ADVERTISEMENT

ಕೋಣಂದೂರು: ಅಜ್ಜಿ ಕೈರುಚಿಗೆ ಉದ್ಯಮ ರೂಪಕೊಟ್ಟ ಮೊಮ್ಮಕ್ಕಳು

ದುಡಿಯುವ ಮಹಿಳೆಯರ ಕೈಗೆ ಕಾಯಂ ಕೆಲಸ; ಹಪ್ಪಳ ಉದ್ಯಮದಲ್ಲಿ ಯಶ ಕಂಡ ಯುವಕರು

ಹೊಸಕೊಪ್ಪ ಶಿವು
Published 10 ಫೆಬ್ರುವರಿ 2026, 7:34 IST
Last Updated 10 ಫೆಬ್ರುವರಿ 2026, 7:34 IST
ಹಪ್ಪಳ ತಯಾರಿಯಲ್ಲಿ ನಿರತರಾದ ಮಹಿಳೆಯರು
ಹಪ್ಪಳ ತಯಾರಿಯಲ್ಲಿ ನಿರತರಾದ ಮಹಿಳೆಯರು   

ಕೋಣಂದೂರು: ಬಹುಕಾಲದಿಂದ ಮನೆಗೆ ಸೀಮಿತವಾಗಿದ್ದ ಅಜ್ಜಿ ಶಾರದಮ್ಮ ಅವರ ಕೈ ರುಚಿಯ ಹಪ್ಪಳಕ್ಕೆ ಉದ್ಯಮದ ರೂಪಕೊಟ್ಟು ಯಶಸ್ವಿಯಾಗಿದ್ದಾರೆ ಮೊಮ್ಮಕ್ಕಳಾದ ಕೋಟೆಗದ್ದೆಯ ಚೇತನ್ ಮತ್ತು ನಾಗಭೂಷಣ್.

ಪದ್ಮಾಪುರ ರುದ್ರಪ್ಪ ಗುರಪ್ಪ (ಪಿ.ಆರ್.ಜಿ.) ಎಂಬ ಹೆಸರಿನಲ್ಲಿ ಚಿಕ್ಕದಾಗಿ ಪ್ರಾರಂಭವಾದ ಹಪ್ಪಳ ಉದ್ಯಮ ಈಗ ದೇಶ– ವಿದೇಶಗಳಲ್ಲೂ ಗ್ರಾಹಕರನ್ನು ಹೊಂದುವ ಮೂಲಕ ಗಮನ ಸೆಳೆಯುತ್ತಿದೆ. ಶುಚಿ– ರುಚಿ ಅಡುಗೆಯಿಂದ ಹೆಸರಾಗಿದ್ದ ಕೋಟೆಗದ್ದೆಯ ಗುರಪ್ಪ ಅವರ ಪತ್ನಿ ಶಾರದಮ್ಮ ಮನೆ ಮಂದಿಯ ಊಟಕ್ಕೆ ಬೇಕಾಗುವ ಹಪ್ಪಳವನ್ನು ತುಂಬಾ ಅಚ್ಚುಕಟ್ಟಾಗಿ ಮಾಡಿಕೊಡುತ್ತಿದ್ದರು. ಇವರ ಹಪ್ಪಳಕ್ಕೆ ಬಂಧು– ಬಳಗದವರಲ್ಲಿ ಬಹಳ ಬೇಡಿಕೆ ಇತ್ತು.

ಡಿಪ್ಲೊಮಾ (ಮೆಕ್ಯಾನಿಕಲ್) ಮತ್ತು ಐಟಿಐ (ಮೆಕ್ಯಾನಿಕಲ್) ಓದಿರುವ ಚೇತನ್ ಹಾಗೂ ನಾಗಭೂಷಣ್ ಬೆಂಗಳೂರಿನ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಕೊರೊನಾ ಸಮಯದಲ್ಲಿ ಊರಿಗೆ ಬಂದು, ಪ್ಲಂಬಿಂಗ್, ಎಲೆಕ್ಟ್ರೀಷಿಯನ್, ವೈರಿಂಗ್, ಸಿ.ಸಿ. ಟಿ.ವಿ ಕ್ಯಾಮೆರಾ, ಡಿಶ್ ಟಿ.ವಿ. ಅಳವಡಿಕೆ ಕೆಲಸ ಮಾಡಿಕೊಂಡಿದ್ದರು.

ADVERTISEMENT

ಸಮೀಪದ ಮಲ್ಲಿಕಟ್ಟೆಯಲ್ಲಿದ್ದ ತಮ್ಮ ಜಮೀನಿನಲ್ಲಿ ಚಿಕ್ಕದಾಗಿ ಅಡಿಕೆ ಸಂಸ್ಕರಣಾ ಘಟಕವನ್ನು ಪ್ರಾರಂಭಿಸಿದರು. ಕೇವಲ 3– 4 ತಿಂಗಳುಗಳಷ್ಟೇ ಕಾರ್ಮಿಕರಿಗೆ ಕೆಲಸ ನೀಡಲು ಈ ಉದ್ಯಮದಲ್ಲಿ ಸಾಧ್ಯವಾಗುತ್ತಿತ್ತು. ವರ್ಷದ ಎಲ್ಲ ತಿಂಗಳುಗಳಲ್ಲಿಯೂ ಕೆಲಸ ಮಾಡುವ ಹಾಗೂ ಕಾರ್ಮಿಕರಿಗೆ ಕೆಲಸ ಒದಗಿಸುವ ನಿಟ್ಟಿನಲ್ಲಿ, ಅಜ್ಜಿ ಮಾಡುತ್ತಿದ್ದ ಹಪ್ಪಳವನ್ನು ಉದ್ಯಮವನ್ನಾಗಿಸಲು ತೀರ್ಮಾನಿಸಿದರು. 

ಪಿ.ಎಂ.ಎಫ್.ಎಂ.ಈ. ಯೋಜನೆಯಿಂದ ಸಾಲ ಸೌಲಭ್ಯ ಪಡೆದು ಚಿಕ್ಕದಾಗಿ ಪ್ರಾರಂಭಿಸಿದ ಹಪ್ಪಳ ಉದ್ಯಮದಲ್ಲಿ ಪ್ರಸ್ತುತ ಇಬ್ಬರು ಕಾಯಂ ಮಹಿಳಾ ಉದ್ಯೋಗಿಗಳಾದ ನಳಿನಿ, ಮಂಜುಳಾ ಸೇರಿ, ತಂದೆ ಎನ್. ರವಿ, ತಾಯಿ ಸಾವಿತ್ರಿ, ಅಜ್ಜಿ ಶಾರದಮ್ಮ, ಚೇತನ್‌ ಅವರ ಪತ್ನಿ ನಿಶ್ಚಿತಾ ಸೇರಿ ಮನೆ ಮಂದಿಯೆಲ್ಲ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸಾಂಪ್ರದಾಯಿಕ ಶೈಲಿಯಾದ ಕಟ್ಟಿಗೆ ಒಲೆಯಲ್ಲಿ ಹಪ್ಪಳವನ್ನು ಹಬೆಯಲ್ಲಿ ಬೇಯಿಸಲಾಗುತ್ತದೆ. ಖಾರ ಹಪ್ಪಳ ಹಾಗೂ ಸಾದಾ ಹಪ್ಪಳವನ್ನು ತಯಾರಿಸುತ್ತಿದ್ದಾರೆ. ಇವರ ಹಪ್ಪಳಕ್ಕೆ ಸ್ಥಳೀಯವಾಗಿ ಸಾಕಷ್ಟು ಬೇಡಿಕೆ ಇದೆ. ದೂರದ ಊರುಗಳಾದ ಬಾಗಲಕೋಟೆ, ಹಿರಿಯೂರು, ಬೆಂಗಳೂರು ಹಗೂ ಯೂರೋಪ್‌ನ ಜರ್ಮನಿಗೂ ಸರಬರಾಜು ಆಗುತ್ತಿದೆ.

ಹಪ್ಪಳಕ್ಕೆ ಬೇಕಾದ ಅಕ್ಕಿ ಹಿಟ್ಟು, ಎಳ್ಳು, ಖಾರ, ಓಂಕಾಳುಗಳನ್ನು ಬಳಸಿ ರುಚಿಯಾದ ಹಪ್ಪಳ ತಯಾರು ಮಾಡುತ್ತಾರೆ. ಹಪ್ಪಳಕ್ಕೆ ಬೇಕಾದ ಅಕ್ಕಿ ಹಿಟ್ಟನ್ನು ಸಂಸ್ಕರಿಸಿಕೊಳ್ಳಲು ವಿವಿಧ ಬಗೆಯ ಯಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ₹ 80 ಬೆಲೆಯ ಪ್ರತಿ 200 ಗ್ರಾಂ ಪ್ಯಾಕೆಟ್‌ನಲ್ಲಿ 20ರಿಂದ 22 ಹಪ್ಪಳಗಳಿರುತ್ತವೆ. ಅಂಚೆ, ಕೊರಿಯರ್ ಸೇರಿ ಡೋರ್ ಡೆಲಿವರಿಯನ್ನು ಸಹ ಕೊಡುತ್ತಾರೆ. ಮದುವೆ ಇನ್ನಿತರೆ ಶುಭ ಸಮಾರಂಭಗಳಿಗೆ ಹಪ್ಪಳವನ್ನು ಪೂರೈಸುತ್ತಾರೆ. ಅಲ್ಲದೆ ಅಕ್ಕಿ ರೊಟ್ಟಿಯನ್ನು ಸಹ ತಯಾರಿಸಿ ಮಾರುತ್ತಿದ್ದಾರೆ.

ಮೂಲತಃ ಇವರದ್ದು ಕೃಷಿಕ ಕುಟುಂಬ. ಅಡಿಕೆ ತೋಟದಲ್ಲಿ ಸಮಗ್ರ ಹಾಗೂ ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಅಳವಡಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನವನ್ನು ಕಂಡುಕೊಂಡಿದ್ದಾರೆ.

‘ಶುಚಿ– ರುಚಿಯಾದ ಹಪ್ಪಳವನ್ನು ಮಾಡಿ ಪ್ರೀತಿಯಿಂದ ಬಂಧುಮಿತ್ರರಿಗೆ ಕೊಡುತ್ತಿದ್ದೆ. ಅವರ ಬೇಡಿಕೆಯನ್ನು ಪೂರೈಸಲು ಕೆಲವೊಮ್ಮೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಮೊಮ್ಮಕ್ಕಳು ನನ್ನ ಕಲ್ಪನೆಗೆ ಸ್ಪಷ್ಟ ರೂಪ ನೀಡಿರುವುದು ಖುಷಿ ತಂದಿದೆ.
-ಶಾರದಮ್ಮ, ಕೋಟೆಗದ್ದೆ
ಯುವ ಜನರು ಕಡಿಮೆ ಸಂಬಳಕ್ಕಾಗಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ತಮ್ಮ ಗ್ರಾಮಗಳಲ್ಲಿ ಸ್ವಾವಲಂಬಿಗಳಾಗಿ ಬದುಕಲು ಅವಕಾಶ ಸಿಗಬೇಕು
-ಚೇತನ್, ಕೋಟೆಗದ್ದೆ
ರೊಟ್ಟಿ ಯಂತ್ರದೊಂದಿಗೆ ಚೇತನ್
ಹಪ್ಪಳವನ್ನು ಬಿಸಿಲಿಗೆ ಹರಡಿರುವುದು
ಮಾರಾಟಕ್ಕೆ ತಯಾರಾದ ಹಪ್ಪಳಗಳು
ವಿವಿಧ ಬಗೆಯ ಯಂತ್ರಗಳೊಂದಿಗೆ ನಾಗಭೂಷಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.