ADVERTISEMENT

ಬನ್ನಿ ಮುಡಿದು ದಸರಾ ಆಚರಣೆ

ವಿವಿಧ ಗ್ರಾಮದ ದೇವರ ಸಮ್ಮುಖದಲ್ಲಿ ಬನ್ನಿ ಪೂಜೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:43 IST
Last Updated 16 ಅಕ್ಟೋಬರ್ 2021, 4:43 IST
ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದಲ್ಲಿ ಶುಕ್ರವಾರ ದಸರಾ ಪ್ರಯುಕ್ತ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು
ಶಿಕಾರಿಪುರ ತಾಲ್ಲೂಕಿನ ಬೇಗೂರು ಗ್ರಾಮದ ಮರಡಿ ತಾಂಡಾದಲ್ಲಿ ಶುಕ್ರವಾರ ದಸರಾ ಪ್ರಯುಕ್ತ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜನರು   

ಶಿಕಾರಿಪುರ:ವಿವಿಧ ಗ್ರಾಮದ ದೇವರ ಸಮ್ಮುಖದಲ್ಲಿ ತಾಲ್ಲೂಕಿನ ಬೇಗೂರು ಗ್ರಾಮ ಮರಡಿ ತಾಂಡಾದ ಗಾಳಿ ಆಂಜನೇಯ ದೇವಸ್ಥಾನದಲ್ಲಿ ಶುಕ್ರವಾರ ಬನ್ನಿ ಮುಡಿಯುವ ಮೂಲಕ ದಸರಾ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಪಟ್ಟಣದ ಹುಚ್ಚರಾಯಸ್ವಾಮಿ, ದೊಡ್ಡಕೇರಿ ಗಿಡ್ಡಯ್ಯ ಸ್ವಾಮಿ, ಶಿರಸಿ ಮಾರಿಕಾಂಬಾ ದೇವಿ, ಸೊಪ್ಪಿನಕೇರಿ ಹುಲಿಕಟ್ಟೆಪ್ಪಸ್ವಾಮಿ, ಬೇಗೂರು ಗ್ರಾಮದ ಆಂಜನೇಯಸ್ವಾಮಿ, ಬೆಂಡೆಕಟ್ಟೆ ಬಸವೇಶ್ವರ ಸ್ವಾಮಿ, ಆಪಿನಕಟ್ಟೆ ಕೊನೆ ಬಸವಣ್ಣ ಹಾಗೂ ಬಾಳೆಕೊಪ್ಪದ ಹನುಮಂತ ದೇವರ ಮೂರ್ತಿಯನ್ನು ಪಲ್ಲಕ್ಕಿ ಮೂಲಕ ಬೇಗೂರುಗ್ರಾಮದ ಮರಡಿ ತಾಂಡಾಗೆ ಹೊತ್ತು ತಂದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.

ಸಂಪ್ರದಾಯದಂತೆ ಮೈಸೂರು ಪೇಟಾ ಧರಿಸಿದ್ದ ತಹಶೀಲ್ದಾರ್‌ ಎಂ.ಪಿ. ಕವಿರಾಜ್‌ ಐತಿಹಾಸಿಕ ದೊಂಡಿವಾಘನ ಖಡ್ಗ ಹಿಡಿದು ಬನ್ನಿಗೆ ಪೂಜೆ ಸಲ್ಲಿಸಿದರು. ಬಾಳೆ ಕಂಬವನ್ನು ಕತ್ತರಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯಕ್ಕೆ ಚಾಲನೆ ನೀಡಿದರು.

ADVERTISEMENT

ಬನ್ನಿ ಮುಡಿಯುವ ಕಾರ್ಯಕ್ರಮವನ್ನು ಉದ್ಘಾಟಿಸಿದ, ಸಂಸದ ಬಿ.ವೈ. ರಾಘವೇಂದ್ರ, ‘9 ದಿನಗಳ ಕಾಲ ನಡೆಯುವ ದಸರಾ ಹಬ್ಬ ಆಚರಣೆ ಸಂದರ್ಭದಲ್ಲಿ ಬನ್ನಿ ಮುಡಿದು ದೇವರ ಹಾಗೂ ಹಿರಿಯರ ಆಶೀರ್ವಾದ ಪಡೆಯುವುದು ಸಂಪ್ರದಾಯ. ಬನ್ನಿ ಮುಡಿಯುವ ಈ ಸ್ಥಳದ ಅಭಿವೃದ್ಧಿಗೆ ₹ 4.5 ಕೋಟಿ ಅನುದಾನವನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ್ದಾರೆ. ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷ ಸಾವಿರಾರು ಜನರು ವ್ಯವಸ್ಥಿತವಾಗಿ ಕುಳಿತು ಬನ್ನಿ ಮುಡಿಯುವ ಕಾರ್ಯಕ್ರಮ ವೀಕ್ಷಿಸಬಹುದು’ ಎಂದರು.

ಸಾಗರ ಉಪವಿಭಾಗಧಿಕಾರಿ ಡಾ. ನಾಗರಾಜ್ ನಾಯ್ಕ್, ‘ಕಾಡಾ’ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ, ಬೇಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ್ ರಾವ್, ಮೆಸ್ಕಾಂ ನಿರ್ದೇಶಕ ರುದ್ರೇಶ್, ವಿವಿಧ ದೇವಸ್ಥಾನ ಸಮಿತಿ ಅಧ್ಯಕ್ಷರು ಇದ್ದರು. ಬನ್ನಿ ಮುಡಿದ ಬಳಿಕ ಪಟ್ಟಣ ಸೇರಿ ವಿವಿಧ ಗ್ರಾಮಗಳಲ್ಲಿ ಬನ್ನಿ ವಿತರಿಸಿ ಜನರು ಶುಭಾಶಯ ವಿನಿಮಯ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.