ADVERTISEMENT

ಶಿವಮೊಗ್ಗ ಬಂದ್: ರಂಜಾನ್, ಬಸವ ಜಯಂತಿಗಿಲ್ಲ ಅಡಚಣೆ

ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ, ಮನೆ ಬಾಗಿಲಿಗೆ ತರಕಾರಿ, ಹಣ್ಣು

​ಪ್ರಜಾವಾಣಿ ವಾರ್ತೆ
Published 12 ಮೇ 2021, 11:36 IST
Last Updated 12 ಮೇ 2021, 11:36 IST
ಶಿವಮೊಗ್ಗ ಹೊಸಮನೆ ಬಡಾವಣೆಯ ನ್ಯಾಯಬೆಲೆ ಅಂಗಡಿ ಮುಂದೆ ಜನರು ಸರದಿಯಲ್ಲಿ ನಿಂತು ಬುಧವಾರ ಪಡಿತರ ಪಡೆದರು.
ಶಿವಮೊಗ್ಗ ಹೊಸಮನೆ ಬಡಾವಣೆಯ ನ್ಯಾಯಬೆಲೆ ಅಂಗಡಿ ಮುಂದೆ ಜನರು ಸರದಿಯಲ್ಲಿ ನಿಂತು ಬುಧವಾರ ಪಡಿತರ ಪಡೆದರು.   

ಶಿವಮೊಗ್ಗ: ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿದ್ದರೂ ರಂಜಾನ್‌ ಮತ್ತು ಬಸವ ಜಯಂತಿ ಆಚರಣೆಗೆ ಅಡ್ಡಿ ಇರುವುದಿಲ್ಲ. ದಿನಸಿ, ತರಕಾರಿ, ಹಣ್ಣು, ಮೀನು, ಮಾಂಸ ಮತ್ತಿತರ ಅಗತ್ಯ ಸಾಮಗ್ರಿಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 13ರಿಂದ 16ರವರೆಗೆ ನಾಲ್ಕು ದಿನಗಳು ಸಂಪೂರ್ಣ ಲಾಕ್‌ಡೌನ್ ಮಾಡಲು ನಿರ್ಧರಿಸಲಾಗಿದೆ. ಈ ಸಮಯದಲ್ಲಿ ಕೆಲವು ಅಗತ್ಯ ಸೇವೆಗಳನ್ನು ಹೊರತುಪಡಿಸಿ, ಯಾವುದೇ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಹಬ್ಬವನ್ನು ಪ್ರತಿಯೊಬ್ಬರೂ ಸರಳವಾಗಿ ನಿಯಮಗಳ ಪರಿಮಿತಿಯಲ್ಲಿ ಆಚರಿಸಲು ಅಡ್ಡಿ ಮಾಡುವುದಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಭರವಸೆ ನೀಡಿದರು.

ಬಿಜೆಪಿ ಸರ್ಕಾರ ಎಲ್ಲ ಜಾತಿ, ಧರ್ಮದ ಜನರನ್ನೂ ಸಮಾನವಾಗಿ ಕಾಣುತ್ತದೆ. ಕೆಲವರು ಹಬ್ಬದ ಸಮಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿದೆ ಎಂದು ಕೋಮು ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಕೈಗಾರಿಕೋದ್ಯಮಿಗಳು, ಗಾಂಧಿ ಬಜಾರ್ ವರ್ತಕರ ಸಂಘ ಸೇರಿದಂತೆ ಹಲವರು ಸಂಪೂರ್ಣ ಲಾಕ್‌ಡೌನ್‌ಗೆ ಬೆಂಬಲ ನೀಡಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಅದಕ್ಕಾಗಿ ಕೆಲವು ಕಠಿಣ ಕ್ರಮ ಅನಿವಾರ್ಯ. ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ADVERTISEMENT

ಕೋವಿಡ್ ಮೊದಲ ಅಲೆ ‌ತಡೆಯುವಲ್ಲಿ ಶಿವಮೊಗ್ಗ ಜಿಲ್ಲೆ ಯಶಸ್ವಿಯಾಗಿತ್ತು. ಈ ಬಾರಿ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಬೆಂಗಳೂರು, ಮೈಸೂರು, ತುಮಕೂರು ಮತ್ತಿತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಜನರು ಬಮದ ಪರಿಣಾಮ ಸೋಂಕಿತ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದರು.

ಹಾಪ್‌ಕಾಮ್ಸ್ ಮೂಲಕ 72 ಗಾಡಿಗಳು ಎಲ್ಲಾ ಬಡಾವಣೆಗಳಿಗೆ ತರಕಾರಿ ತೆಗೆದುಕೊಂಡು ಹೊಗುತ್ತವೆ. ಮೀನು, ಮಾಂಸ ಮಾರುಕಟ್ಟೆಯಲ್ಲಿ ಜನಜಂಗುಳಿ ಕಾಣುತ್ತಿದ್ದೇವೆ. ಪ್ರತಿಯೊಬ್ಬರೂ ಮಾರ್ಗಸೂಚಿ ಪಾಲಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಕೋವಿಡ್ ನಿಯಂತ್ರಣಕ್ಕೆ ಕೈಗಾರಿಕೋದ್ಯಮಿಗಳು ಸಂಪೂರ್ಣ ಬೆಂಬಲ ನೀಡುತ್ತಾರೆ. ಆದರೆ, ಸರ್ಕಾರದ ನಿಯಮದಂತೆ ಕೆಲವು ಕೈಗಾರಿಕೆಗಳು ಕಾರ್ಯ ನಿರ್ವಹಿಸಬಹುದಾಗಿದೆ. ರಕ್ಷಣೆ, ರೈಲ್ವೆಗೆ ಅಗತ್ಯ ವಸ್ತುಗಳನ್ನು ಪೂರೈಸಬೇಕಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ‘ಸೂಡಾ’ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.