ಶಿವಮೊಗ್ಗದ ಎನ್.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ವೇದಿಕೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರಹದ ‘ಚಿಗುರುದನಿ’ ಪತ್ರಿಕೆಯನ್ನು ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸಮನಿ ಬಿಡುಗಡೆ ಮಾಡಿದರು.
ಶಿವಮೊಗ್ಗ: ಸಾಹಿತ್ಯ ಮನಸ್ಸುಗಳ ಅರಳಿಸಬೇಕು ಹೊರತು, ಕೆರಳಿಸಬಾರದು ಎಂದು ಉಪನ್ಯಾಸಕ ಜಿ.ಕೆ. ಸತೀಶ್ ಹೇಳಿದರು.
ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನಲ್ಲಿ ಶನಿವಾರ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಹೊಸತನಕ್ಕೆ ತೆರೆದುಕೊಳ್ಳಬೇಕಿದೆ. ನಮ್ಮ ಮುಂದೆ ಎಐ ನಂತಹ ಅವಿಷ್ಕಾರಗಳೇ ಬರುತ್ತಿವೆ. ತಂತ್ರಜ್ಞಾನದ ಅನೇಕ ಬದಲಾವಣೆ ಹಲವು ಬಾರಿ ನಮ್ಮ ಸೃಜನ ಶೀಲತೆ ಆಕ್ರಮಿಸಿಕೊಳ್ಳುತ್ತಿವೆ. ಇದರಿಂದ ಆಚೆ ಬರಬೇಕೆಂದರೆ ಓದುವುದು ಕೂಡ ಮುಖ್ಯ. ಇದರ ಜೊತೆಗೆ ಬರವಣಿಗೆಯೂ ಬಹಳ ಮುಖ್ಯ ಎಂದರು.
ಇದು ವೇಗದ ಯುಗ, ಕಾಯುವಿಕೆಯ ತಾಳ್ಮೆ ನಮಗಿಲ್ಲವಾಗಿದೆ. ಆದರೆ ಕಾಯುವಿಕೆಯಿಂದ ಮಾಗುವಿಕೆ ಬರುತ್ತದೆ. ಹಾಗಾಗಿ ಅವಸರದ ಓಟ ಬಿಟ್ಟು ತಾಳ್ಮೆ ಕಲಿಯಬೇಕಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳ ಕೈಬರಹದ ಪತ್ರಿಕೆ ‘ಚಿಗುರುದನಿ’ ಬಿಡುಗಡೆ ಮಾಡಿದ ಪತ್ರಕರ್ತ ದೇಶಾದ್ರಿ ಹೊಸ್ಮನೆ, ಸಾಹಿತ್ಯ ಬದುಕಿನ ಭಾಗವೇ ಆಗಿದೆ. ಮನಸ್ಸಿಗೆ ಉಂಟಾದ ಅನೇಕ ಗಾಯಗಳನ್ನು ಮರೆಸುವ ಶಕ್ತಿ ಸಾಹಿತ್ಯಕ್ಕಿದೆ. ಹಾಗಾಗಿ ಐಟಿಬಿಟಿ ವಿದ್ಯಾರ್ಥಿಗಳು, ಕಾಮರ್ಸ್ ವಿದ್ಯಾರ್ಥಿಗಳು ಸಾಹಿತ್ಯದ ಮೊರೆ ಹೋಗಬೇಕಿದೆ. ಅದು ಒಟ್ಟಾರೆ ಶೈಕ್ಷಣಿಕ ಪ್ರಗತಿಗೆ ಸಹಾಯಕವಾಗುತ್ತದೆ ಎಂದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಮಾತನಾಡಿ, ಈ ಕಾಲೇಜಿನಲ್ಲಿ ಸಾಹಿತ್ಯದ ವಾತಾವರಣ ಕಂಡು ತುಂಬಾ ಖುಷಿಯಾಗಿದೆ. ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಅವು ಇಂತಹ ಕಾರ್ಯಕ್ರಮಗಳ ಮೂಲಕ ಹೊರಬರಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಬಿ.ಎಸ್. ಶಿವಪ್ರಸಾದ್ ಮಾತನಾಡಿ, ಪುಸ್ತಕಗಳು ವಿದ್ಯಾರ್ಥಿಗಳಿಗೆ ಗೆಳೆಯರಂತೆ. ಓದು ಸಂಸ್ಕೃತಿಯ ಜತೆಗೆ ಸಂಸ್ಕಾರ ಕೂಡ ನೀಡುತ್ತದೆ. ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ ಎಂದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಸರ್ಜಾಶಂಕರ್ ಹರಳೀಮಠ ಪ್ರಸ್ತಾವಿಕವಾಗಿ ಮಾತನಾಡಿ, ಸಾಹಿತ್ಯ ಬದುಕಿನ ಭಾಗವಾಗಿದೆ. ಭಾವನೆಗಳನ್ನು ಅರಳಿಸುವ ಮನುಷ್ಯತ್ವವನ್ನು ಒಟ್ಡುಗೂಡಿಸುವ ಜ್ಞಾನದ ಅರಿವನ್ನು ವಿಸ್ತರಿಸುವ ಕೆಲಸ ಒಳ್ಳೆಯ ಸಾಹಿತ್ಯ ಮಾಡುತ್ತಲೇ ಇರುತ್ತದೆ ಎಂದರು.
ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು ಹಾಗೂ ಕರ್ನಾಟಕ ಮಾಧ್ಯಮ
ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮೂರ್ತಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಆರ್.ಸುಜಾತಾ, ಅಭಿಷೇಕ್ ಕೆ.ಎನ್, ಆಕಾಶ್ ಇದ್ದರು. ವಿದ್ಯಾರ್ಥಿನಿ ಶ್ರಾವ್ಯ ಪ್ರಾರ್ಥಿಸಿದರು. ಅಕ್ಷತಾ ಸ್ವಾಗತಿಸಿದರು. ಸ್ಪಂದನಾ ವಂದಿಸಿ, ಸಹನಾ ನಿರೂಪಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.