ADVERTISEMENT

ಕಾಂಗ್ರೆಸ್ ಮುಸ್ಲಿಮರ ಓಲೈಕೆ ಬಿಡಲಿ: ಈಶ್ವರಪ್ಪ

-

​ಪ್ರಜಾವಾಣಿ ವಾರ್ತೆ
Published 30 ಮೇ 2025, 14:55 IST
Last Updated 30 ಮೇ 2025, 14:55 IST
ಕೆ.ಎಸ್.ಈಶ್ವರಪ್ಪ
ಕೆ.ಎಸ್.ಈಶ್ವರಪ್ಪ   

ಶಿವಮೊಗ್ಗ: ‘ಹುಬ್ಬಳ್ಳಿಯಲ್ಲಿ ಗಲಭೆಯಲ್ಲಿ ಪಾಲ್ಗೊಂಡ ಮುಸ್ಲಿಮರ ಮೇಲಿನ ಪ್ರಕರಣಗಳ ಹಿಂತೆಗೆತದ ತೀರ್ಮಾನ ರದ್ದುಗೊಳಿಸಿ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ. ಇನ್ನಾದರೂ ಕಾಂಗ್ರೆಸ್‌ ಮುಸ್ಲಿಮರ ಓಲೈಕೆ ಬಿಡಲಿ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ತನ್ನ ಮನಸ್ಥಿತಿ ಬದಲಾಯಿಸಿಕೊಳ್ಳದಿದ್ದರೆ ಜನರು ದಂಗೆ ಏಳುವ ಕಾಲ ದೂರವಿಲ್ಲ’ ಎಂದು ಎಚ್ಚರಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಯುವಕನ ಕೊಲೆಯಾಗಿದೆ. ಅದು ತಪ್ಪು. ಈ ಹಿಂದೆ ಹಿಂದೂಗಳ ಕೊಲೆಗಳು ನಡೆದವಲ್ಲ, ಆಗ ಸರ್ಕಾರ ಏನು ಮಾಡುತ್ತಿತ್ತು. ಮುಸ್ಲಿಂ ಮುಖಂಡರು ಈಗ ಕಾಂಗ್ರೆಸ್ ಪಕ್ಷಕ್ಕೆ ಸಾಮೂಹಿಕವಾಗಿ ರಾಜೀನಾಮೆ ಕೊಡುವ ಹೇಳಿಕೆ ನೀಡಿದ ಮೇಲೆ ಸರ್ಕಾರಕ್ಕೆ ಬುದ್ಧಿ ಬಂದಿದೆಯೇ? ಕಾನೂನು–ಸುವ್ಯವಸ್ಥೆ ಮಾತು ಈಗ ಕೇಳುತ್ತಿದೆ. ಪೊಲೀಸರ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ವ್ಯಂಗ್ಯವಾಡಿದರು.

ADVERTISEMENT

‘ರಾಜ್ಯ ಸರ್ಕಾರ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮುವಾದ ತಡೆಗೆ ವಿಶೇಷ ಪೊಲೀಸ್ ಪಡೆ ರಚಿಸಲು ಮುಂದಾಗಿದೆ. ಆದರೆ ಕೋಮುವಾದ ಕಾಂಗ್ರೆಸ್ ಕಚೇರಿಯಿಂದಲೇ ಹುಟ್ಟುತ್ತದೆ. ಮುಸ್ಲಿಮರ ಪರ ಇರುವ ಬಿ.ಕೆ. ಹರಿಪ್ರಸಾದ್ ಅವರನ್ನು ದಕ್ಷಿಣ ಕನ್ನಡದಲ್ಲಿ ಗಲಭೆ ನಿಲ್ಲಿಸಲು ಕಳುಹಿಸಲಾಗುತ್ತಿದೆ’ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮೋಹನ್ ಕುಮಾರ್ ಜಾಧವ್, ಲಕ್ಷ್ಮೀ ಶಂಕರನಾಯ್ಕ, ಆರತಿ ಆ.ಮ. ಪ್ರಕಾಶ್, ಮಹೇಶ್ ಕುಮಾರ್, ಶಂಕರ್, ಕುಬೇರಪ್ಪ, ಸಕ್ರಾನಾಯ್ಕ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.