ಹೊಸನಗರ: ಕಾಲೇಜು ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅಭಿಪ್ರಾಯಪಟ್ಟರು.
ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ರೋವರ್ಸ್, ರೇಂಜರ್ಸ್, ಯುವ ರೆಡ್ ಕ್ರಾಸ್, ಮಹಿಳಾ ಸಬಲೀಕರಣ ಮತ್ತು ಎನ್‌ಸಿಸಿ ಘಟಕಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
‘ಯುವಕರೇ ದೇಶದ ಶಕ್ತಿಯಾಗಿದ್ದು, ಶಿಕ್ಷಣದಿಂದ ಸಮಗ್ರ ಅಭಿವೃದ್ಧಿ ಸಾಧ್ಯ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯಲೂ ಶಿಕ್ಷಣ ಅತಿಮುಖ್ಯ. ಕಾಲೇಜಿನ ಹಳೆ ವಿದ್ಯಾರ್ಥಿಗಳು ತಾವು ಕಲಿತ ಶಾಲೆಗೆ ದೇಣಿಗೆ ನೀಡಿದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸಹಕಾರಿ ಆಗಲಿದೆ’ ಎಂದರು.
ತಾಲ್ಲೂಕಿನ ನಿಟ್ಟೂರು ಭಾಗದಿಂದ ಕಾಲೇಜಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಬಸ್ ಸೌಲಭ್ಯ ಕಲ್ಪಿಸುವಂತೆ ಸಿಡಿಸಿ ಅಧ್ಯಕ್ಷ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಶಾಸಕರಿಗೆ ಮನವಿ ಮಾಡಿದರು.
ಶಿವಮೊಗ್ಗದ ಬಾಪೂಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಮಂಜುನಾಥ ಎಂ.ಎಂ. ಉಪನ್ಯಾಸ ನೀಡಿದರು. ಪ್ರಾಚಾರ್ಯ ಕೆ. ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಎಂ.ಗುಡ್ಡೇಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಎನ್.ಪ್ರವೀಣ್, ಸದಸ್ಯ ಮಹೇಂದ್ರ ಶೇಟ್, ಪೋಷಕರ ಸಮಿತಿ ಅಧ್ಯಕ್ಷ ಧರ್ಮರಾವ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿದಂಬರ ಹೂವಿನಕೋಣೆ, ಬಗರ್ ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಹರತಾಳು, ನೇರ್ಲೆ ಸ್ವಾಮಿ, ಪ್ರವೀಣ್ ಬೃಂದಾವನ, ಹಿಟಾಚಿ ಶ್ರೀಧರ್ ಮತ್ತಿತರರು ಇದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಶ್ರೀಪತಿ ಹಳಗುಂದ ಸ್ವಾಗತಿಸಿದರು. ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಮೇದಿನಿ ಕೆ.ಎಸ್. ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಶಾಲಿನಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.