ADVERTISEMENT

ಮೂಟೆಯಲ್ಲಿ ಹಣ ತಂದು ಠೇವಣಿ ಕಟ್ಟಿದ ಅಭ್ಯರ್ಥಿ!

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 7:00 IST
Last Updated 5 ಏಪ್ರಿಲ್ 2019, 7:00 IST
   

ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿಯೊಬ್ಬರು ಮೂಟೆಯಲ್ಲಿ ಹಣ ಹೊತ್ತು ತಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಠೇವಣಿ ಹಣ ಕಟ್ಟಿದರು.

ವಿದ್ಯಾರ್ಥಿ ಸಂಘಟನೆ ಮುಖಂಡ ವಿನಯ್‌ ರಾಜಾವತ್ ನಾಮಪತ್ರ ಸಲ್ಲಿಸಲು ಬಂದಾಗ ₹1 ಹಾಗೂ ₹ 2ರ ನಾಣ್ಯಗಳನ್ನು ಒಳಗೊಂಡ ₹12,500 ಮೌಲ್ಯದ ಮೂಟೆಯನ್ನು ಜಿಲ್ಲಾಧಿಕಾರಿ ಕಚೇರಿಯವರೆಗೂ ಎತ್ತಿನ ಗಾಡಿಯಲ್ಲಿ ಹೇರಿಕೊಂಡು ಬಂದರು. ನಂತರ ಸ್ನೇಹಿತರ ಸಹಕಾರದಿಂದ ಹೊತ್ತು ತಂದು ಚುನಾವಣಾಧಿಕಾರಿ ಮುಂದೆ ಇಟ್ಟರು.

ಅಷ್ಟು ಚೆಲ್ಲರೆ ಎಣಿಸಲು ಸಮಯ ಇಲ್ಲದ ಕಾರಣ ಮೂಟೆ ಇಟ್ಟುಕೊಂಡು ನಾಮಪತ್ರ ಸಲ್ಲಿಸಲು ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು.

ADVERTISEMENT

ಇದೇ ಅಭ್ಯರ್ಥಿ 2018ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಪಕ್ಷೇತರವಾಗಿಕಣಕ್ಕೆ ಇಳಿದಿದ್ದರು. ಅಂದು ನಾಮಪತ್ರ ಸಲ್ಲಿಸಲು ಹೆಲಿಕಾಪ್ಟರ್‌ನಲ್ಲಿ ಬಂದು ಸುದ್ದಿಯಾಗಿದ್ದರು.459 ಮತಗಳನ್ನು ಪಡೆದುಠೇವಣಿ ಕಳೆದುಕೊಂಡಿದ್ದರು. ಈಗ ಮತ್ತೆ ಲೋಕಸಭಾ ಕಣಕ್ಕೆ ಇಳಿದಿದ್ದಾರೆ.

ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು 14

ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಇಬ್ಬರು ಪಕ್ಷೇತರರು ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ, ಜೆಡಿಎಸ್ ಅಭ್ಯರ್ಥಿ ಎಸ್.ಮಧುಬಂಗಾರಪ್ಪ ಸೇರಿಂದತೆ ಒಟ್ಟು 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.