ADVERTISEMENT

ಸಾಗರ: ಅಸಮರ್ಪಕ ವಿದ್ಯುತ್ ಪೂರೈಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 5:52 IST
Last Updated 25 ಫೆಬ್ರುವರಿ 2022, 5:52 IST
ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ ಧೋರಣೆಯನ್ನು ಖಂಡಿಸಿ ಸಾಗರದಲ್ಲಿ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ ಧೋರಣೆಯನ್ನು ಖಂಡಿಸಿ ಸಾಗರದಲ್ಲಿ ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.   

ಸಾಗರ: ತಾಲ್ಲೂಕು ರೈತ ಸಂಘದ ಕಾರ್ಯಕರ್ತರು ಗ್ರಾಮೀಣ ಭಾಗದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವ ಮೆಸ್ಕಾಂ ಧೋರಣೆಯನ್ನು ಖಂಡಿಸಿ ಗುರುವಾರ ಪ್ರತಿಭಟನೆ ನಡೆಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿಯಿಂದ ಪಾದಯಾತ್ರೆ ಹಾಗೂ ಟ್ರ್ಯಾಕ್ಟರ್ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ನಂತರ ಮೆಸ್ಕಾಂ ಕಚೇರಿ ಎದುರು ಬಹಿರಂಗ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ರೈತ ಸಂಘದ ತಾಲ್ಲೂಕು ಅಧ್ಯಕ್ಷ ದಿನೇಶ್ ಶಿರವಾಳ, ‘ಗ್ರಾಮೀಣ ಪ್ರದೇಶದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಕಾರಣಕ್ಕೆ ರೈತರು ತಮ್ಮ ಫಸಲು ಕಳೆದುಕೊಳ್ಳುವಂತಾಗಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ, ಕ್ಷೇತ್ರದ ಶಾಸಕರಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ADVERTISEMENT

ಗುಣಮಟ್ಟದ ವಿದ್ಯುತ್ ಪೂರೈಕೆಯಾಗುವವರೆಗೂ ರೈತರು ತಮ್ಮ ಹೋರಾಟವನ್ನು ಮುಂದುವರಿಸುವುದು ಖಚಿತ. ಈ ವಿಷಯದಲ್ಲಿ ಮೆಸ್ಕಾಂ ಉದಾಸೀನ ಮನೋಭಾವ ತೋರಿದರೆ ಸಹಿಸಲ್ಲ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್, ‘ನಾಡಿಗೆ ಬೆಳಕು ನೀಡಲು ಜಲವಿದ್ಯುತ್ ಯೋಜನೆಗಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿರುವ ಈ ಭಾಗದ ಜನರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡಲು ಸಾಧ್ಯವಾಗದಿದ್ದರೆ ಸರ್ಕಾರ ಇದ್ದರೂ ಸತ್ತಂತೆ’ ಎಂದು ಟೀಕಿಸಿದರು.

ಕ್ಷೇತ್ರದ ಶಾಸಕ ಎಚ್. ಹಾಲಪ್ಪ ಹರತಾಳು ಅವರು ವಿವಿಧ ಇಲಾಖೆಗಳ ಎದುರು ಧರಣಿ ಕುಳಿತಿದ್ದನ್ನು ನೋಡಿದ್ದೇವೆ. ಅದೇ ರೀತಿ ಮೆಸ್ಕಾಂ ಕಚೇರಿ ಎದುರು ಕೂಡ ಅವರು ಧರಣಿ ಕುಳಿತು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.

ರೈತ ಸಂಘದ ತಾಲ್ಲೂಕು ಸಂಚಾಲಕ ರಮೇಶ್ ಈ. ಕೆಳದಿ, ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಯಾಗದ ಕಾರಣ ಪಂಪ್‌ಸೆಟ್‌ಗಳ ಮೂಲಕ ಕೃಷಿಭೂಮಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ಹೊಯ್ಸಳ ಗಣಪತಿಯಪ್ಪ, ಸೂರಜ್, ಕಿರಣ್, ದೇವರಾಜ್, ಜಗದೀಶ್, ಸತೀಶ್, ಶಿವು, ದ್ಯಾವಪ್ಪ, ವೀರಪ್ಪ, ಅಜ್ಜಪ್ಪ, ರಾಮ್ ಸಾಗರ್, ಕಿರಣ್ ದೊಡ್ಮನೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.