ಶಿವಮೊಗ್ಗ: ‘ಶಾಸಕರಿಗೆ ₹50 ಕೋಟಿ, ₹25 ಕೋಟಿ ನೀಡುವ ಆಮಿಷ ಒಡ್ಡಿ ಮೂಗಿಗೆ ತುಪ್ಪ ಹಚ್ಚುವ ಬದಲು ಈಗ ಇರುವ ರಸ್ತೆಗಳ ಗುಂಡಿ ಮುಚ್ಚಲು ತಲಾ ಒಂದೊಂದು ಕೋಟಿ ರೂಪಾಯಿ ಕೊಡಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಲಹೆ ನೀಡಿದರು.
‘ಸರ್ಕಾರದ ಈಗಿನ ಆರ್ಥಿಕ ಪರಿಸ್ಥಿತಿ ಗಮನಿಸಿದರೆ ಆ ಬ್ರಹ್ಮ ಬಂದರೂ ₹50 ಕೋಟಿ, ಇಲ್ಲವೇ ₹25 ಕೋಟಿ ಬಿಡಿ, ₹2.5 ಕೋಟಿ ಕೊಡಲೂ ಸಾಧ್ಯವಿಲ್ಲ. ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯ ಸಾಧ್ಯವಾಗದೇ ಶಾಸಕರು ಮತದಾರರಿಗೆ ಮುಖ ತೋರಿಸದಂತಾಗಿದ್ದಾರೆ. ಚುನಾವಣೆಯಲ್ಲಿ ಜನರಿಗೆ ಭರವಸೆ ಕೊಟ್ಟು ಗೆದ್ದು ಬಂದಿರುವ ಅವರು (ಶಾಸಕರು) ಪಾಪ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ’ ಎಂದು ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಛೇಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾಡುತ್ತಿರುವ ಸಾಧನಾ ಸಮಾವೇಶದ ನೆನಪಿನಲ್ಲಿಯೇ ₹1 ಕೋಟಿ ಬಿಡುಗಡೆ ಮಾಡಲಿ. ಆ ಹಣವನ್ನು ರಸ್ತೆಗಳ ಗುಂಡಿ ಮುಚ್ಚಲು ಕೊಡುವ ಅನುದಾನ ಎಂದು ಆದೇಶಪತ್ರದಲ್ಲಿ ಉಲ್ಲೇಖಿಸಲಿ. ಆಗ ಸಮಾವೇಶವನ್ನು ರಾಜ್ಯದ ಜನರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂದರು.
‘ಬಜೆಟ್‌ನಲ್ಲಿ ಶಾಸಕರಿಗೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲು ತಲಾ ₹50 ಕೋಟಿ ಕೊಡುವುದಾಗಿ ಸಿದ್ದರಾಮಯ್ಯ ಘೋಷಿಸಿದ್ದರು. ಅದನ್ನೇ ಕೊಡಲು ಆಗಿಲ್ಲ. ಈಗ ಹೊಸದಾಗಿ ಕೊಡಲು ಸಾಧ್ಯವೇ’ ಎಂದು ಪ್ರಶ್ನಿಸಿದ ಈಶ್ವರಪ್ಪ, ‘ಹಣ ಕೊಡುವುದಾಗಿ ಹೀಗೆ ಸುಳ್ಳು ಭರವಸೆ ಕೊಡಬಾರದು. ಟೋಕನ್ ಅಡ್ವಾನ್ಸ್ ಕೊಡಲೂ ಇವರ ಬಳಿ ಹಣ ಇಲ್ಲ’ ಎಂದು ಟೀಕಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಟೀಕೆ ಮಾಡುವುದಿಲ್ಲ. ಕಾಂಗ್ರೆಸ್‌ನವರು ಬಡವರ ಜೊತೆ ಇರುವುದರ ಬಗ್ಗೆ ಮಾತಾಡೊಲ್ಲ. ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ಕೊಡಲು ರಾಜಕೀಯ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಮಾವೇಶ ಮಾಡುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ. ಆದರೆ ಹಣ ಕೊಡುವುದಾಗಿ ಹೇಳಿ ಶಾಸಕರನ್ನು ದಡ್ಡರನ್ನಾಗಿ, ರಾಜ್ಯದ ಜನರನ್ನು ದಡ್ಡರನ್ನಾಗಿ ಮಾಡಬಾರದು ಎಂದು ಹೇಳಿದರು.
ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಈ. ವಿಶ್ವಾಸ್, ಬಾಲು, ಕುಬೇರಪ್ಪ, ಸತ್ಯನಾರಾಯಣ್, ವಾಗೀಶ್, ಅ.ಮ. ಪ್ರಕಾಶ್ ಇದ್ದರು.
ಆಟದ ಮೈದಾನ ಪಾಲಿಕೆ ಆಸ್ತಿಯಾಗಲಿ: ಈಶ್ವರಪ್ಪ
‘ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಆಟದ ಮೈದಾನದ ಹಕ್ಕುದಾರಿಕೆಗೆ ಸಂಬಂಧಿಸಿದಂತೆ ಯಾರ ಪ್ರಭಾವಕ್ಕೂ ಒಳಗಾಗದೇ ಮಹಾನಗರ ಪಾಲಿಕೆ ಆಯುಕ್ತರು ಅದನ್ನು ಪಾಲಿಕೆ ಆಸ್ತಿಯಾಗಿ ಉಳಿಸಬೇಕು’ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಆಟದ ಮೈದಾನಕ್ಕೆ ಸಂಬಂಧಿಸಿದಂತೆ ರಾಷ್ಟ್ರಭಕ್ತರ ಬಳಗ ಈಗಾಗಲೇ ಪ್ರಮುಖ ದಾಖಲೆಗಳೊಂದಿಗೆ ಪಾಲಿಕೆ ಆಯುಕ್ತರಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ. ಜು.21ರಂದು ಮತ್ತೊಮ್ಮೆ ದಾಖಲೆಗಳೊಂದಿಗೆ ಪಾಲಿಕೆಗೆ ತೆರಳಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಯುಕ್ತರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.