ಶಿಕಾರಿಪುರ: ಈಸೂರು– ಅಂಜನಾಪುರ ನಡುವಿನ 11 ಕೆ.ವಿ. ವಿದ್ಯುತ್ ನಿರ್ಮಾಣ ಮಾರ್ಗ ಅವೈಜ್ಞಾನಿಕವಾಗಿದ್ದರೆ ಅಗತ್ಯವಾಗಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ವಾಪಸ್ ಪಡೆದುಕೊಂಡರು.
ಈಸೂರು– ಅಂಜನಾಪುರ ನಡುವಿನ 11 ಕೆ.ವಿ. ವಿದ್ಯುತ್ ನಿರ್ಮಾಣ ಮಾರ್ಗ ಬದಲಿಗೆ ಆಗ್ರಹಿಸಿ ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಡೆಸುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಬುಧವಾರ ಆಗಮಿಸಿ ರೈತರ ಸಮಸ್ಯೆ ಆಲಿಸಿ ಭರವಸೆ ನೀಡಿದರು.
‘ನಾವು ರೈತರ ಪರವಾಗಿದ್ದೇವೆ. ಕೂಡಲೇ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ ಅವೈಜ್ಞಾನಿಕ ಕಾಮಗಾರಿಯಾಗಿದ್ದರೆ ಅದರ ವಿರುದ್ಧ ಕಠಿಣ ಕ್ರಮ ಗೊಳ್ಳಲಾಗುವುದು’ ಎಂದು ಹೇಳಿದರು.
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಕೈಗೆತ್ತಿಕೊಂಡಿರುವ ಕಾಮಗಾರಿ ಅವೈಜ್ಞಾನಿಕವಾಗಿದೆ. 4.5 ಕಿ.ಮೀ. ದೂರವಿರುವ ಗ್ರೀಡ್‌ಗೆ 20 ಕಿ.ಮೀ.ನಿಂದ ಹೈಟೆನ್ಷನ್ ವಿದ್ಯುತ್ ಮಾರ್ಗ ಯೋಜನೆ ರೂಪಿಸುತ್ತಿದೆ. ಯಾವುದೇ ಕಾರಣಕ್ಕೂ ಹೈಟೆನ್ಷನ್ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ಮಾಡಬಾರದು ಎಂದು ರೈತರು ಆಗ್ರಹಿಸಿದರು.
ಈಗಾಗಲೇ ಈ ಪ್ರದೇಶದಲ್ಲಿ ರೈತರು ಉತ್ತಮ ಬೆಳೆ ಬೆಳೆಯುತ್ತಿದ್ದು, ವಿದ್ಯುತ್ ಮಾರ್ಗ ನಿರ್ಮಾಣ ಮಾಡಿದರೆ ರೈತರು ತಮ್ಮ ಅಡಿಕೆ ತೋಟಗಳ ಮೇಲೆ ವಿದ್ಯುತ್ ಮಾರ್ಗ ಹಾಯ್ದು ಹೋದರೆ ತೋಟವನ್ನು ಕಳೆದುಕೊಂಡು ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು.
ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ಆರ್, ಶಿಕಾರಿಪುರ ತಹಶೀಲ್ದಾರ್ ಮಲ್ಲೇಶ್ ಪೂಜಾರ್, ಅನೇಕ ರೈತ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.