ADVERTISEMENT

ಹವ್ಯಕ ಜಾತಿ ಹೆಸರಲ್ಲ, ಸಮುದಾಯ ಸೂಚಕ

ರಂಗ ನಿರ್ದೇಶಕ ಕೆ.ವಿ.ಅಕ್ಷರ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಮೇ 2019, 6:28 IST
Last Updated 12 ಮೇ 2019, 6:28 IST
ಕೆ.ವಿ.ಅಕ್ಷರ
ಕೆ.ವಿ.ಅಕ್ಷರ   

ಸಾಗರ: ಹವ್ಯಕ ಎನ್ನುವುದು ಒಂದು ಜಾತಿಯ ಹೆಸರಲ್ಲ; ಅದೊಂದು ಸಮುದಾಯ ಸೂಚಕ ಪದ ಎಂದು ರಂಗ ನಿರ್ದೇಶಕ ಕೆ.ವಿ. ಅಕ್ಷರ ಅಭಿಪ್ರಾಯಪಟ್ಟರು.

ಇಲ್ಲಿನ ಬಾಪಟ್ ಸಮುದಾಯ ಭವನದಲ್ಲಿ ‘ಸೌಹಾರ್ದ’ ಹೆಸರಿನ ಹವ್ಯಕರ ಫೇಸ್‌ಬುಕ್ ಬಳಗ ಶನಿವಾರ ಹಮ್ಮಿಕೊಂಡಿದ್ದ ಸೌಹಾರ್ದ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಹವ್ಯಕ ಎಂಬುದನ್ನು ಕೇವಲ ಜಾತಿಯ ಅರ್ಥದಲ್ಲಿ ಬಳಸಿದಾಕ್ಷಣ ಅದಕ್ಕೆ ಸೀಮಿತ ಚೌಕಟ್ಟಿನ ಜೊತೆಗೆ ಜಾತೀಯತೆಯ ಭಾವನೆಯೂ ಆವರಿಸಿಕೊಳ್ಳುತ್ತದೆ. ಹೀಗಾದರೆ ನಾವೇ ಶ್ರೇಷ್ಠ ಎಂಬ ಕಲ್ಪನೆಯೂ ಮೂಡಬಹುದು. ಜಾತಿ ಬದಲು ಸಮುದಾಯ ಎಂಬ ಪರಿಕಲ್ಪನೆಯನ್ನು ಒಪ್ಪಿಕೊಂಡರೆ ಇಂತಹ ಪ್ರಮೇಯ ಉದ್ಭವಿಸುವುದಿಲ್ಲ’ ಎಂದು ವಿಶ್ಲೇಷಿಸಿದರು.

ADVERTISEMENT

‘ಸಂಪ್ರದಾಯಗಳ ಬಗ್ಗೆ ಶಾಸ್ತ್ರಗಳಲ್ಲಿ ಉಲ್ಲೇಖವಿಲ್ಲ. ಅದು ಕುಲಧರ್ಮದಿಂದ ರೂಢಿಗತವಾಗಿ ಪೀಳಿಗೆಯಿಂದ ಪೀಳಿಗೆಗೆ ದಾಟುತ್ತಿದೆ. ಇಂತಹದ್ದೇ ಸಂಪ್ರದಾಯವನ್ನು ಅನುಸರಿಸಬೇಕು ಎಂಬುದು ಜಾತಿಯ ಮುಖಂಡರಿಂದ ನಿರ್ದೇಶಿತವಾಗಿಲ್ಲ. ಈ ಪ್ರಕ್ರಿಯೆ ಸಮುದಾಯದೊಳಗೆ ಸಹಜವಾಗಿ ನಡೆಯುತ್ತಿದೆ. ಹೀಗಾಗಿ ಸಮುದಾಯದಷ್ಟು ಪ್ರಜಾಸತ್ತಾತ್ಮಕವಾದದ್ದು ಬೇರೊಂದು ಇಲ್ಲ’ ಎಂದು ವ್ಯಾಖ್ಯಾನಿಸಿದರು.

‘ಸಂಪ್ರದಾಯ ಎನ್ನುವುದು ನಿಂತ ನೀರಲ್ಲ. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಅದು ತನ್ನ ಸ್ವರೂಪವನ್ನು ಬದಲಾಯಿಸಿಕೊಳ್ಳುತ್ತ ಹೋಗುತ್ತದೆ.

ಇಂತಹ ಬದಲಾವಣೆ ಗಳನ್ನು ಶಂಕರಾಚಾರ್ಯರು ಕೂಡ ಒಪ್ಪಿಕೊಂಡಿದ್ದರು ಎಂಬುದನ್ನು ಅವರನ್ನು ಆಳವಾಗಿ ಅಧ್ಯಯನ ಮಾಡಿದರೆ ಗೊತ್ತಾಗುತ್ತದೆ’ ಎಂದು ತಿಳಿಸಿದರು.

ಈ ಹಿಂದೆ ಹವ್ಯಕರು ಕೆಲವೊಂದು ಭೌಗೋಳಿಕ ಪ್ರದೇಶಕ್ಕೆ, ಅಡಿಕೆ ಕೃಷಿಗೆ ಮಾತ್ರ ಸೀಮಿತರಾಗಿದ್ದರು. ಈಗ ಪ್ರಪಂಚದ ಎಲ್ಲೆಡೆ ಹವ್ಯಕರು ನೆಲೆಸಿದ್ದು ವಿವಿಧ ವೃತ್ತಿಗಳಲ್ಲಿ ತೊಡಗಿದ್ದಾರೆ. ಒಬ್ಬರಿಗೊಬ್ಬರು ಪರಸ್ಪರ ಮುಖ ನೋಡದೆ ಸಂವಾದಿಸುವುದು ಸಮೂಹ ಮಾಧ್ಯಮದ ಅನನುಕೂಲವಾದರೆ, ಭೌಗೋಳಿಕ ವ್ಯಾಪ್ತಿಯನ್ನು ಮೀರುವುದು ಇದರ ಅನುಕೂಲವಾಗಿದೆ ಎಂದು ವಿಶ್ಲೇಷಿಸಿದರು.

ಎಂ.ಜಿ. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ‘ಹವ್ಯಕ ಫೇಸ್‌ಬುಕ್ ಬಳಗ’ದ ಮುಖ್ಯಸ್ಥ ಬಾಲಚಂದ್ರ ಭಟ್, ವೆಂಕಟಾಚಲ ಭಟ್, ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯದ ಮುಖ್ಯಸ್ಥೆ ವಸುಧಾ ಶರ್ಮಾ ಇದ್ದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.