ADVERTISEMENT

ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನ: ಗೌರಿ ಹುಣ್ಣಿಮೆಯ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 7:03 IST
Last Updated 6 ನವೆಂಬರ್ 2025, 7:03 IST
ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ಗೌರಿ ಹುಣ್ಣಿಮೆ ಅಂಗವಾಗಿ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಸಂಭ್ರಮದಿಂದ ನಡೆಯಿತು 
ಸೊರಬ ತಾಲ್ಲೂಕಿನ ಚಂದ್ರಗುತ್ತಿಯಲ್ಲಿ ಗೌರಿ ಹುಣ್ಣಿಮೆ ಅಂಗವಾಗಿ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವ ಮೆರವಣಿಗೆ ಸಂಭ್ರಮದಿಂದ ನಡೆಯಿತು    

ಸೊರಬ: ತಾಲ್ಲೂಕಿನ ಪುರಾಣ ಪ್ರಸಿದ್ಧ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ನಿಮಿತ್ತ ಬುಧವಾರ ಸಾವಿರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

ತಾಲ್ಲೂಕು ಸೇರಿ ಬ್ಯಾಡಗಿ, ರಾಣೇಬೆನ್ನೂರು, ಹರಿಹರ, ಶಿಕಾರಿಪುರ, ಹಾನಗಲ್, ವಿಜಯಪುರ, ಚಿತ್ರದುರ್ಗ, ಶಿವಮೊಗ್ಗ, ಬೆಳಗಾವಿ, ಹಾವೇರಿ ಸೇರಿ ಉತ್ತರ ಕರ್ನಾಟಕ ಭಾಗಗಳಿಂದ ಸಾವಿರಾರು ಭಕ್ತರು ಬಂದು ಶಕ್ತಿ ದೇವತೆ ರೇಣುಕಾ ದೇವಿಯ ದರ್ಶನ ಪಡೆದು ಉಧೋ ಉಧೋ.. ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.

ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಬೈರಪ್ಪ ದೇವರ ಮೂರ್ತಿಗಳಿಗೆ ಮತ್ತು ತೊಟ್ಟಿಲು ಬಾವಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

ಭಕ್ತರು ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಿದರು. ಹೋಳಿಗೆ, ರೊಟ್ಟಿ, ಬುತ್ತಿಯನ್ನು ತಯಾರಿಸಿಕೊಂಡು ಬಂದು ದೇವಿಯ ಹೆಸರಿನಲ್ಲಿ ನೈವೇದ್ಯ ಅರ್ಪಿಸಿ ನಂತರ ಬಂಧು– ಬಳಗದವರ ಜೊತೆ ಸಹ ಭೋಜನ ಮಾಡುವ ದೃಶ್ಯ ಕಂಡು ಬಂದಿತು.

ಪಲ್ಲಕ್ಕಿ ಉತ್ಸವ: ಗೌರಿ ಹುಣ್ಣಿಮೆ ನಿಮಿತ್ತ ರೇಣುಕಾಂಬ ದೇವಿ ಪಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ವಾದ್ಯ ಮೇಳಗಳೊಂದಿಗೆ ಆರಂಭವಾಗಿ ಸಮೀಪದ ಹೊಳೆ ಜೋಳದಗುಡ್ಡೆ ವರದಾ ನದಿ ತೀರದ ಗೋಮಂತೇಶ್ವರ ದೇವಸ್ಥಾನಕ್ಕೆ ತೆರಳಿತು. ಅಲ್ಲಿ ಹುಣ್ಣಿಮೆಯ ವಿವಿಧ ಧಾರ್ಮಿಕ ಪೂಜಾ ಸಾಂಪ್ರದಾಯಕ ವಿಧಿ ವಿಧಾನಗಳನ್ನು ಆಚರಿಸಲಾಯಿತು. ಪುನಃ ಜೋಳದಗುಡ್ಡೆ ಮಾರ್ಗವಾಗಿ ಚಂದ್ರಗುತ್ತಿ ದೇವಸ್ಥಾನದ ನಾಲ್ಕು ಕಾಲು ಮಂಟಪದವರೆಗೆ ಪಲ್ಲಕ್ಕಿ ಉತ್ಸವ ನಡೆಯಿತು. ದಾರಿಯುದ್ದಕ್ಕೂ ಭಕ್ತರು ಹಣ್ಣು ಕಾಯಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.

ಸೊರಬ ತಾಲ್ಲೂಕಿನ ಚಂದ್ರಗುತ್ತಿ ರೇಣುಕಾಂಬ ದೇವಸ್ಥಾನಕ್ಕೆ ಗೌರಿ ಹುಣ್ಣಿಮೆ ನಿಮಿತ್ತ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.