ADVERTISEMENT

ಸಡಿಲಗೊಂಡ ರಾಷ್ಟ್ರೀಯ ಕಾಂಗ್ರೆಸ್ ನೆಲೆ!

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಕಂಡು ಎರಡು ದಶಕ ಕಳೆದವು

ಚಂದ್ರಹಾಸ ಹಿರೇಮಳಲಿ
Published 20 ಮಾರ್ಚ್ 2019, 13:52 IST
Last Updated 20 ಮಾರ್ಚ್ 2019, 13:52 IST

ಶಿವಮೊಗ್ಗ: 1952ರಲ್ಲಿ ನಡೆದ ಮೊದಲ ಚುನಾವಣೆಯಲ್ಲೇ ಒಂದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದ್ದ ರಾಷ್ಟ್ರೀಯ ಕಾಂಗ್ರೆಸ್ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೇಲೆ ಆಧಿಪತ್ಯ ಸ್ಥಾಪಿಸಿತ್ತು.

1952ರಿಂದ 1991ರವರೆಗೂ ನಡೆದ 10 ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 9 ಬಾರಿ ವಿಜಯ ಪಾತಾಕೆ ಹಾರಿಸಿದ್ದರು. 44 ವರ್ಷಗಳ ಇತಿಹಾಸದಲ್ಲಿ 40 ವರ್ಷ ಕಾಂಗ್ರೆಸ್ ಭದ್ರ ನೆಲೆ ಕಂಡುಕೊಂಡಿತ್ತು. ಇಂತಹ ನೆಲೆ ಈಚೆಗೆ ಸಂಪೂರ್ಣ ಸಡಿಲವಾಗಿದೆ. ನಿಧಾನವಾಗಿ ನೆಲೆ ಕಳೆದುಕೊಳ್ಳುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕೊನೆಯ ಗೆಲುವು ಕಂಡು ಎರಡು ದಶಕಗಳಾಗಿವೆ.

ಮೊದಲ 10 ಚುನಾವಣೆಗಳಲ್ಲಿ ಕಾಂಗ್ರೆಸ್‌ ಧುರೀಣರಾದ ಕೆ.ಜಿ. ಒಡೆಯರ್ ಎರಡು ಬಾರಿ, ಎಸ್‌.ವಿ. ಕೃಷ್ಣಮೂರ್ತಿ, ಎ.ಆರ್. ಬದರಿ ನಾರಾಯಣ, ಎಸ್.ಟಿ ಖಾದ್ರಿ, ಕೆ.ಜಿ. ಶಿವಪ್ಪ ತಲಾ ಒಂದು ಬಾರಿ, ಟಿ.ವಿ. ಚಂದ್ರಶೇಖರಪ್ಪ ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. 1996ರಿಂದ ಏರಿಳಿತ ಕಾಣುತ್ತಾ ಸಾಗಿದ ಕಾಂಗ್ರೆಸ್ ಕೊನೆಯ ಗೆಲುವು ಕಂಡಿದ್ದು 1999ರಲ್ಲಿ.

ADVERTISEMENT

ಬಂಗಾರಪ್ಪ ಇದ್ದಾಗಲಷ್ಟೇ ಕಾಂಗ್ರೆಸ್‌ಗೆ ಬಲ:1990–1992ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಸ್‌.ಬಂಗಾರಪ್ಪ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ತೊರೆದಿದ್ದರು. ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿ ಸೆಡ್ಡು ಹೊಡೆದಿದ್ದರು. 1996ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಅವರ ಅಬ್ಬರಕ್ಕೆ ಕಾಂಗ್ರೆಸ್ ತರಗೆಲೆಯಂತೆ ಹಾರಿಹೋಗಿತ್ತು. ಮೂರು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಬಂಗಾರಪ್ಪ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿತ್ತು.

1998ರ ಚುನಾವಣೆ ವೇಳೆಗೆ ಬಂಗಾರಪ್ಪ ಕರ್ನಾಟಕ ವಿಕಾಸ ಪಕ್ಷ ಕಟ್ಟಿದ್ದರು. ಮತಗಳು ಕಾಂಗ್ರೆಸ್ ಹಾಗೂ ಕೆವಿಪಿ ಮಧ್ಯೆ ಮತಗಳು ಹಂಚಿಹೋಗಿ ಬಿಜೆಪಿ ಮೊದಲ ಬಾರಿ ಗೆಲುವು ಕಂಡಿತ್ತು. ಬಿಜೆಪಿಯ ಆಯನೂರು ಮಂಜುನಾಥ್ ಲೋಕಸಭೆ ಪ್ರವೇಶಿಸಿದ್ದರು. ಈ ಚುನಾವಣೆಯ ನಂತರ ಬಂಗಾರಪ್ಪ ಮರಳಿ ಕಾಂಗ್ರೆಸ್ ಸೇರಿದ್ದರು. 1999ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 4.29 ಲಕ್ಷ ಮತ ಪಡೆದು ಗೆಲುವು ಸಾಧಿಸಿದ್ದರು. ಇದೆ ಕೊನೆ ಅಂದಿನಿಂದ ಇಲ್ಲಿಯವರೆಗೂ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಗೆಲುವು ಮರೀಚಿಕೆಯಾಗಿದೆ.

2004ರಲ್ಲಿ ಬಿಜೆಪಿ ಸೇರಿದ್ದ ಬಂಗಾರಪ್ಪ 4.50 ಲಕ್ಷ ಮತಗಳನ್ನು ಪಡೆದು ಮೂರನೇ ಬಾರಿ ಲೋಕಸಭೆ ಪ್ರವೇಶಿಸಿದ್ದರು. ಆಗ ಕಾಂಗ್ರೆಸ್ ತೀವ್ರ ಸ್ಪರ್ಧೆ ನೀಡಿ ಸೋಲು ಕಂಡಿತ್ತು. 2005ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಂಗಾರಪ್ಪ ಮುಲಾಯಂಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಕಂಡರು. ಅಂದೂ ಕಾಂಗ್ರೆಸ್ ಸೋಲು ಕಂಡಿತ್ತು. 2009ರಲ್ಲಿ ಮರಳಿ ಕಾಂಗ್ರೆಸ್‌ಗೆ ಬಂದರೂ ಅದೃಷ್ಟ ಕಾಂಗ್ರೆಸ್ ಕೈ ಹಿಡಿಯಲಿಲ್ಲ. ಬಿಜೆಪಿ ಎದುರು ಬಂಗಾರಪ್ಪ ಸೋಲು ಕಂಡರು. ಆ ಮೂಲಕ ಕಾಂಗ್ರೆಸ್ ನಂಬಿಕೊಂಡಿದ್ದ ಬಂಗಾರಪ್ಪ ಬಲವೂ ಇಲ್ಲವಾಗಿತ್ತು.

2014ರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ಎದುರು ಅತಿ ಹೆಚ್ಚು ಅಂತರದ ಸೋಲು ಕಾಣಬೇಕಾಯಿತು. ಈ ಸೋಲು ಕಾಂಗ್ರೆಸ್ ಆತ್ಮಸ್ಥೈರ್ಯಕ್ಕೆ ಕೊಡಲಿಪೆಟ್ಟು ನೀಡಿತ್ತು. ಹಾಗಾಗಿ, 2018ರ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹಾಕಲು ಹಿಂದೇಟು ಹಾಕಿತ್ತು. ಕೊನೆಗೆ ಜೆಡಿಎಸ್‌ ಮಧು ಬಂಗಾರಪ್ಪ ಅವರಿಗೆ ಬೆಂಬಲ ನೀಡಿ, ಕಣದಿಂದ ಹಿಂದೆ ಸರಿಯಿತು. ಈ ಬಾರಿಯೂ ಜೆಡಿಎಸ್‌ಗೆ ಸ್ಥಾನ ಬಿಟ್ಟುಕೊಡುವ ಮೂಲಕ ಶಿವಮೊಗ್ಗ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್ ಅಭ್ಯರ್ಥಿ ಇಲ್ಲದ ಸಾರ್ವತ್ರಿಕ ಚುನಾವಣೆ ನಡೆಯಲು ಅನುವು ಮಾಡಿಕೊಟ್ಟಿದೆ. ಆ ಮೂಲಕ ಪರೋಕ್ಷವಾಗಿ ಬಿಜೆಪಿ ಅಧಿಪತ್ಯಕ್ಕೆ ಇತಿಶ್ರೀ ಹಾಡಲು ಹೆಣೆದ ಹೊಸ ತಂತ್ರ ಈ ಬಾರಿ ಫಲ ನೀಡುವ ನಿರೀಕ್ಷೆ ಇಟ್ಟುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.