
ಮಕ್ಕಳು
ಶಿಕಾರಿಪುರ: ಹಳಿಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ ಜ.11ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಲಹಾ ಸಮಿತಿ ಅಧ್ಯಕ್ಷ ಕೆ.ಜಿ.ವಸಂತಗೌಡ ಹೇಳಿದರು.
ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
‘ಶೈಕ್ಷಣಿಕ ಕ್ಷೇತ್ರದ ಸ್ಪರ್ಧೆಯಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬರುತ್ತಿರುವ ಈ ದಿನಗಳಲ್ಲಿ ಸರ್ಕಾರಿ ಶಾಲೆಯೊಂದು ಶತಮಾನೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಬಾಲಕಿಯರಿಗಾಗಿ ಬ್ರಿಟೀಷ್ ಸರ್ಕಾರ 1908ರಲ್ಲಿ ಆರಂಭಿಸಿದ ಈ ಶಾಲೆಗೆ 117 ವರ್ಷವಾಗಿದೆ. ಶಾಲೆ ನಿರ್ಮಾಣದ ದಾಖಲೆ ಈಚೆಗೆ ಲಭ್ಯವಾಗಿರುವ ಕಾರಣಕ್ಕೆ ಆಚರಣೆ ತಡವಾಗಿದೆ. ಆಚರಣೆ ನೆಪದಲ್ಲಿ ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಭರದಿಂದ ಸಾಗಿದೆ’ ಎಂದು ತಿಳಿಸಿದರು.
‘ಶಾಲೆಯ ಹಿಂದಿನ ಶಿಕ್ಷಕರ ಪುತ್ರ ಎಂ.ಪಿ.ಕುಮಾರ್ ಹೊಸದಾಗಿ ಅಡುಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ. ಹಳೆ ವಿದ್ಯಾರ್ಥಿಗಳು, ಶಿಕ್ಷಕ ಎಸ್.ಆರ್.ಕೃಷ್ಣಪ್ಪ ಪುತ್ರಿಯರು ₹50 ಸಾವಿರ ಮೌಲ್ಯದ ಪರಿಕರ, ಕಾಶೀಬಾಯಿ ಸೇರಿದಂತೆ ಹಲವರು ದೇಣಿಗೆ ನೀಡಿದ್ದಾರೆ’ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಪುರಸಭೆ ಮೂಲಕ ಕೊಠಡಿ ನಿರ್ಮಾಣ ಸೇರಿ ಹಲವು ಕಾಮಗಾರಿ ನಡೆಸುವುದಕ್ಕೆ ಸೂಚಿಸಿದ್ದಾರೆ. ಶತಮಾನೋತ್ಸವ ಸಮಿತಿ ಸದಸ್ಯರೆಲ್ಲರೂ ವೈಯಕ್ತಿಕವಾಗಿ ಹಣ ನೀಡುವ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದು ಹೇಳಿದರು.
ಸಚಿವ ಮಧು ಬಂಗಾರಪ್ಪ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಶಾಂತವೀರಪ್ಪಗೌಡ ಸೇರಿದಂತೆ ರಾಜಕೀಯ ಮುಖಂಡರು, ಶಾಲೆಯ ಹಳೆಯ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಂಗೀತಾ ಕುಮಾರನಾಯ್ಕ, ಶತಮಾನೋತ್ಸವ ಸಮಿತಿಯ ಮಂಜುನಾಥ್, ರಾಜಲಕ್ಷ್ಮಿ, ಮಂಜುಸಿಂಗ್, ಎಂ.ಬಿ.ಚನ್ನವೀರಪ್ಪ, ಸುರೇಂದ್ರಗೌಡ, ಹರಿಶ್‌ಚಂದ್ರ, ಮಂಜಣ್ಣ, ಶಿಕ್ಷಕಿ ಲಕ್ಷ್ಮಿ ಸುಣಗಾರ್, ದೀಪು ದೀಕ್ಷಿತ್, ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.