ ತಿಂಗಳ ಆರಂಭದಲ್ಲಿ ನದಿ ಬತ್ತಿರುವುದರಿಂದ ಸಾಗುವಳಿಗೆ ನೀರಿನ ಕೊರತೆ ಆಗಲಿದೆ. ಮಳೆಯಾಗದಿದ್ದರೆ ಬೆಳೆ ನಾಶವಾಗಲಿದೆ
ಮದನ್‌ ಎಚ್.‌ಎಂ. ರೈತ ಹೊಸಹಳ್ಳಿ
ಕೋಡ್ಲು ವೆಂಕಟೇಶ್
ಜೆಸಿಬಿ ಹಿಟಾಚಿ ಕೈಗಾರಿಕಾ ಅರಣ್ಯ ಬಂದ ನಂತರ ಪರಿಸರ ಹಾಳಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಸ್ಥಳೀಯ ಸಸ್ಯ ಪ್ರಭೇದ ಕಡಿದು ನೆಡುತೋಪು ನಿರ್ಮಿಸಿದ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕು
ಕೋಡ್ಲು ವೆಂಕಟೇಶ್‌ ರೈತ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.