ADVERTISEMENT

ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ: ಫ್ಲಿಪ್‌ಕಾರ್ಟ್‌ಗೆ ಪರಿಹಾರ ಪಾವತಿಗೆ ಆದೇಶ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 5:37 IST
Last Updated 6 ಫೆಬ್ರುವರಿ 2026, 5:37 IST

ಶಿವಮೊಗ್ಗ: ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್‌ಗೆ ಎಂಆರ್‌ಪಿಗಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗಿದೆ ಎಂದು ಮಂಡಘಟ್ಟ ನಿವಾಸಿ ಶಿವಕುಮಾರ್ ಎಸ್. ಅವರು ದಾಖಲಿಸಿದ್ದ ದೂರಿನ ಕುರಿತು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್ ಹಾಗೂ ಮಾರಾಟಗಾರರರಿಗೆ ₹25,000 ಪರಿಹಾರ ಪಾವತಿಸುವಂತೆ ಆದೇಶ ನೀಡಿದೆ.

ಶಿವಕುಮಾರ್ ಎಸ್. ಅವರು ಬೆಂಗಳೂರು ಫ್ಲಿಪ್‌ಕಾರ್ಟ್ ಮುಖ್ಯ ವ್ಯವಸ್ಥಾಪಕರು ಹಾಗೂ ಉತ್ತರ ಪ್ರದೇಶದ ಮುಜಫರ್‌ ನಗರದ ಶ್ರೀ ಲಕ್ಷ್ಮೀ ಪೈಂಟ್ಸ್ ಹೌಸ್ ವಿರುದ್ಧ ದೂರು ಸಲ್ಲಿಸಿದ್ದರು.

ಫ್ಲಿಪ್‌ಕಾರ್ಟ್ ಮೂಲಕ ಒಂದು ಲೀಟರ್ ಏಷಿಯನ್ ವುಡ್ ಪ್ರೈಮರ್ ಅನ್ನು ಶೇ 76ರಷ್ಟು ರಿಯಾಯಿತಿ ದರದಲ್ಲಿ ₹ 540 ಹಾಗೂ ಶಿಪ್ಪಿಂಗ್ ಶುಲ್ಕ ₹ 41 ಸೇರಿ ಖರೀದಿಸಿದ್ದರು. ಆದರೆ, ಉತ್ಪನ್ನವನ್ನು ಪರಿಶೀಲಿಸಿದಾಗ ಎಂಆರ್‌ಪಿ ಬೆಲೆಯನ್ನು ಅಳಿಸಿ ಅದರ ಮೇಲೆ ಬಿಳಿ ಕಾಗದ ಅಂಟಿಸಲಾಗಿದ್ದು, ನಿಜವಾದ ಎಂಆರ್‌ಪಿ ₹ 324 ಆಗಿರುವುದು ಬೆಳಕಿಗೆ ಬಂದಿದೆ. ಇದರಿಂದ ₹ 216 ಹೆಚ್ಚುವರಿ ಹಣ ವಸೂಲಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ADVERTISEMENT

ಈ ಕುರಿತು ಹೆಚ್ಚಿನ ಮೊತ್ತವನ್ನು ಮರುಪಾವತಿಸುವಂತೆ ಮಾರಾಟಗಾರರಿಗೆ ಲೀಗಲ್ ನೋಟಿಸ್ ನೀಡಲಾಗಿದ್ದರೂ ಯಾವುದೇ ಪ್ರತಿಕ್ರಿಯೆ ಲಭಿಸಿರಲಿಲ್ಲ. ಇದನ್ನು ಸೇವಾ ನ್ಯೂನ್ಯತೆ ಎಂದು ಪರಿಗಣಿಸಿ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು. ದೂರುದಾರರ ಪ್ರಮಾಣ ಪತ್ರ ಹಾಗೂ ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ, ಎಂಆರ್‌ಪಿಗಿಂತ ಹೆಚ್ಚು ಹಣ ವಸೂಲಿ ಮಾಡಿರುವುದು ಸೇವಾ ನ್ಯೂನ್ಯತೆ ಎಂದು ತೀರ್ಮಾನಿಸಿತು.

ದೂರನ್ನು ಭಾಗಶಃ ಪುರಸ್ಕರಿಸಿದ ಆಯೋಗ, ಹೆಚ್ಚುವರಿ ವಸೂಲಾದ ₹ 216ಕ್ಕೆ 2024ರ ಸೆ. 13ರಿಂದ ವಾರ್ಷಿಕ ಶೇ 9ರ ಬಡ್ಡಿಯೊಂದಿಗೆ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಿದೆ. ನಿಗದಿತ ಅವಧಿಯಲ್ಲಿ ಪಾವತಿ ಮಾಡದಿದ್ದಲ್ಲಿ ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಹಣ ಪಾವತಿಸುವಂತೆ ಆದೇಶಿಸಲಾಗಿದೆ.

ಅದೇ ರೀತಿ, ಮಾನಸಿಕ ಹಿಂಸೆ ಹಾಗೂ ದೂರು ವೆಚ್ಚಕ್ಕಾಗಿ ₹25,000 ಪರಿಹಾರವನ್ನು ಕೂಡ 45 ದಿನಗಳೊಳಗೆ ಪಾವತಿಸುವಂತೆ ಆದೇಶಿಸಲಾಗಿದ್ದು, ವಿಳಂಬವಾದಲ್ಲಿ ವಾರ್ಷಿಕ ಶೇ 12ರ ಬಡ್ಡಿಯೊಂದಿಗೆ ಪಾವತಿಸಬೇಕು ಎಂದು ಆದೇಶಿಸಲಾಗಿದೆ.

ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ ಹಾಗೂ ಸದಸ್ಯ ಬಿ.ಡಿ. ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಡಿ. 31ರಂದು ಈ ಆದೇಶ ನೀಡಿದೆ ಎಂದು ಆಯೋಗದ ಸಹಾಯಕ ರಿಜಿಸ್ಟ್ರಾರ್ ಗಂಗಾಧರ ನಾಯ್ಕ ಎಂ.ಟಿ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.