ADVERTISEMENT

ಒಳ್ಳೆಯ ನಡತೆಯೇ ನಿಜವಾದ ಸೌಂದರ್ಯ: ರಾಜ್ಯಪಾಲ ವಜುಭಾಯಿ ವಾಲಾ

ದೇಶೀಯ ವಿದ್ಯಾಶಾಲಾ ಸಮಿತಿ ಅಮೃತಮಹೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:04 IST
Last Updated 18 ಡಿಸೆಂಬರ್ 2018, 12:04 IST
ಶಿವಮೊಗ್ಗದಲ್ಲಿ ಮಂಗಳವಾರ ನಡೆದ ದೇಶೀಯ ವಿದ್ಯಾಶಾಲಾ ಸಮಿತಿ ಅಮೃತಮಹೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ ಮಾತನಾಡಿದರು.
ಶಿವಮೊಗ್ಗದಲ್ಲಿ ಮಂಗಳವಾರ ನಡೆದ ದೇಶೀಯ ವಿದ್ಯಾಶಾಲಾ ಸಮಿತಿ ಅಮೃತಮಹೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ ಮಾತನಾಡಿದರು.   

ಶಿವಮೊಗ್ಗ: ಸುಂದರವಾಗಿ ಕಾಣಲು ಪ್ರಯತ್ನಿಸುವುದಕ್ಕಿಂತ ಒಳ್ಳೆಯ ಮನುಷ್ಯರಾಗಿ ಬಾಳಲು ಆದ್ಯತೆ ನೀಡಬೇಕು ಎಂದು ರಾಜ್ಯಪಾಲ ವಜುಭಾಯಿ ರೂಡಭಾಯಿ ವಾಲಾ ಕಿವಿಮಾತು ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿ (ಡಿವಿಎಸ್) ಅಮೃತಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದುಬಾರಿ ಬೆಲೆಯ ಬಟ್ಟೆಗಳು, ಪಾದರಕ್ಷೆ. ಲಿಪ್‌ಸ್ಟಿಕ್, -ಪೌಡರ್ ಖರೀದಿಸುವ ಖಯಾಲಿ ಬಿಡಬೇಕು. ವಿದ್ಯಾರ್ಥಿ ಜೀವನದಲ್ಲಿ ರೂಢಿಸಿಕೊಳ್ಳುವ ಹವ್ಯಾಸವೇ ಭವಿಷ್ಯದ ಜೀವನದಲ್ಲೂ ಮುಂದುವರಿಯುತ್ತದೆ. ಹಾಗಾಗಿ, ವಿದ್ಯಾರ್ಥಿಗಳಾಗಿದ್ದಾಗಲೇ ಉತ್ತಮ ನಡೆ, ನುಡಿ, ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಶಿಕ್ಷಣದ ಮೂಲಕ ಜ್ಞಾನ ಸಂಪಾದಿಸಿದರೆ ಸಾಲದು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಹಸಿದವನಿಗೆ ಅನ್ನ ನೀಡುವುದೇ ನಿಜವಾದ ಜ್ಞಾನ. ಮಾನವೀಯ ಮೌಲ್ಯಗಳೇ ಇಲ್ಲದ ಜ್ಞಾನ ನಿಷ್ಪ್ರಯೋಜಕ. ಪಡೆದ ಜ್ಞಾನ ಸಾರ್ಥಕ ಪಡೆಯಲು ಸಂಸ್ಕಾರವೂ ಮುಖ್ಯ ಎಂದು ಪ್ರತಿಪಾದಿಸಿದರು.

ಸೌಂದರ್ಯ ಪ್ರಜ್ಞೆ, ವ್ಯಸನ ನಿಜವಾದ ಶತ್ರು

ಸೌಂದರ್ಯ ಪ್ರಜ್ಞೆ, ವ್ಯಸನ ವಿದ್ಯಾರ್ಥಿ ಜೀವನದ ನಿಜವಾದ ಶತ್ರುಗಳು. ವ್ಯಸನ ಜೀವನ ಹಾಳುಮಾಡುತ್ತದೆ. ಭವಿಷ್ಯ ಮಂಕಾಗಿಸುತ್ತದೆ. ತಂಬಾಕು, ಗುಟ್ಕಾ, ಸಿಗರೇಟ್ ಸೇವನೆ, ಮದ್ಯ ಪಾನದ ಗೀಳಿಗೆ ಬೀಳಬಾರದು. ಲಿಪ್‌ಸ್ಟಿಕ್, ಬ್ಯೂಟಿಟಿಪ್ಸ್, ಆಧನಿಕ ಜೀವನಶೈಲಿಗೆ ಮಾರು ಹೋಗಬಾರದು ಎಂದು ಎಚ್ಚರಿಸಿದರು.

ಸಮಯ ಅಮೂಲ್ಯ
ಸಮಯ ಅಮೂಲ್ಯ. ಓದುವ ಸಮಯ ವ್ಯರ್ಥ ಮಾಡಿಕೊಳ್ಳಬಾರದು. ಇರುವ ಸಮಯ ಸದುಪಯೋಗ ಆಗಬೇಕು. ಒಳ್ಳೆಯ ಪುಸ್ತಕ ಓದಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಭಗತ್‌ಸಿಂಗ್ ಸೇರಿದಂತೆ ಹಲವು ದೇಶಪ್ರೇಮಿಗಳ ಜೀವನಗಾಥೆ ತಿಳಿಸಿಕೊಳ್ಳಬೇಕು. ಅನುಸರಿಸಬೇಕು. ಒಳ್ಳೆಯ ವಿಚಾರಗಳಿಗೆ ಜೀವನ ಮುಡುಪಾಗಿಡಬೇಕು. ಕೆಟ್ಟ ಆಲೋಚನೆಗಳನ್ನು ತೊರೆಯಬೇಕು ಎಂದು ಸಲಹೆ ನೀಡಿದರು.

ಸಶಕ್ತ ಭಾರತ ನಿರ್ಮಾಣಕ್ಕೆ ಪಣ

ಶಿಕ್ಷಣ ಸಂಸ್ಥೆಗಳು ಜ್ಞಾನದ ಜತೆ ಸಂಸ್ಕಾರ ನೀಡಬೇಕು. ಭಗವದ್ಗೀತೆಯಲ್ಲಿ ಹೇಳಿದಂತೆ ಜ್ಞಾನವು ಕರ್ಮಯೋಗದಲ್ಲಿ ಸಾರ್ಥಕಗೊಳ್ಳಬೇಕು. ಇಂದಿನ ಯುವ ಪೀಳಿಗೆಯಲ್ಲಿ ಕರ್ಮಯೋಗ ತುಂಬುವ ಮೂಲಕ ಸಶಕ್ತ ಭಾರತ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.

ಸಾಧನೆಯ ಶಿಖರ ಏರಿದ ಮಹಿಳೆಯರು

ದೇಶದ ಹೆಣ್ಣುಮಕ್ಕಳು ಇಂದು ಗಂಡು ಮಕ್ಕಳಿಗಿಂತಲೂ ಹೆಚ್ಚಿನ ಸಾಧನೆ ಮಾಡುತ್ತಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಪುರುಷ ಹಲವು ಕ್ಷೇತ್ರಗಳಲ್ಲಿ ಏಕ ಕಾಲಕ್ಕೆಛಾಪು ಮೂಡಿಸಿದರೂ, ಅವರನ ಯೋಗಕ್ಷೇಮಕ್ಕೆ, ಸಾಧನೆಯ ಹಿಂದೆ ಮಹಿಳೆ ಇರುತ್ತಾಳೆ. ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹಿಂದೆ ಶೇ 25ರಷ್ಟು ವಿದ್ಯಾರ್ಥಿನಿಯರು ಇರಲಿಲ್ಲ. ಇಂದು ಅವರ ಸಂಖ್ಯೆ ಶೇ 60ರಷ್ಟಿದೆ. ಚಿನ್ನದ ಪದಕ, ಪರೀಕ್ಷಾ ಫಲಿತಾಂಶಗಳಲ್ಲಿ ಅವರದೇ ಮೇಲುಗೈ ಎಂದು ಶ್ಲಾಘಿಸಿದರು.

ರಾಷ್ಟ್ರೀಯ ಭಾವನೆಯೇ ವೀರತ್ವ

ರಾಷ್ಟ್ರೀಯ ಭಾವನೆ ಬಿಟ್ಟು ಕೊಡದ ವ್ಯಕ್ತಿಯೇ ವೀರ. ದೇಶದ ವಿದ್ಯಾ ಸಂಸ್ಥೆಗಳು ಸಶಕ್ತ ಮತ್ತು ಶೌರ್ಯಯುಕ್ತ ಯುವ ಶಕ್ತಿ ಸೃಷ್ಟಿಸುತ್ತಿವೆ. ವಿದ್ಯಾರ್ಥಿಗಳು ರಾಷ್ಟ್ರೀಯ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಕೋರಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ವಸ್ತುಪ್ರದರ್ಶನ ಉದ್ಘಾಟಿಸಿದರು.ಡಿವಿಎಸ್ ಅಧ್ಯಕ್ಷ ಕೆ. ಬಸಪ್ಪಗೌಡ ಪ್ರಾಸ್ತಾವಿಕ ಮಾತನಾಡಿದರು.

ಸಂಸದ ಬಿ.ವೈ. ರಾಘವೇಂದ್ರ, ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಜೋಗನ್ ಶಂಕರ್, ಸಂಸ್ಥೆಯ ಉಪಾಧ್ಯಕ್ಷರಾದ ಕೆ.ಎನ್. ರುದ್ರಪ್ಪ, ಕಾರ್ಯದರ್ಶಿ ಎಸ್. ರಾಜಶೇಖರ್, ಸಹ ಕಾರ್ಯದರ್ಶಿ ಎಸ್.ಪಿ. ದಿನೇಶ್, ಖಜಾಂಚಿ ಬಿ. ಗೋಪಿನಾಥ್, ನಿರ್ದೇಶಕರಾದ ಡಾ.ಎಚ್. ಮಂಜುನಾಥ್, ಎನ್.ಆರ್. ನಿತಿನ್, ಜಿ. ಭಾಸ್ಕರ್, ಜಿ. ಮಧುಸೂದನ್, ಎಂ. ರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.