ADVERTISEMENT

ಶಿವಮೊಗ್ಗ | ₹10 ಸಾವಿರ ಕೋಟಿ ಕಾಮಗಾರಿಗೆ ಶಂಕುಸ್ಥಾಪನೆ

ಫೆ.27ಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನಿರೀಕ್ಷೆ: ಸಂಸದ ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 6:20 IST
Last Updated 28 ಜನವರಿ 2023, 6:20 IST
ಶಿವಮೊಗ್ಗ ಬಸವನಗುಡಿಯಲ್ಲಿ ಶುಕ್ರವಾರ ನೂತನವಾಗಿ ಆರಂಭವಾದ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿಕಾಸ ಕೇಂದ್ರವನ್ನು ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.
ಶಿವಮೊಗ್ಗ ಬಸವನಗುಡಿಯಲ್ಲಿ ಶುಕ್ರವಾರ ನೂತನವಾಗಿ ಆರಂಭವಾದ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿಕಾಸ ಕೇಂದ್ರವನ್ನು ಶುಕ್ರವಾರ ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು.   

ಶಿವಮೊಗ್ಗ: ‘ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರುವರಿ 27ರಂದು ಶಿವಮೊಗ್ಗಕ್ಕೆ ಬರುವ ಸಾಧ್ಯತೆ ಇದ್ದು, ನೂತನ ವಿಮಾನ ನಿಲ್ದಾಣ, ಮೇಲ್ಸೇತುವೆ, ರಸ್ತೆ ಸೇರಿ ಹಲವು ಯೋಜನೆಗಳ ಲೋಕಾರ್ಪಣೆ ಸೇರಿದಂತೆ ₹ 10,000 ಕೋಟಿ ವೆಚ್ಚದ ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಬಸವನಗುಡಿಯಲ್ಲಿ ಶುಕ್ರವಾರ ನೂತನವಾಗಿ ಆರಂಭವಾದ ಸರ್ಕಾರಿ ಅಧಿಕಾರಿ ಮತ್ತು ನೌಕರರ ವಿಕಾಸ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂಸದನಾಗಿ ಈ ಅವಧಿಯಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಕಾರ್ಯಗಳು, ಅನುದಾನ ತರುವ ಪ್ರಯತ್ನ ನಿರಂತರವಾಗಿದೆ. ಅದರ ಫಲವಾಗಿ ಕೊಡಚಾದ್ರಿ ಮತ್ತು ಕೊಲ್ಲೂರು ಕೇಬಲ್ ಕಾರ್‌ ಆರಂಭಕ್ಕೆ ಈಗಾಗಲೇ ಹಸಿರು ನಿಶಾನೆ ದೊರೆತಿದೆ. ಸುಮಾರು 6 ಕಿ.ಮೀ ಉದ್ದದ ಮಾರ್ಗ ₹ 50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. ಈ ಸಂಬಂಧ ಈಗಾಗಲೇ ತಜ್ಞರಿಂದ ಸ್ಥಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ’ ಎಂದರು.

ADVERTISEMENT

ಪ್ರತಿದಿನ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನೌಕರರ ಮಾನಸಿಕ ವಿಕಾಸ ಹಾಗೂ ದೈಹಿಕ ನೆಮ್ಮದಿಗಾಗಿ ನೂತನ ವಿಕಾಸ ಕೇಂದ್ರ ಸಹಕಾರಿಯಾಗಲಿದೆ. ವಿಶಾಲವಾದ ಪ್ರಾಂಗಣದಲ್ಲಿ ಆರಂಭಿಸಲಾದ ಈ ವಿಕಾಸ ಕೇಂದ್ರವು ರಾಜ್ಯದಲ್ಲಿಯೇ ಮಾದರಿಯಾಗಿದೆ. ಇಲ್ಲಿನ ಕ್ರೀಡೆ, ಸಾಹಸ ಚಟುವಟಿಕೆ ನೌಕರರಲ್ಲಿ ಮಾನಸಿಕ ಒತ್ತಡ ಕಡಿಮೆಯಾಗಿ ಮನೋಬಲ ವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಬಹುದಿನಗಳ ಕನಸು ನನಸಾಗಿದೆ. ಇದರ ಯಶಸ್ಸಿನ ಹಿಂದೆ ಸಂಸದರ ಸಹಕಾರ, ಮಾರ್ಗದರ್ಶನ ಮತ್ತು ಸಿ.ಎಸ್.ಷಡಾಕ್ಷರಿ ಅವರ ಪ್ರಾಮಾಣಿಕ ಯತ್ನವಿದೆ ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಪ್ರಮಾಣಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಎನ್.ಡಿ.ಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸ್ಮಾರ್ಟ್‌ ಸಿಟಿ ಆಡಳಿತಾಧಿಕಾರಿ ಚಿದಾನಂದ ಎಸ್.ವಟಾರೆ, ಲೋಕೋಪಯೋಗಿ ಇಲಾಖೆ ಮುಖ್ಯ ಎಂಜಿನಿಯರ್‌ ಬಿ.ಟಿ.ಕಾಂತರಾಜ್, ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ನಾಗರಾಜ್, ಸೂಡಾ ಆಯುಕ್ತ ಕೊಟ್ರೇಶಪ್ಪ, ಉಪವಿಭಾಗಾಧಿಕಾರಿ ಚನ್ನಪ್ಪ, ಆರ್.ಮೋಹನ್‍ಕುಮಾರ್, ಅರುಣ್, ಕೃಷ್ಣಮೂರ್ತಿ, ಆರ್.ಪಾಪಣ್ಣ ಇದ್ದರು.

ಕ್ಯಾಂಟೀನ್ ಆರಂಭ ಫೆ.4ಕ್ಕೆ: ಷಡಾಕ್ಷರಿ

ಶಿವಮೊಗ್ಗದಲ್ಲಿ ಸರ್ಕಾರಿ ನೌಕರರ ಕ್ಯಾಂಟೀನ್ ಫೆಬ್ರುವರಿ 4ರಂದು ಆರಂಭಗೊಳ್ಳಲಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಹೇಳಿದರು.

ಈ ಕ್ಯಾಂಟೀನ್‍ನಲ್ಲಿ 1200 ರೀತಿಯ ಗೃಹಬಳಕೆ ವಸ್ತುಗಳು ಶೇ 10ರಿಂದ 60ರ ರಿಯಾಯಿತಿ ದರದಲ್ಲಿ ದೊರೆಯಲಿವೆ. ಗೃಹ ನಿರ್ಮಾಣ ಸಹಕಾರ ಸಂಘದ ಮೂಲಕ ಜಿಲ್ಲೆಯ 4,000 ನೌಕರರಿಗೆ ಈಗಾಗಲೇ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲಸೌಲಭ್ಯ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.