ADVERTISEMENT

ಸರ್ಕಾರಿ ನೌಕರರ ಕ್ರೀಡಾಕೂಟ: ಶಿವಮೊಗ್ಗದಲ್ಲಿ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 14 ಮೇ 2025, 16:28 IST
Last Updated 14 ಮೇ 2025, 16:28 IST
ಶಿವಮೊಗ್ಗದಲ್ಲಿ ಬುಧವಾರ ಎನ್‌ಇಎಸ್ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಅಡುಗೆ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‌ಕುಮಾರ್ ಹಾಗೂ ತಂಡದವರೊಂದಿಗೆ ಚರ್ಚಿಸಿದರು
ಶಿವಮೊಗ್ಗದಲ್ಲಿ ಬುಧವಾರ ಎನ್‌ಇಎಸ್ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದ ಅಡುಗೆ ವ್ಯವಸ್ಥೆಯ ಸಿದ್ಧತೆಯ ಬಗ್ಗೆ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಜಿಲ್ಲಾ ಘಟಕದ ಅಧ್ಯಕ್ಷ ಮೋಹನ್‌ಕುಮಾರ್ ಹಾಗೂ ತಂಡದವರೊಂದಿಗೆ ಚರ್ಚಿಸಿದರು   

ಶಿವಮೊಗ್ಗ: ಮೇ 18ರಿಂದ 20ರವರೆಗೆ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸಿದ್ಧತೆ ಬಿರುಸುಗೊಂಡಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಶಿವಮೊಗ್ಗದಲ್ಲಿಯೇ ಬೀಡುಬಿಟ್ಟಿದ್ದು, ಸರ್ಕಾರಿ ನೌಕರರ ಜಿಲ್ಲಾ ಸಂಘಟನೆಯ ಜೊತೆ ಸೇರಿ ಸುಮಾರು 15 ಸಾವಿರ ನೌಕರರು ಪಾಲ್ಗೊಳ್ಳುವ ಈ ಕೂಟದ ಯಶಸ್ಸಿಗೆ ಕೈ ಜೋಡಿಸಿದ್ದಾರೆ. ಸಿದ್ಧತಾ ಕಾರ್ಯಗಳ ಮೇಲುಸ್ತುವಾರಿ ನಡೆಸಿದ್ದಾರೆ.

ಸಿಎಂ ಪಾಲ್ಗೊಳ್ಳುವುದು ಖಚಿತ: 

ADVERTISEMENT

ಮೇ 18ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದೆ. ಸಿಎಂ ಪಾಲ್ಗೊಳ್ಳುವುದು ಖಚಿತಪಟ್ಟಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಶಿವಮೊಗ್ಗ ಶಾಸಕ ಎಸ್‌.ಎನ್.ಚನ್ನಬಸಪ್ಪ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಕ್ರೀಡಾಕೂಟವನ್ನು ಶಿವಮೊಗ್ಗದ ನೆಹರೂ ಕ್ರೀಡಾಂಗಣ, ಜೆಎನ್‌ಎನ್‌ಸಿಇ ಮೈದಾನ ಹಾಗೂ ವಿವಿಧ ಒಳಾಂಗಣ ಕಾಂಪ್ಲೆಕ್ಸ್‌ಗಳಲ್ಲಿ, ಸಾಂಸ್ಕೃತಿಕ ಸ್ಪರ್ಧೆಗಳನ್ನು ಕುವೆಂಪು ರಂಗಮಂದಿರ ಹಾಗೂ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗುತ್ತಿದೆ. ಕ್ರೀಡೆ ವೈಯಕ್ತಿಕ ವಿಭಾಗದಲ್ಲಿ 97, ಗುಂಪು 16, ಸಾಂಸ್ಕೃತಿಕ ಸ್ಪರ್ಧೆ ವೈಯಕ್ತಿಕ ವಿಭಾಗದಲ್ಲಿ 15 ಹಾಗೂ ಗುಂಪು ವಿಭಾಗದಲ್ಲಿ 16 ಸ್ಪರ್ಧೆಗಳು ನಡೆಯಲಿವೆ. 

ಸಾಂದರ್ಭಿಕ ರಜೆ ಸೌಲಭ್ಯ:

ಕ್ರೀಡಾಕೂಟದಲ್ಲಿ ಭಾಗವಹಿಸುವ ನೌಕರರಿಗೆ ಸಾಂದರ್ಭಿಕ ರಜೆ ಸೌಲಭ್ಯ ಸರ್ಕಾರ ಮಂಜೂರು ಮಾಡಿದೆ. ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೂ ಊಟೋಪಚಾರ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ. ವಿಶೇಷವೆಂದರೆ ಈ ಬಾರಿ ಕಟ್ಟಿಗೆ ಒಲೆ ಬಳಸಿ ರುಚಿಕರವಾದ ಅಡುಗೆ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.

ಕ್ರೀಡಾಪಟುಗಳು ಮೂರು ದಿನ ತಂಗಲು ಕ್ರೀಡಾ ಹಾಸ್ಟೆಲ್ ಸೇರಿದಂತೆ ಬೇರೆ ಬೇರೆ ಕಡೆ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಅವರು ಉಳಿದುಕೊಂಡ ಸ್ಥಳದಿಂದ ಕ್ರೀಡಾಂಗಣಕ್ಕೆ ಕರೆದೊಯ್ಯಲು ಹಾಗೂ ವಾಪಸ್ ತಂದು ಬಿಡಲು 30 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.

ಉದ್ಘಾಟನೆಯ ದಿನ ಸಂಜೆ 7 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಕಂಬದ ರಂಗಯ್ಯ ತಂಡದವರಿಂದ ಗಾನಸುಧೆ-ಸಂಗೀತ ಸಂಜೆ ಹಾಗೂ ಮೇ 19ರಂದು ಸಂಜೆ 6 ಗಂಟೆಗೆ ಜಾನಪದ ಕಲಾವಿದರಿಂದ ಜನಪದ ದಿಬ್ಬಣ ಕಾರ್ಯಕ್ರಮ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.