ADVERTISEMENT

ಶಿವಮೊಗ್ಗ| ರೈತ ಚಳವಳಿ ಜತೆ ಸಾಹಿತಿ, ಕಲಾವಿದರು ನಿಲ್ಲಲಿ: ರೈತ ಹೋರಾಟಗಾರ್ತಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 5:58 IST
Last Updated 4 ಅಕ್ಟೋಬರ್ 2025, 5:58 IST
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿರು ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಶುಕ್ರವಾರ ಮಾತನಾಡಿದರು
ಸಾಗರ ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಆಯೋಜಿಸಿರು ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಶುಕ್ರವಾರ ಮಾತನಾಡಿದರು   

ಸಾಗರ: ರೈತರು, ದಲಿತರು, ಮಹಿಳೆಯರು ನಡೆಸುವ ಚಳವಳಿಗಳಿಗೆ ಏಕಾಂಗಿ ಭಾವ ಬರಬಾರದು. ಸಾಹಿತಿಗಳು, ಕಲಾವಿದರು ಚಳವಳಿಗಾರರ ಜೊತೆ ನಿಲ್ಲಬೇಕು ಎಂದು ರೈತ ಹೋರಾಟಗಾರ್ತಿ ಚುಕ್ಕಿ ನಂಜುಂಡಸ್ವಾಮಿ ಒತ್ತಾಯಿಸಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಆಯೋಜಿಸಿರುವ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ಶುಕ್ರವಾರ ಅವರು ‘ಸಮಾಜ ಕಾರ್ಯದ ಅನುಭಗಳು’ ಕುರಿತು ಮಾತನಾಡಿದರು.

ಸಾಮಾಜಿಕ, ಸಾಹಿತ್ಯಿಕ, ಕಲಾ ಕ್ಷೇತ್ರದಲ್ಲಿರುವವರು ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯಕ್ಕೆ ಚಳವಳಿಗಳಿಂದ ದೂರ ಉಳಿದಿರುವ ಕಾರಣ ಕರ್ನಾಟಕದಲ್ಲಿ ಹೋರಾಟಗಳು ಒಂಟಿ ಕಾಲಿನ ನಡೆಯಂತಾಗಿದೆ ಎಂದು ವಿಷಾದಿಸಿದರು.

ADVERTISEMENT

‘ದುಡಿಯುವ ವರ್ಗಗಳು ನಮ್ಮನ್ನು ಕಾಯುತ್ತಿವೆ. ಈ ವರ್ಗದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳನ್ನು ಸಿನಿಮಾ, ರಂಗಭೂಮಿ ಕಲಾವಿದರು, ಸಾಹಿತಿಗಳು ಮಾಡಬೇಕು. ಎಲ್ಲಾ ವರ್ಗಗಳು ಚಳವಳಿಗಳ ಜೊತೆ ನಿಲ್ಲದಿದ್ದರೆ ನಾವು ಸಂಪೂರ್ಣವಾಗಿ ಗುಲಾಮಗಿರಿಯತ್ತ ಸಾಗುವುದರಲ್ಲಿ ಅನುಮಾನವಿಲ್ಲ’ ಎಂದರು.

ಬಿತ್ತನೆ ಬೀಜ, ರಸಗೊಬ್ಬರದ ಮೇಲಿನ ರೈತರ ಸ್ವಾವಲಂಬನೆಯನ್ನು ಕಿತ್ತುಕೊಂಡ ಪರಿಣಾಮ ಆ ವರ್ಗ ಶೋಷಣೆಯ ಚಕ್ರವ್ಯೂಹಕ್ಕೆ ಸಿಲುಕಿದೆ. ರೈತರು ಸರ್ಕಾರ, ಕಾರ್ಪೊರೆಟ್ ಕಂಪನಿಗಳ ಅಡಿಯಾಳಾಗಬೇಕಾದ ಸನ್ನಿವೇಶ ಸೃಷ್ಟಿಸಲಾಗಿದೆ. ಸಾಂಪ್ರದಾಯಿಕ ಕೃಷಿ ಜ್ಞಾನ ಅವಜ್ಞೆಗೆ ಒಳಗಾಗಿರುವುದು ಬಿಕ್ಕಟ್ಟುಗಳಿಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಕೃಷಿ ವಿಜ್ಞಾನಿಗಳು ಬಂಡವಾಳಶಾಹಿ ದೃಷ್ಟಿಕೋನದಿಂದ ನೋಡುತ್ತಿದ್ದು, ಅವರು ಹಲವು ರೀತಿಯ ಅನಾಹುತಗಳನ್ನು ನಡೆಸುತ್ತಿದ್ದಾರೆ ಎಂದು ದೂರಿದರು.

‘ರೈತ ಚಳವಳಿ ಜೀವಂತವಾಗಿರುವ ಕಾರಣಕ್ಕೆ ಕುಲಾಂತರಿ ತಳಿ ಇನ್ನೂ ಆಹಾರ ಕ್ಷೇತ್ರಕ್ಕೆ ಕಾಲಿಟ್ಟಿಲ್ಲ. ಆದರೆ ಬಿ.ಟಿ.ತಳಿಯ ಹತ್ತಿ ಜವಳಿ ಕ್ಷೇತ್ರವನ್ನು ಆವರಿಸಿದೆ. ಸಾವಯವದ ಹೆಸರಿನಲ್ಲಿ ರಾಸಾಯನಿಕಯುಕ್ತ ವಿಷವನ್ನೇ ನಮಗೆ ಉಣಿಸಲಾಗುತ್ತಿದೆ. ಈ ಬಗ್ಗೆ ಎಚ್ಚರ ಅಗತ್ಯ’ ಎಂದರು.

ಯಾವ ಬಂಡವಾಳಶಾಹಿ ವ್ಯವಸ್ಥೆಯು ಕೃಷಿ ಕ್ಷೇತ್ರವನ್ನು ಆಕ್ರಮಿಸಿದೆಯೊ ಅದೇ ಶಕ್ತಿಗಳು ಕೋಮುದ್ವೇಷವನ್ನೂ ಹರಡುವ ಕೆಲಸ ಮಾಡುತ್ತಿವೆ. ಚಳವಳಿಗಳು ಇಂತಹ ಹುನ್ನಾರಗಳನ್ನು ಅರ್ಥ ಮಾಡಿಕೊಂಡಾಗ ಮಾತ್ರ ಸಮಗ್ರತೆ ಪಡೆಯಲು ಸಾಧ್ಯ ಎಂದು ಅವರು ಹೇಳಿದರು.

‘ನಮ್ಮಲ್ಲಿರುವ ಸಾಂಪ್ರದಾಯಿಕ ಜ್ಞಾನ ಪ್ರಕಾರಗಳ ದಾಖಲೀಕರಣ, ಹಕ್ಕುಸ್ವಾಮ್ಯ ಪಡೆಯುವ ಪ್ರಕ್ರಿಯೆಯಲ್ಲಿ ನಾವು ಹಿಂದಿದ್ದೇವೆ. ಕೈಮಗ್ಗ ನೇಕಾರಿಕೆಯ ಶ್ರೀಮಂತ ಪರಂಪರೆಯನ್ನು ನಾವು ಹೊಂದಿದ್ದರೂ ಅವುಗಳ ವ್ಯಾಪಕ ಬಳಕೆ ಸಾಧ್ಯವಾಗದೆ ಇರುವ ಬಗ್ಗೆ ಚಿಂತನೆ ಅಗತ್ಯ’ ಎಂದು ಸಾಮಾಜಿಕ ಕಾರ್ಯಕರ್ತೆ ಹೇಮಲತಾ ಜೈನ್ ಹೇಳಿದರು.

‘ನಮ್ಮ ನಡುವಿನ ಸಾಂಪ್ರದಾಯಿಕ ಜ್ಞಾನ ಪರಂಪರೆಯ ಮಹತ್ವವನ್ನು ಮಕ್ಕಳಿಗೆ, ಯುವಜನರಿಗೆ ತಿಳಿಸುವ ಕೆಲಸ ಆಗಬೇಕು. ನಾವು ತೊಡುವ ಬಟ್ಟೆ ಎಲ್ಲಿ, ಯಾರಿಂದ ಉತ್ಪಾದನೆಯಾಗುತ್ತದೆ, ನಾವು ನೀಡುವ ಹಣ ಯಾವ ಸಮಯದಾಯಕ್ಕೆ ತಲುಪುತ್ತದೆ ಎಂಬ ನಾಗರಿಕ ಪ್ರಜ್ಞೆ ಜಾಗೃತವಾಗಿದ್ದರೆ ಮಾತ್ರ ಕೈಮಗ್ಗ ನೇಕಾರಿಕೆಯಂತಹ ಸಾಂಪ್ರದಾಯಿಕ ಪ್ರಕಾರಗಳಲು ಉಳಿಯಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಧಿಕ್ಕಾರ ಹೇಳಲು ಹಿಂಜರಿಕೆ ಬೇಡ
ದುಡಿಯುವ ವರ್ಗವನ್ನು ಶೋಷಿಸುವ ಶಕ್ತಿಗಳ ವಿರುದ್ಧ ಚಳವಳಿ ನಡೆದಾಗ ಅವುಗಳ ವಿರುದ್ಧ ಧಿಕ್ಕಾರ ಹೇಳಲು ಸಾಹಿತಿ ಕಲಾವಿದರು ಹಿಂಜರಿಯಬಾರದು ಎಂದು ಚುಕ್ಕಿ ನಂಜುಂಡಸ್ವಾಮಿ ಮನವಿ ಮಾಡಿದರು. ಹೋರಾಟಗಳಿಂದ ಬದಲಾವಣೆ ಸಾಧ್ಯವಿಲ್ಲ ಎಂಬ ನಿರಾಶಾವಾವನ್ನು ಕೈ ಬಿಡಬೇಕು. ಧಿಕ್ಕಾರ ಕೂಗಿದಾಕ್ಷಣ ನಮ್ಮ ಘನತೆ ಕಡಿಮೆಯಾಗುತ್ತದೆ ಎಂಬ ಮನೋಭಾವ ಸಲ್ಲದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.