ಸೊರಬ: ‘ಈಡಿಗ ಸಮುದಾಯದಲ್ಲಿ ಐಕ್ಯತೆ, ಸಮಾನತೆ ಕೊರತೆ ಎದ್ದು ಕಾಣುತ್ತಿದ್ದು, ರಾಜಕೀಯವಾಗಿ ಸಮುದಾಯವನ್ನು ಮುಗಿಸುವ ಹುನ್ನಾರ ನಡೆಸಲಾಗುತ್ತಿದೆ’ ಎಂದು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ದೂರಿದರು.
ಪಟ್ಟಣದ ಆಲೇಕಲ್ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಈಡಿಗ ಮಹಾ ಮಂಡಳಿಯ ರಾಜ್ಯ ಪದಾಧಿಕಾರಿಗಳು ಹಾಗೂ ಜಿಲ್ಲಾ ಅಧ್ಯಕ್ಷರ ವಿಶೇಷ ಸಭೆಯಲ್ಲಿ ಮಾತನಾಡಿದರು.
‘ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಈಡಿಗರ ಮಹಾ ಮಂಡಳಿ ರಾಜ್ಯದ 21 ಜಿಲ್ಲೆಗಳಲ್ಲಿ ಹತ್ತಾರು ಬೇಡಿಕೆಗೆ ಹೋರಾಟ ಮಾಡುತ್ತಲಿದೆ. ಪ್ರತ್ಯೇಕ ಈಡಿಗ ನಿಗಮ ಮಂಡಳಿ ರಚನೆ ಮಾಡುವ ಹೋರಾಟದ ಮುಖ್ಯ ಗುರಿಯಾಗಿತ್ತು. ಕಳೆದ ಬಿಜೆಪಿ ಸರ್ಕಾರ ನಿಗಮ ರಚನೆಗೆ ಅಸ್ತು ನೀಡಿತ್ತು. ರಾಜ್ಯ ಸರ್ಕಾರ ಎರಡೂವರೆ ವರ್ಷದ ಅಧಿಕಾರ ಅವಧಿಯಲ್ಲಿ ಈಡಿಗರ ನಿಗಮ ರಚನೆಯ ಪ್ರಸ್ತಾಪ ಮಾಡಿಲ್ಲ’ ಎಂದರು.
‘ಅನಾದಿ ಕಾಲದಿಂದಲೂ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡ ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಮೀಸಲಾತಿಗೆ ಅನುಕೂಲ ಮಾಡಿಕೊಡಬೇಕು. ಈಚೆಗೆ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಸಮುದಾಯವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಹಲವು ವರ್ಷಗಳಿಂದ ಹತ್ತು ಹಲವಾರು ಬೇಡಿಕೆಗೆ ಒತ್ತಾಯಿಸಿ ಹೋರಾಟ ಮಾಡಿದ್ದು, 10 ಬೇಡಿಕೆ ಈಡೇರಿಕೆಗಾಗಿ ಕಲಬುರಗಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಲಾಗಿತ್ತು. ಬಹು ಬೇಡಿಕೆಯಾದ ನಾರಾಯಣಗುರು ಅವರ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ರಾಜ್ಯ ಸರ್ಕಾರದಲ್ಲಿ ಸಮುದಾಯದ ಕೇವಲ ಒಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಇಬ್ಬರು ಸಚಿವ ಸ್ಥಾನ ಅಲಂಕರಿಸಿದ್ದರು. ರಾಜಕೀಯ ಸ್ಥಾನಮಾನ ನೀಡಿದರೆ ಕ್ಷೇತ್ರ ಸೇರಿದಂತೆ ರಾಜ್ಯದ ಅಭಿವೃದ್ದಿ ಸಾಧ್ಯ’ ಎಂದರು.
ಈ ವೇಳೆ ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಜ್ಯ ಘಟಕದ ಅಧ್ಯಕ್ಷ ಸಿ. ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಡಾ.ಬಿ.ಎಚ್. ಮಂಚೇಗೌಡ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಜಿ.ಎನ್. ಸಂತೋಷ್, ಬಿ.ಎಚ್. ನಾಗರಾಜ ನಾಯ್ಕ, ಸಾಗರ, ಮಣಿಕಂಠ, ಪ್ರಶಾಂತ ಈಳಿಗೇರ್, ದೇವರಾಜ ನಾಯ್ಕ, ದಾಮೋದರ ನಾಯ್ಕ, ಶ್ರೀಪಾದ ನಾಯ್ಕ, ನಾಗರಾಜ ಮಂಜುಗುಣಿ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.