ಶಿವಮೊಗ್ಗ: ಕೇಂದ್ರೀಯ ಮೃಗಾಲಯ ಪ್ರಾಧಿಕಾರದ (CZA) ಪ್ರಾಣಿ ವಿನಿಮಯ ಯೋಜನೆಯಡಿ ಮಹಾರಾಷ್ಟ್ರದ ಔರಂಗಾಬಾದ್ ಹಾಗೂ ಮಧ್ಯಪ್ರದೇಶದ ಇಂದೋರ್‌ನಿಂದ ಬಿಳಿ ಹುಲಿ ರುದ್ರ ಒಳಗೊಂಡ ನಾಲ್ಕು ಹುಲಿಗಳು ಶಿವಮೊಗ್ಗಕ್ಕೆ ಬರಲಿವೆ. ಈ ವ್ಯಾಘ್ರಗಳ ಪಡೆಯನ್ನು ಸ್ವಾಗತಿಸಲು ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಆಡಳಿತ ಸಜ್ಜಾಗಿದೆ.
ತ್ಯಾವರೆಕೊಪ್ಪ ಹುಲಿ–ಸಿಂಹಧಾಮದಲ್ಲಿ ಈಗ ನಾಲ್ಕು ಹೆಣ್ಣು ಹುಲಿಗಳಿವೆ. ಅವುಗಳಿಗೆ ವಯಸ್ಸಾಗಿದೆ. ಸಂತಾನಾಭಿವೃದ್ಧಿ ಸಾಮರ್ಥ್ಯ ಕಳೆದುಕೊಂಡಿವೆ. ಹೀಗಾಗಿ ಮೃಗಾಲಯದ ಮುಂದಿನ 20 ವರ್ಷಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಹುಲಿಗಳ ಸಂತಾನಾಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಔರಂಗಾಬಾದ್‌ನಿಂದ ರುದ್ರ ಹಾಗೂ ಎರಡು ಹೆಣ್ಣು ಹುಲಿಗಳು ಹಾಗೂ ಇಂದೋರ್‌ನಿಂದ ಒಂದು ಗಂಡು ಹುಲಿ ತರಲಾಗುತ್ತಿದೆ. ಈ ಎಲ್ಲ ಹುಲಿಗಳೂ ಎರಡು ವರ್ಷದೊಳಗಿನವಾಗಿವೆ. ಸಂತಾನಾಭಿವೃದ್ಧಿ ಸಾಮರ್ಥ್ಯ ಹೊಂದಿವೆ.
ತ್ಯಾವರೆಕೊಪ್ಪದಲ್ಲಿರುವ ನಾಲ್ಕು ಸಿಂಹಗಳಲ್ಲಿ ಅರ್ಜುನ ಹಾಗೂ ಸುಚಿತ್ರಾ ಔರಂಗಾಬಾದ್ ಮೃಗಾಲಯಕ್ಕೆ ತೆರಳಲಿವೆ. ಜೊತೆಗೆ ಇಲ್ಲಿಂದ ಕರಡಿ ಹಾಗೂ ನರಿಯ ಜೋಡಿಯನ್ನು ಅಲ್ಲಿಗೆ ಕಳಿಸಿಕೊಡಲಾಗುತ್ತಿದೆ.
ಇಂದೋರ್‌ನಿಂದ ಹುಲಿಯ ಜೊತೆಗೆ ಎರಡು ಏಷ್ಯಾ ಸಿಂಹಗಳ (ಏಷ್ಯಾಟಿಕ್ ಲಯನ್) ಜೋಡಿ ಶಿವಮೊಗ್ಗಕ್ಕೆ ಬರಲಿವೆ. ಈಗ ಶಿವಮೊಗ್ಗ ಮೃಗಾಲಯದಲ್ಲಿರುವ ನಾಲ್ಕು ಸಿಂಹಗಳಿಗೆ ವಯಸ್ಸಾಗಿದೆ. ಅದರಲ್ಲಿ ಎರಡು ಔರಂಗಾಬಾದ್‌ಗೆ ಹೋಗಲಿವೆ. ಇಲ್ಲಿಗೆ ಬರುತ್ತಿರುವ ಏಷ್ಯಾ ಸಿಂಹಗಳು ಸಂತಾನಾಭಿವೃದ್ಧಿಯ ಶಕ್ತಿ ಹೊಂದಿವೆ ಎಂದು ತಿಳಿದುಬಂದಿದೆ.
ಏಷ್ಯಾ ಸಿಂಹಗಳ ಬದಲಿಗೆ ಶಿವಮೊಗ್ಗದಿಂದ ಎರಡು ಜೋಡಿ (ನಾಲ್ಕು) ಕಾಡುಕೋಣ ಹಾಗೂ ಎರಡು ಜೋಡಿ ಆಸ್ಟ್ರಿಚ್ (ನಾಲ್ಕು) ಅನ್ನು ಇಂದೋರ್‌ಗೆ ಕಳುಹಿಸಲಾಗುತ್ತಿದೆ. ಪ್ರಾಣಿಗಳ ವಿನಿಮಯಕ್ಕೆ ಈಗಾಗಲೇ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ಕೊಟ್ಟಿದೆ. ಮೊದಲ ಹಂತದಲ್ಲಿ ಬಿಳಿ ಹುಲಿ ಸೇರಿ ಮೂರು ಹುಲಿಗಳು ಸೆಪ್ಟೆಂಬರ್ ಅಂತ್ಯಕ್ಕೆ ಔರಂಗಾಬಾದ್‌ನಿಂದ ಶಿವಮೊಗ್ಗಕ್ಕೆ ಬರಲಿವೆ ಎಂದು ತ್ಯಾವರೆಕೊಪ‍್ಪ ಹುಲಿ–ಸಿಂಹಧಾಮದ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಸರದಲ್ಲಿ ಮನುಷ್ಯನಷ್ಟೇ ಬದುಕುವ ಹಕ್ಕು ಪ್ರಾಣಿ–ಪಕ್ಷಿಗಳೂ ಹೊಂದಿವೆ. ಪ್ರಾಣಿಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ನಾಗರಿಕರನ್ನು ಹೆಚ್ಚಾಗಿ ತೊಡಗಿಸಿಕೊಳ್ಳುವುದೇ ದತ್ತು ಯೋಜನೆಯ ಆಶಯಬಿ.ಆರ್.ಅಮರಾಕ್ಷರ್ ಕಾರ್ಯ ನಿರ್ವಾಹಕ ನಿರ್ದೇಶಕ ತ್ಯಾವರೆಕೊಪ್ಪ ಹುಲಿ–ಸಿಂಹಧಾಮ
ತ್ಯಾವರೆಕೊಪ್ಪ ಹುಲಿ– ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ್ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ ಒಪ್ಪಂದ ಮಾಡಿಕೊಂಡರು. ಈ ವೇಳೆ ಕಾಲೇಜಿನ ಪ್ರಾಂಶುಪಾಲ ಬಿ.ಎಸ್.ಶಿವಪ್ರಸಾದ್ ಅರಣ್ಯ ಶಿಕ್ಷಣ ಅಧಿಕಾರಿ ಸಿಂಚನಾ ಸಾರ್ವಜನಿಕ ಸಂಪರ್ಕಾಧಿಕಾರಿ ಐಜಾ ಉಪಸ್ಥಿತರಿದ್ದರು.
ಹುಲಿ ಸೇರಿ ಮೃಗಾಲಯದ ಯಾವುದೇ ಪ್ರಾಣಿ ದತ್ತು ಪಡೆಯಲು ಸಂಪರ್ಕ ಸಂಖ್ಯೆ: 9886325760.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.