ಶಿರಾಳಕೊಪ್ಪ: ದಸರಾ ಪ್ರಯುಕ್ತ ಪಟ್ಟಣವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿದೆ. ದಸರಾ ಸಮಿತಿಯು ವಿಶೇಷ ಮೆರವಣಿಗೆ ಹಾಗೂ ಸಾಂಸ್ಕೃತಿಕ ಉತ್ಸವ ನಡೆಸಿಕೊಂಡು ಬಂದಿದೆ. ಅಕ್ಟೋಬರ್ 12ರಂದು ನಡೆಯುವ ಮೆರವಣಿಗೆಗೆ ಸಿದ್ಧತೆ ನಡೆದಿದೆ.
35 ವರ್ಷಗಳಿಂದ ದಸರಾ ಸಮಿತಿ ಆಚರಣೆ ನಡೆಸಿಕೊಂಡು ಬರುತ್ತಿರುವುದು ವಿಶೇಷ. ದಸರಾ ಮೆರವಣಿಗೆಯಲ್ಲಿ ವಿವಿಧ ಜನಪದ ಕಲಾ ತಂಡಗಳು ಕಲೆ ಪ್ರದರ್ಶಿಸಲು ಸಜ್ಜಾಗಿವೆ. ಈ ಬಾರಿ ನಾಸಿಕ್ ಡೋಲು, ಬೊಂಬೆ ಕುಣಿತ, ಲಂಬಾಣಿ ನೃತ್ಯ, ಪೂಜಾ ಕುಣಿತ, ನಂದಿ ಕೋಲು, ಜಾಂಜ್, ಡೊಳ್ಳು, ಭಜನೆ ಸೇರಿದಂತೆ 14ಕ್ಕೂ ಹೆಚ್ಚು ಜನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸುತ್ತಿವೆ.
ಮೆರವಣಿಗೆಯು ಪಟ್ಟಣದ ರಾಜಬೀದಿಗಳಲ್ಲಿ ಸಂಚರಿಸುತ್ತಿದ್ದು, ಈ ಬಾರಿ ಮೆರವಣಿಗೆಗೆ ವಿಶೇಷ ಬೆಳ್ಳಿ ರಥದಲ್ಲಿ ದೇವಿಯ ಮೆರವಣಿಗೆ ನಡೆಯಲಿದೆ. ಮುಖ್ಯ ದೇವರ ಮೂರ್ತಿಗಳನ್ನು ಅಲಂಕಾರಿಕ ರಥಗಳಲ್ಲಿ ಪ್ರತಿಷ್ಠಾಪಿಸಲಾಗುತ್ತಿದ್ದು, ಹೂವಿನ ಅಲಂಕಾರ ನಡೆದಿದೆ.
ಉತ್ಸವ ಿಲ್ಲಿನ ಸಾಂಸ್ಕೃತಿಕ ಪರಂಪರೆಯ ಮೆರುಗಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಜನರನ್ನು ಆಕರ್ಷಿಸುತ್ತಿದೆ. ಈ ಬಾರಿ ಕಿರುತೆರೆಯ ಕಲಾವಿದರಿಂದ ವಿಶೇಷ ಮನರಂಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
‘ದಸರಾ ಉತ್ಸವ ಜನರಿಗೆ ಹಬ್ಬವಷ್ಟೇ ಅಲ್ಲ, ಇದು ಸಾಂಸ್ಕೃತಿಕ ವೈಭವ. ಮೆರವಣಿಗೆಯಲ್ಲಿ ಮಕ್ಕಳು, ಯುವಕರು, ಹಿರಿಯರು ಭಾಗವಹಿಸಿ ಸಂಭ್ರಮಿಸುತ್ತಾರೆ. ಸ್ಥಳೀಯ ಸಮುದಾಯದ ಸಮಗ್ರ ಸಾಂಸ್ಕೃತಿಕ ಐಕ್ಯತೆ ಇಲ್ಲಿ ಕಾಣಬಹುದು’ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಆರ್. ರಾಘವೇಂದ್ರ ಹೇಳಿದರು.
‘ಊರಿನ ಎಲ್ಲಾ ದೇವಸ್ಥಾನಗಳ ಪಲ್ಲಕ್ಕಿಗಳೊಂದಿಗೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ ನಡೆಯಲಿದ್ದು, ಸೊರಬ ರಸ್ತೆಯ ಬನ್ನಿ ಮಂಟಪದಲ್ಲಿ ಶಮಿಪೂಜೆ ಸಲ್ಲಿಸಿ, ಬನ್ನಿ ಮುಡಿಯಲಾಗುವುದು’ ಎಂದು ಪುರಸಭೆ ಮಾಜಿ ಅಧ್ಯಕ್ಷ ರಟ್ಟಿಹಳ್ಳಿ ಲೋಕೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.