ADVERTISEMENT

ಡಿಕೆಶಿ ನಿತ್ಯ ಗೋಮೂತ್ರದಲ್ಲಿ ಸ್ನಾನ ಮಾಡಲಿ: ಡಾ.ಅಶ್ವತ್ಥನಾರಾಯಣ

ಭ್ರಷ್ಟಾಚಾರ: ಕೆಪಿಸಿಸಿ ಅಧ್ಯಕ್ಷರ ಹೇಳಿಕೆಗೆ ಸಚಿವ ಡಾ.ಅಶ್ವತ್ಥನಾರಾಯಣ ತಿರುಗೇಟು

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 21:25 IST
Last Updated 25 ಜನವರಿ 2023, 21:25 IST
   

ಶಿವಮೊಗ್ಗ: ‘ಡಿ.ಕೆ. ಶಿವಕುಮಾರ್ ಎಂದರೆ ಭ್ರಷ್ಟಾಚಾರದ ಸಾಕಾರರೂಪ. ಭ್ರಷ್ಟತೆ ಅವರ ಕಣಕಣದಲ್ಲೂ ಅಡಗಿದೆ. ಹೀಗಾಗಿ ಅವರೇ ಪ್ರತಿ ದಿನ ‌ಗಂಗಾಜಲ, ಗೋ ಮೂತ್ರ ಬಳಸಿ ಸ್ನಾನ ಮಾಡಿ ಶುದ್ಧಿಯಾಗಲಿ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ತಿರುಗೇಟು ನೀಡಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ಕೂಪವಾದ ವಿಧಾನಸೌಧವನ್ನು ಗಂಗಾಜಲ, ಗೋಮೂತ್ರದಿಂದ ಶುದ್ಧೀಕರಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ಬಗ್ಗೆ ಬುಧವಾರ ಇಲ್ಲಿ ಮಾಧ್ಯಮದವರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

‘ಭ್ರಷ್ಟಾಚಾರದ ಬಗ್ಗೆ ಶಿವಕುಮಾರ್ ಮಾತನಾಡುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ಸಮಾಜ ದಲ್ಲಿ ಭ್ರಷ್ಟಾಚಾರ ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ. ಸರ್ಕಾರ ₹ 100 ಕೊಟ್ಟರೆ ಅದು ಫಲಾನುಭವಿಗೆ ತಲುಪುವ ವೇಳೆ ₹ 15 ಆಗಿರುತ್ತದೆ ಎಂದು ಅವರದ್ದೇ ಪಕ್ಷದ ಪ್ರಧಾನಿ ಹೇಳಿದ್ದರು. ಸರ್ಕಾರದ ಅನುದಾನವನ್ನು ಮಧ್ಯವರ್ತಿಗಳ ಕಾಟವಿಲ್ಲದೇ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ತಲುಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದರು.

ADVERTISEMENT

‘ಹೈಕೋರ್ಟ್‌ ನ್ಯಾಯಮೂರ್ತಿಯಿಂದ ತನಿಖೆ ನಡೆಸಿ’

ಬೆಂಗಳೂರು: ‘ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಿಂದ ಪಾರು ಮಾಡಲು ಸಿಐಡಿ ಡಿವೈಎಸ್‌ಪಿ ಶಂಕರ
ಗೌಡ ಪಾಟೀಲ ಅವರಿಗೆ ₹76 ಲಕ್ಷ ನೀಡಿರುವುದಾಗಿ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ನೀಡಿರುವ ಹೇಳಿಕೆಯ ಕುರಿತು ಹೈಕೋರ್ಟ್‌ ನ್ಯಾಯ ಮೂರ್ತಿಯಿಂದ ತನಿಖೆ ನಡೆಸಬೇಕು’ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಕರಣ ಮುಚ್ಚಿ ಹಾಕಲು ಲಂಚ ಕೊಟ್ಟಿರುವುದಾಗಿ ಆರ್.ಡಿ. ಪಾಟೀಲ ಲೋಕಾಯುಕ್ತಕ್ಕೆ ಪತ್ರ ಬರೆದಿದ್ದಾರೆ. ತನಿಖಾಧಿಕಾರಿ ₹ 3 ಕೋಟಿ ಲಂಚ ಕೇಳಿದ್ದರೆಂದೂ ಆರೋಪಿಸಿದ್ದಾರೆ’ ಎಂದರು.

‘ಪಿಎಸ್ಐ ನೇಮಕಾತಿ ಪ್ರಕರಣ ವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ’ ಎಂದೂ ದೂರಿದರು.

‘ಕರ್ನಾಟಕದಲ್ಲಿ ಲೋಕೋಪ ಯೋಗಿ ಇಲಾಖೆ ಎಂಜಿನಿಯರ್‌ಗಳು, ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಸೇರಿ ಎಲ್ಲ ಹುದ್ದೆಗಳು ಮಾರಾಟಕ್ಕಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.