ಶಿವಮೊಗ್ಗ: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬೆಂಕಿ ರೋಗ ವ್ಯಾಪಕವಾಗಿ ಹರಡುತ್ತಿದೆ. ಹಸಿರು ಹೊದ್ದು ಕಂಗೊಳಿಸುತ್ತಿದ್ದ ಬೆಳೆ, ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಒಣಗಿ ಹೋದಂತೆ ಕಾಣುತ್ತಿದೆ. ಬೆಳೆಯಲ್ಲಿ ಹೀಗೆ ಅತಿ ವೇಗದ ಬದಲಾವಣೆಯಾಗುತ್ತಿರುವುದನ್ನು ಕಂಡು ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.
ಮೊದಲ ಬಾರಿಗೆ ಈ ಭಾಗದಲ್ಲಿ ಶುಂಠಿಗೆ ‘ಫೈರಿಕ್ಯುಲಾರಿಯಾ’ ಎಂಬ ಶಿಲೀಂಧ್ರ ರೋಗ ದೊಡ್ಡ ಪ್ರಮಾಣದಲ್ಲಿ ಬಾಧಿಸಿದೆ. ಬೆಳೆ ಸುಟ್ಟಂತೆ ಕಾಣುವುದರಿಂದ ರೈತರು ಅದನ್ನು ಬೆಂಕಿ ರೋಗ ಎಂಬ ಹೆಸರಿನಿಂದ ಕರೆಯುತ್ತಿದ್ದಾರೆ. ಕಳೆದ ವರ್ಷ ಕೊಡಗು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಈ ರೋಗ, ಹಂಗಾಮಿನ ಕೊನೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಬಾಧಿಸಿತ್ತು. ಈ ಬಾರಿ ಶಿವಮೊಗ್ಗ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಎಂ.ವೈ.ಉಲ್ಲಾಸ್ ಹೇಳುತ್ತಾರೆ.
ಈ ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳು ಮೂಡಿ, ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಸುಟ್ಟಂತೆ ಭಾಸವಾಗುತ್ತವೆ. ಕೆಲವು ಶುಂಠಿ ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಈ ರೋಗ ಬಾಧೆಗೊಳಗಾದ ತಾಕುಗಳು ಕಳೆ ನಾಶಕ ಸಿಂಪಡಿಸಿರುವಂತೆ ಕಾಣುತ್ತವೆ.
ಶೇ 90ರಷ್ಟು ಬಾಧೆ:
‘ನಮ್ಮಲ್ಲಿ ಶೇ 90ರಷ್ಟು ಬೆಳೆಗೆ ಶಿಲೀಂಧ್ರ ಬಾಧಿಸಿದೆ. ಕಳೆದ ವರ್ಷ ಬೆಳೆಯ ಕೊನೆಯ ಹಂತದಲ್ಲಿ ರೋಗ ಕಾಣಿಸಿಕೊಂಡಿತ್ತು. ಆದರೆ ಈ ವರ್ಷ ಅತಿಯಾದ ತೇವಾಂಶವಿರುವುದರಿಂದ ಬೆಳೆಗೆ ಪೂರ್ವಾರ್ಧದಲ್ಲಿಯೇ ರೋಗದ ಹಾವಳಿ ಹೆಚ್ಚಾಗಿದೆ’ ಎಂದು ಆನಂದಪುರದ ಶುಂಠಿ ಬೆಳೆಗಾರ ಎಚ್.ಸಿ.ಸತೀಶಚಂದ್ರ ಹೇಳುತ್ತಾರೆ. ಅವರು ಮೂರು ಎಕರೆಯಲ್ಲಿ ಶುಂಠಿ ನಾಟಿ ಮಾಡಿದ್ದು, ಸಂಪೂರ್ಣ ರೋಗ ಬಾಧೆಗೆ ತುತ್ತಾಗಿದೆ.
ಔಷಧೋಪಚಾರದ ಕಿವಿಮಾತು:
ರೋಗದ ಹಾವಳಿ ಪ್ರಾರಂಭಿಕ ಹಂತದಲ್ಲಿ ಇದ್ದರೆ, ಅಂದರೆ ಕಪ್ಪುಬಣ್ಣದ ಚುಕ್ಕೆಗಳು ಎಲೆಯ ಮೇಲೆ ಕಂಡುಬಂದಲ್ಲಿ, ತಕ್ಷಣವೇ ಟೆಬುಕೊನಜೋಲ್ 1 ಎಂಎಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅದರೊಟ್ಟಿಗೆ ಪ್ರಾಪಿಕೊನಜೋಲ್ 1 ಎಂಎಲ್ ಪ್ರತಿ ಲೀಟರ್‌ಗೆ ಬೆರೆಸಿ ಸಿಂಪಡಿಸಬೇಕು. ರೋಗ ಕಡಿಮೆ ಆಗುವವರೆಗೂ ಯಾವುದೇ ರಾಸಾಯನಿಕ ಗೊಬ್ಬರ ಬಳಸಬಾರದು ಎಂದು ಪ್ರೊ.ಉಲ್ಲಾಸ್ ಸಲಹೆ ನೀಡುತ್ತಾರೆ.
ಬಾಧೆ ತೀವ್ರವಾದ ತಾಕುಗಳಲ್ಲಿ ಸಾಧ್ಯವಾದಷ್ಟು ಬೇಗ ಔಷಧಿ ಸಿಂಪರಣೆ ಮಾಡುವುದು ಸೂಕ್ತ. 15 ದಿನಗಳ ಅಂತರದಲ್ಲಿ ಸಿಂಪಡಣೆ ಪುನರಾವರ್ತಿಸಬೇಕು. ಈ ರೋಗವು ಶೀಘ್ರ ಪಸರಿಸುತ್ತಿದೆ. ಇದರಿಂದ ಎಲ್ಲಾ ಬೆಳೆಗಾರರು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸುವುದು ಹೆಚ್ಚು ಸೂಕ್ತ.
ಒಂದು ಲೀಟರ್ ನೀರಿನಲ್ಲಿ ಎರಡು ಗ್ರಾಂ ಮ್ಯಾನ್ಕೋಜೆಬ್ ಬೆರೆಸಿ ಶುಂಠಿ ಬೀಜವನ್ನು ಆ ದ್ರಾವಣದಲ್ಲಿ 30 ನಿಮಿಷ ನೆನೆಸಿಟ್ಟರೆ ರೋಗವನ್ನು ನಿಯಂತ್ರಿಸಬಹುದಾಗಿದೆ. ಭಾರತೀಯ ಸಾಂಬಾರು ಬೆಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಈ ರೋಗದ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಾರೆ. ಅದರ ಪೂರ್ತಿ ವಿವರ ಅದರ ಜಾಲತಾಣದಲ್ಲಿ ಲಭ್ಯವಿದೆ ಎನ್ನುತ್ತಾರೆ.
ಅತಿಯಾದ ತೇವಾಂಶ ಈ ರೋಗ ಹರಡಲು ಕಾರಣ. ಈ ಬಾರಿ ಮಳೆ ಹೆಚ್ಚಾಗಿದೆ. ರೋಗವು ಕಡಿಮೆ ಅವಧಿಯಲ್ಲಿ ವ್ಯಾಪಿಸಲು ಇದು ಕಾರಣವಾಗಿದೆ– ಎಂ.ವೈ.ಉಲ್ಲಾಸ್ ಕೆಳದಿ ಶಿವಪ್ಪ ನಾಯಕ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ
ಔಷಧಿ ಸಿಂಪಡಿಸೋಣ ಎಂದರೆ ಬಿಟ್ಟೂಬಿಡದೆ ಸುರಿಯುತ್ತಿರುವ ಮಳೆ ಅವಕಾಶ ಕೊಡುತ್ತಿಲ್ಲ. ಈ ಹಂಗಾಮಿನ ಶುಂಠಿ ಬೆಳೆ ಕೈತಪ್ಪಿದಂತೆ ತೋರುತ್ತಿದೆ– ಎಚ್.ಸಿ. ಸತೀಶ್‌ಚಂದ್ರ, ಶುಂಠಿ ಬೆಳೆಗಾರ ಆನಂದಪುರ
ಮೇ ತಿಂಗಳಲ್ಲಿ ಮಳೆ ಹೆಚ್ಚು ಸುರಿದ ಕಾರಣ ಶುಂಠಿಗೆ ಶಿಲೀಂಧ್ರ ಬಾಧೆ ವ್ಯಾಪಕಗೊಂಡಿದೆ. ಮಳೆ ಕಡಿಮೆಯಾದ ಮೇಲೆ ಔಷಧಿ ಸಿಂಪಡಿಸಲು ಬೆಳೆಗಾರರಿಗೆ ಹೇಳಿದ್ದೇವೆ– ಜಿ.ಸವಿತಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.