ಶಿವಮೊಗ್ಗ: ನಗರದ ಕೋಟೆ ಭೀಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸರುವ ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ ಶನಿವಾರ ನಡೆಯಲಿದೆ. ಇಡೀ ನಗರ ಅದ್ದೂರಿಯಾಗಿ ಸಿಂಗಾರಗೊಂಡಿದೆ.
ಹಿಂದೂ ಕೇಸರಿ ಅಲಂಕಾರ ಸಮಿತಿಯಿಂದ ಗಣಪತಿ ಸಾಗುವ ಮಾರ್ಗಗಳಲ್ಲಿ ಮಾತ್ರವಲ್ಲದೇ ಇಡೀ ನಗರದ ಪ್ರಮುಖ ವೃತ್ತ, ರಸ್ತೆಗಳನ್ನು ಕಲಾ ಕೃತಿಗಳ ಮೂಲಕ ಅಲಂಕರಿಸಲಾಗಿದೆ. ಕೇಸರಿ ಬಂಟಿಂಗ್ ಕಟ್ಟಲಾಗಿದ್ದು, ಶಿವಮೊಗ್ಗ ನಗರ ಕೇಸರಿಮಯವಾಗಿದೆ.
ರಾಜ ಬೀದಿ ಉತ್ಸವಕ್ಕೆ ನಗರ ಮಾತ್ರವಲ್ಲದೇ ವಿವಿಧೆಡೆಯಿಂದ ಅಪಾರ ಸಂಖ್ಯೆಯ ಜನರು ಬರಲಿದ್ದು, ತಿಂಡಿ, ಪಾನೀಯ, ಸಿಹಿ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ದೇವತೆಗಳು ಮತ್ತು ರಾಕ್ಷಸರ ಮಧ್ಯೆ ಅಮೃತಕ್ಕಾಗಿ ಹಾಲಿನ ಸಮುದ್ರವನ್ನು ಕಡೆಯುವ ಕಥೆಯ ಪ್ರತಿಕೃತಿಯನ್ನು ಈ ಬಾರಿಯ ಮಹಾದ್ವಾರದಲ್ಲಿ ಸ್ಥಾಪಿಸಲಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ದೊಡ್ಡ ಸಂಖ್ಯೆಯ ಜನರು ಗಾಂಧಿ ಬಜಾರ್ ಮುಂಭಾಗ ಸಮುದ್ರ ಮಥನದ ಪ್ರತಿಕೃತಿ ಬಳಿ ಬಂದು ಫೋಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು.
ನೆಹರು ರಸ್ತೆಯ ಪ್ರವೇಶದಲ್ಲಿ ಆಪರೇಷನ್ ಸಿಂಧೂರ್ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಹೆಸರಿನ ಮಹಾದ್ವಾರ ನಿರ್ಮಿಸಲಾಗಿದೆ. ರಾಜಬೀದಿ ಉತ್ಸವಕ್ಕೆ ಶುಭ ಕೋರಿ ಫ್ಲೆಕ್ಸ್ ಹಾಕಲಾಗಿದೆ. ಗಣಪತಿ ಮೂರ್ತಿಗೆ ಬೃಹತ್ ಹೂವಿನ ಹಾರ ಹಾಗೂ ಹಣ್ಣಿನ ಹಾರಗಳನ್ನು ಹಾಕಲು ಕ್ರೇನ್‌ಗಳನ್ನು ತರಲಾಗಿದೆ.
ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಇಡೀ ನಗರದಲ್ಲಿ ಸಿ.ಸಿ. ಟಿವಿ ಕ್ಯಾಮೆರಾ ಕಣ್ಗಾವಲು ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.